ಜಯಂತಿಗಳ ಅರ್ಥಪೂರ್ಣ ಆಚರಣೆಗೆ ನಿರ್ಧಾರ

| Published : Mar 20 2025, 01:17 AM IST

ಸಾರಾಂಶ

ಬರುವ ಏಪ್ರಿಲ್ ತಿಂಗಳಲ್ಲಿ ಹುಕ್ಕೇರಿಯಲ್ಲಿ ನಡೆಯಲಿರುವ ಡಾ.ಬಾಬು ಜಗಜೀವನರಾಮ್ ಮತ್ತು ಡಾ.ಬಿ.ಆರ್.ಅಂಬೇಡ್ಕರ್‌ ಜಯಂತಿ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಯಿತು.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಬರುವ ಏಪ್ರಿಲ್ ತಿಂಗಳಲ್ಲಿ ಹುಕ್ಕೇರಿಯಲ್ಲಿ ನಡೆಯಲಿರುವ ಡಾ.ಬಾಬು ಜಗಜೀವನರಾಮ್ ಮತ್ತು ಡಾ.ಬಿ.ಆರ್.ಅಂಬೇಡ್ಕರ್‌ ಜಯಂತಿ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಯಿತು.

ಪಟ್ಟಣದಲ್ಲಿ ಬುಧವಾರ ತಾಲೂಕು ಆಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳು ಮತ್ತು ದಲಿತ ಮುಖಂಡರ ಸಮ್ಮುಖದಲ್ಲಿ ಅಂಬೇಡ್ಕರ್‌ ಮತ್ತು ಬಾಬು ಜಗಜೀವನರಾಮ್ ಜಯಂತಿ ಸಂಭ್ರಮದಿಂದ ಆಚರಿಸುವ ಕುರಿತು ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು. ಏ.5ರಂದು ಬಾಬು ಜಗಜೀವನರಾಮ್ ಮತ್ತು ಏ.14ರಂದು ಅಂಬೇಡ್ಕರ್‌ ಜಯಂತಿ ಉತ್ಸವ ಪ್ರತಿ ವರ್ಷದಂತೆ ಈ ಸಲವೂ ವಿಜೃಂಭಣೆಯಿಂದ ಆಚರಿಸಲು ವಿವಿಧ ರೂಪುರೇಷೆಗಳನ್ನು ಸಿದ್ಧಪಡಿಸಲಾಯಿತು. ಈ ಎರಡೂ ಜಯಂತಿಗಳಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು. ಗೈರು ಹಾಜರಾಗುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ತೀರ್ಮಾಣ ಕೈಗೊಳ್ಳಲಾಯಿತು.

ತಾಲೂಕಿನ ಶಾಲೆ-ಅಂಗನವಾಡಿಗಳಲ್ಲಿ ಅಂಬೇಡ್ಕರ್‌ ಜಯಂತಿಯನ್ನು ಸಂಬಂಧಿಸಿದವರ ಉಪಸ್ಥಿತಿಯೊಂದಿಗೆ ಕಡ್ಡಾಯವಾಗಿ ಆಚರಿಸಬೇಕು. ತಾಲೂಕಿನ ಕಚೇರಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಬೇಕು. ಹುಕ್ಕೇರಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನೀಲಿ ಬಣ್ಣದ ಭಾವುಟಗಳು ಮತ್ತು ಅಲಂಕಾರಿಕ ದೀಪಗಳನ್ನು ಅಳವಡಿಸಬೇಕು. ಅಡವಿಸಿದ್ದೇಶ್ವರ ಮಠದಿಂದ ಕೋರ್ಟ್ ಸರ್ಕಲ್‌ವರೆಗೆ ಭವ್ಯ ಮೆರವಣಿಗೆ ನಡೆಸುವಂತೆ ದಲಿತ ಮುಖಂಡರು ಸಲಹೆ ಮಾಡಿದರು.

ಅಂಬೇಡ್ಕರ್‌ ಉದ್ಯಾನವನದಲ್ಲಿ ಮುಖ್ಯ ವೇದಿಕೆ ಕಾರ್ಯಕ್ರಮ ಆಯೋಜನೆ, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತ್ಯುತ್ತಮ ಸಾಧನೆಗೈದ ಎಸ್ಸಿ, ಎಸ್ಟಿ ಸಮಾಜದ ವಿದ್ಯಾರ್ಥಿಗಳ ಸನ್ಮಾನ, ಖ್ಯಾತ ಚಿಂತಕರಿಂದ ಉಪನ್ಯಾಸ, ಮೆರವಣಿಗೆಯುದ್ದಕ್ಕೂ ಮಜ್ಜಿಗೆ, ಅಂಬಲಿ ಸೇವೆ ಕಲ್ಪಿಸುವ ತೀರ್ಮಾಣ ಕೈಗೊಳ್ಳಲಾಯಿತು.

ಗ್ರೇಡ್-2 ತಹಸೀಲ್ದಾರ್‌ ಪ್ರಕಾಶ ಕಲ್ಲೋಳಿ ಅಧ್ಯಕ್ಷತೆ ವಹಿಸಿದ್ದರು. ತಾಪಂ ಇಒ ಟಿ.ಆರ್.ಮಲ್ಲಾಡದ, ಪುರಸಭೆ ಮುಖ್ಯಾಧಿಕಾರಿ ಈಶ್ವರ ಸಿದ್ನಾಳ, ಸಿಪಿಐ ಮಹಾಂತೇಶ ಬಸಾಪುರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಚ್.ಎ.ಮಾಹುತ, ಮುಖಂಡರಾದ ಮಲ್ಲಿಕಾರ್ಜುನ ರಾಶಿಂಗೆ, ಕರೆಪ್ಪ ಗುಡೆನ್ನವರ, ಬಸವರಾಜ ತಳವಾರ, ರಮೇಶ ಹುಂಜಿ, ಕೆಂಪಣ್ಣಾ ಶಿರಹಟ್ಟಿ, ಕೆ.ವೆಂಕಟೇಶ, ಅಕ್ಷಯ ವೀರಮುಖ, ಕಿರಣ ಬಾಗೇವಾಡಿ, ಶಂಕರ ಕಟ್ಟಿಮನಿ, ಶಶಿಕಾಂತ ಹೊನ್ನಳ್ಳಿ, ಸತೀಶ ದಿನ್ನಿಮನಿ, ಮಾರುತಿ ತಳವಾರ, ಸಮಾಜ ಕಲ್ಯಾಣ ಇಲಾಖೆಯ ಎಸ್.ಎಂ.ಶೆಟ್ಟೆನ್ನವರ, ಎಲ್.ಬಿ.ಮಾಲದಾರ, ರಾಜಶ್ರೀ ಪಾಟೀಲ, ಎನ್.ಬಿ.ಹೊಳೆಯಾಚೆ, ಎಂ.ಬಿ.ಕೊಟಬಾಗಿ, ಎಂ.ಬಿ.ಕಾಂಬಳೆ ಮತ್ತಿತರರು ಉಪಸ್ಥಿತರಿದ್ದರು.