ಲೋಕಸಭೆಯಲ್ಲಿ ತಟಸ್ಥನಾಗಿರಲು ತೀರ್ಮಾನಿಸಿದ್ದೇನೆ: ಮಧು ಜಿ.ಮಾದೇಗೌಡ

| Published : Jan 19 2024, 01:48 AM IST

ಲೋಕಸಭೆಯಲ್ಲಿ ತಟಸ್ಥನಾಗಿರಲು ತೀರ್ಮಾನಿಸಿದ್ದೇನೆ: ಮಧು ಜಿ.ಮಾದೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಸುಮಲತಾ ಕಾಂಗ್ರೆಸ್‌ ಗೆ ಬರುವ ವಿಚಾರವೂ ನನಗೆ ಗೊತ್ತಿಲ್ಲ. ನಾನು ತಟಸ್ಥವಾಗಿರುವುದಕ್ಕೆ ಬೇರೆ ಬೇರೆ ಕಾರಣಗಳಿವೆ. ಅವುಗಳನ್ನು ಮುಂದಿನ ದಿನಗಳಲ್ಲಿ ನಾನು ಹೇಳುತ್ತೇನೆ. ನಾನಂತೂ ಲೋಕಸಭೆ ಚುನಾವಣೆಗೆ ಟಿಕೆಟ್‌ ಆಕಾಂಕ್ಷಿಯಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಟಸ್ಥವಾಗಿರುವುದಕ್ಕೆ ನಿರ್ಧರಿಸಿದ್ದೇನೆ ಎಂದು ವಿಧಾನಪರಿಷತ್‌ ಸದಸ್ಯ ಮಧು ಜಿ.ಮಾದೇಗೌಡ ಅಚ್ಚರಿಯ ಹೇಳಿಕೆ ನೀಡಿದರು.

ಮೊನ್ನೆಯಷ್ಟೇ ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಒಂದು ಸಭೆ ನಡೆದಿದೆ. ಆ ಸಭೆಯಲ್ಲಿ ಚುನಾವಣೆ ವಿಚಾರವಾಗಿ ನಮ್ಮಲ್ಲೇ ಸಾಕಷ್ಟು ಗೊಂದಲಗಳಿವೆ. ಅದು ಮೊದಲು ನಿವಾರಣೆಯಾಗಬೇಕು ಎಂದು ಹೇಳಿದ್ದೇನೆ. ನಾನೇ ಈ ಚುನಾವಣೆಯಲ್ಲಿ ತಟಸ್ಥವಾಗಿರಬೇಕು ಎಂದುಕೊಂಡಿದ್ದೇನೆ. ಮುಂದೇನಾಗುವುದೋ ನೋಡೋಣ ಎಂದು ನಗರದಲ್ಲಿ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

ಸುಮಲತಾ ಕಾಂಗ್ರೆಸ್‌ ಗೆ ಬರುವ ವಿಚಾರವೂ ನನಗೆ ಗೊತ್ತಿಲ್ಲ. ನಾನು ತಟಸ್ಥವಾಗಿರುವುದಕ್ಕೆ ಬೇರೆ ಬೇರೆ ಕಾರಣಗಳಿವೆ. ಅವುಗಳನ್ನು ಮುಂದಿನ ದಿನಗಳಲ್ಲಿ ನಾನು ಹೇಳುತ್ತೇನೆ. ನಾನಂತೂ ಲೋಕಸಭೆ ಚುನಾವಣೆಗೆ ಟಿಕೆಟ್‌ ಆಕಾಂಕ್ಷಿಯಲ್ಲ. ಸ್ಪರ್ಧಿಸುವ ಆಸಕ್ತಿಯೂ ಇಲ್ಲ. ನಾನೇ ತಟಸ್ಥವಾಗಿರಬೇಕೆಂದು ತೀರ್ಮಾನಿಸಿರುವಾಗ ಸ್ಪರ್ಧೆ ಎಲ್ಲಿಂದ ಬರುತ್ತದೆ ಎಂದರು.

ಅನಂತಕುಮಾರ ಹೆಗಡೆಗೆ ತಲೆ ಸರಿಯಿಲ್ಲ. ಹುಚ್ಚುಚ್ಚಾಗಿ ಮಾತನಾಡುತ್ತಾರೆ. ಚುನಾವಣೆ ಸಮಯದಲ್ಲಿ ಜನರ ಆಸಕ್ತಿಯನ್ನು ಕೆರಳಿಸಬೇಕೆಂಬುದೇ ಅವರ ಪ್ರಮುಖ ಉದ್ದೇಶ ಬಿಟ್ಟರೆ ಬೇರೇನೂ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಮಮಂದಿರದ ಉದ್ಘಾಟನೆಗೆ ಹೋಗುವಿರಾ ಎಂಬ ಪ್ರಶ್ನೆಗೆ, ನಮ್ಮೂರಿನಲ್ಲೇ ಬೇಕಾದಷ್ಟು ರಾಮ ಮಂದಿರಗಳಿವೆ. ನಮ್ಮೂರಿನ ರಾಮನನ್ನೇ ನಾವು ಪೂಜಿಸುತ್ತೇವೆ. ರಾಮಮಂದಿರದ ವಿಷಯವನ್ನು ಬಿಜೆಪಿಯವರು ರಾಜಕೀಯವಾಗಿ ಬಳಸಿಕೊಳ್ಳುತ್ತಾರೆ. ಚುನಾವಣೆ ಎದುರಾದಾಗಲೆಲ್ಲಾ ರಾಮಮಂದಿರ, ಸರ್ಜಿಕಲ್ ಸ್ಟ್ರೈಕ್‌ಗಳನ್ನು ಬಳಸಿ ಜನರ ಭಾವನೆಗಳನ್ನು ಕೆರಳಿಸುವುದೇ ಅವರ ಕೆಲಸವಾಗಿದೆ ಎಂದು ದೂಷಿಸಿದರು.