ಬಿಜೆಪಿ ಮಾಜಿ ಸಚಿವರು- ಮಾಜಿ ಶಾಸಕರ ಸಭೆ : ದಾವಣಗೆರೆಯಲ್ಲಿ ಯಡಿಯೂರಪ್ಪ ಅದ್ಧೂರಿ ಜನ್ಮದಿನಕ್ಕೆ ನಿರ್ಣಯ

| Published : Dec 16 2024, 12:49 AM IST / Updated: Dec 16 2024, 12:27 PM IST

 Yediyurappa
ಬಿಜೆಪಿ ಮಾಜಿ ಸಚಿವರು- ಮಾಜಿ ಶಾಸಕರ ಸಭೆ : ದಾವಣಗೆರೆಯಲ್ಲಿ ಯಡಿಯೂರಪ್ಪ ಅದ್ಧೂರಿ ಜನ್ಮದಿನಕ್ಕೆ ನಿರ್ಣಯ
Share this Article
  • FB
  • TW
  • Linkdin
  • Email

ಸಾರಾಂಶ

ಹಾವು-ಮುಂಗುಸಿಯಂತಾದ ರಾಜ್ಯ ಬಿಜೆಪಿ ಬಣಗಳ ಮಧ್ಯೆ ಮತ್ತಷ್ಟು ತುಪ್ಪ ಸುರಿಯುವ ಹೈವೋಲ್ಟೇಜ್‌ ಸಭೆ ಅಂತಲೇ ತೀವ್ರ ಕುತೂಹಲ ಹುಟ್ಟುಹಾಕಿದ್ದ ಬಿಜೆಪಿ ಮಾಜಿ ಸಚಿವರು- ಮಾಜಿ ಶಾಸಕರ ಸಭೆ ದಾವಣಗೆರೆಯಲ್ಲಿ ನಡೆದಿದೆ. 

 ದಾವಣಗೆರೆ : ಹಾವು-ಮುಂಗುಸಿಯಂತಾದ ರಾಜ್ಯ ಬಿಜೆಪಿ ಬಣಗಳ ಮಧ್ಯೆ ಮತ್ತಷ್ಟು ತುಪ್ಪ ಸುರಿಯುವ ಹೈವೋಲ್ಟೇಜ್‌ ಸಭೆ ಅಂತಲೇ ತೀವ್ರ ಕುತೂಹಲ ಹುಟ್ಟುಹಾಕಿದ್ದ ಬಿಜೆಪಿ ಮಾಜಿ ಸಚಿವರು- ಮಾಜಿ ಶಾಸಕರ ಸಭೆ ದಾವಣಗೆರೆಯಲ್ಲಿ ನಡೆದಿದೆ.

ಅಲ್ಲದೇ, ಫೆ.27ರಂದು ಬಿ.ಎಸ್.ಯಡಿಯೂರಪ್ಪ ಜನ್ಮದಿನವನ್ನು ದಾವಣಗೆರೆಯಲ್ಲೇ ಅದ್ಧೂರಿಯಾಗಿ ಆಚರಿಸಿ, ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಬಗ್ಗೆ ಸುಧೀರ್ಘ ಚರ್ಚೆ ನಡೆಸುವ ವ್ಯಕ್ತಿಗಳಿಗಿಂತ ಪಕ್ಷವನ್ನು ಅಧಿಕಾರಕ್ಕೆ ತರುವುದು ಮುಖ್ಯವೆಂಬ ಸಂದೇಶವನ್ನೂ ಸಭೆ ರವಾನಿಸಿದೆ.

ನಗರದ ಸಾಯಿ ಇಂಟರ್ ನ್ಯಾಷನಲ್ ಹೋಟೆಲ್ ಸಭಾಂಗಣದಲ್ಲಿ ಹಿರಿಯ ನಾಯಕ, ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕರಾದ ಮಾಡಾಳು ವಿರೂಪಾಕ್ಷಪ್ಪ, ಎಸ್.ವಿ. ರಾಮಚಂದ್ರ ಇತರರ ನೇತೃತ್ವದಲ್ಲಿ ಸುದೀರ್ಘ ಚರ್ಚೆಯಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಸಚಿವ ರಮೇಶ ಜಾರಕಿಹೊಳಿ, ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ ಹೀಗೆ ಮತ್ತೊಂದು ಬಣದ ಬಗ್ಗೆ ಒಂದೇ ಒಂದು ಮಾತನ್ನೂ ಆಡದೇ, ಮತ್ತೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವ ಬಗ್ಗೆ ಒಗ್ಗಟ್ಟಿನ ಸಂದೇಶ ಸಾರಲಾಯಿತು.

ಯಡಿಯೂರಪ್ಪ ಸಮಕಾಲೀನರಾದ ಮಾಜಿ ಸಚಿವ ಎಸ್.ಎ.ರವೀಂದ್ರನಾಥ ಮಾತನಾಡಿ, ನಾವು ನಾಲ್ಕೈದು ಜನ ಈಗಾಗಲೇ ಚುನಾವಣಾ ರಾಜಕೀಯದಿಂದ ನಿವೃತ್ತರಾಗಿದ್ದರೂ, ನಾವು ಇರುವವರೆಗೂ ಪಕ್ಷಕ್ಕಾಗಿ ಕೆಲಸ ಮಾಡುವವರು. ಇಂದಿನ ಸಭೆಯಲ್ಲಿ ಪಾಲ್ಗೊಂಡಿರುವ 60 ಮಾಜಿ ಶಾಸಕರ ಪೈಕಿ ಶೇ.80-90ರಷ್ಟು ಮತ್ತೆ ಚುನಾವಣೆಯಲ್ಲಿ ಗೆಲ್ಲುವ ಸಾಮರ್ಥ್ಯ ಇರುವವರು. ಎಲ್ಲರೂ ಒಗ್ಗಟ್ಟಾಗಿ ಮತ್ತೆ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡಬೇಕು. ಮೂರು ಚುನಾವಣೆ ಸೋತಿದ್ದಕ್ಕೆ ಎದೆಗುಂದಬೇಡಿ. ಬಿಜೆಪಿಗಾಗಲೀ, ನಮಗಾಗಲೀ ಸೋಲುಗಳೇನೂ ಹೊಸದಲ್ಲ. ರಾಜ್ಯ ಬಿಜೆಪಿ ವಿಚಾರ ಇಡೀ ದೇಶಕ್ಕೆ ತಿಳಿದಿದೆ. ಹಾಗಾಗಿ, ಎಲ್ಲರೂ ಒಂದಾಗಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದರು.

ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ಈ ಹಿಂದೆ ದಾವಣಗೆರೆಯಲ್ಲಿ ಯಡಿಯೂರಪ್ಪ ಜನ್ಮದಿನ ಆಚರಿಸಿದಾಗ ಅಮಿತ್ ಶಾ ಬಂದಿದ್ದರು. ಆಗ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾದರು. ಅನಂತರ ಬಿಎಸ್‌ವೈ ಜನ್ಮದಿನಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ ಬಂದಿದ್ದರು. ಇದೀಗ 27.2.2025ರಂದು ದಾವಣಗೆರೆಯಲ್ಲಿ ಯಡಿಯೂರಪ್ಪ ಜನ್ಮದಿನ ಆಚರಿಸಿ, ಮತ್ತೆ ಬಿಜೆಪಿ ಅಧಿಕಾರಕ್ಕೆ ತರುವ ಸಂಕಲ್ಪ ನಮ್ಮ, ನಿಮ್ಮೆಲ್ಲರದಾಗಿದೆ. ಈ ನಿಟ್ಟಿನಲ್ಲಿ ನಾವು, ನೀವೆಲ್ಲರೂ ಇಂದಿನಿಂದಲೇ ಕಾರ್ಯೋನ್ಮುಖರಾಗೋಣ ಎಂದರು.

ಸಭೆಯಲ್ಲಿ ಮಾತನಾಡಿದ ಬಹುತೇಕ ಮುಖಂಡರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಏಕಾಏಕಿ ಅಧ್ಯಕ್ಷರಾಗಿಲ್ಲ. ಪಕ್ಷದಲ್ಲಿ ತಳ ಹಂತದಿಂದ ಒಬ್ಬ ಕಾರ್ಯಕರ್ತನಾಗಿ, ಯುವ ಮೋರ್ಚಾದಲ್ಲಿ, ರಾಜ್ಯ ಬಿಜೆಪಿಯಲ್ಲಿ ವಿವಿಧ ಹಂತದ ಜವಾಬ್ಧಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿ, ರಾಜ್ಯಾಧ್ಯಕ್ಷರಾಗಿದ್ದಾರೆ. ಯಡಿಯೂರಪ್ಪ ಅವರ ಮಗ ಅಂತಾ ರಾಜ್ಯಾಧ್ಯಕ್ಷರಾಗಿ ಮಾಡಿಲ್ಲ. ಕಿರಿಯ ವಯಸ್ಸಿನಲ್ಲೇ ದೊಡ್ಡ ಜವಾಬ್ದಾರಿ ಕೊಟ್ಟ ಬಗ್ಗೆ ಕೆಲವರಿಗೆ ಬೇಸರ ಇರಬಹುದು. ಆದರೆ, ವಿಜಯೇಂದ್ರ ಪಕ್ಷಕ್ಕಾಗಿ ಸಲ್ಲಿಸಿದ ಸೇವೆ, ಬದ್ಧತೆ, ಯುವ ಉತ್ಸಾಹಿತನ ನೋಡಿ ನಾಯಕತ್ವ ವಹಿಸಲಾಗಿದೆಯೆಂಬ ಅಭಿಪ್ರಾಯ ವ್ಯಕ್ತವಾಯಿತು.

ಮೋದಿ-ಸಿಂಗ್‌ಗೆ ಆಹ್ವಾನ:

ಮುಂಬರುವ ವಿಧಾನಸಭೆ ಚುನಾವಣೆವರೆಗೂ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷರಾಗಿ ಮುಂದುವರಿಸಬೇಕು. ರಾಜಕೀಯ ಪಕ್ಷಗಳು, ರಾಜಕೀಯ ನಾಯಕರಿಗೆ ಪುನರ್ಜನ್ಮ ನೀಡಿದ ಹಿನ್ನೆಲೆ, ಇತಿಹಾಸ ದಾವಣಗೆರೆಗೆ ಇದೆ. ಯಡಿಯೂರಪ್ಪ ಸಹ ಇಲ್ಲಿಯೇ ಜನ್ಮದಿನ ಆಚರಿಸಿದ ನಂತರ ಮತ್ತೊಮ್ಮೆ ಮುಖ್ಯಮಂತ್ರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಫೆ.27ರಂದು ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಸುಮಾರು 20 ಲಕ್ಷಕ್ಕೂ ಅಧಿಕ ಜನರನ್ನು ಸೇರಿಸುವ ಮೂಲಕ ಯಡಿಯೂರಪ್ಪ ಜನ್ಮದಿನ ಆಚರಿಸಲಾಗುವುದು. ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ರಾಜನಾಥ ಸಿಂಗ್‌ರನ್ನು ಆಹ್ವಾನಿಸಲು ಶೀಘ್ರವೇ ದೆಹಲಿಗೆ ತೆರಳುವ ಬಗ್ಗೆ ಚರ್ಚಿಸಲಾಯಿತು.

ಪಕ್ಷದ ಮಾಜಿ ಶಾಸಕರಾಗಿದ್ದಷ್ಟೇ ಅಲ್ಲ, ನಮ್ಮೆಲ್ಲರ ನೆಚ್ಚಿನ ನಾಯಕ ಬಿ.ಎಸ್.ಯಡಿಯೂರಪ್ಪನವರ ಅಭಿಮಾನಿಗಳಾಗಿ ದಾವಣಗೆರೆಯಲ್ಲಿ ಜನ್ಮದಿನ ಆಚರಿಸಲು ನಿರ್ಧಾರ ಮಾಡಿದ್ದೇವೆ. ಇದು ಯಾರದ್ದೇ ಶಕ್ತಿ ಪ್ರದರ್ಶನವಲ್ಲ. ಇಲ್ಲಿ ನಡೆಯುವ ಬಿಎಸ್‌ವೈ ಜನ್ಮದಿನ ಇಡೀ ಬಿಜೆಪಿ ಶಕ್ತಿ ಪ್ರದರ್ಶನವಾಗಲಿದೆ. ಮುಂದಿನ ದಿನಗಳಲ್ಲಿ ಮತ್ತೆ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದೇ ನಮ್ಮೆಲ್ಲರ ಗುರಿಯಾಗಿದೆ. ಸಭೆಗೆ ಮುನ್ನ ಬೆಳಿಗ್ಗೆಯೇ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನ, ಬಾತಿ ಗ್ರಾಮದ ಶ್ರೀ ರೇವಣಸಿದ್ದೇಶ್ವರ ಸ್ವಾಮಿ ದರ್ಶನ ಮಾಡಿ, ಸಭೆ ಮಾಡುತ್ತಿದ್ದೇವೆ. ನಮ್ಮೆಲ್ಲರ ಗುರಿ, ಉದ್ದೇಶ ಸ್ಪಷ್ಟವಾಗಿದೆ ಎಂದು ಮಾಜಿ ಶಾಸಕರು ಹೇಳಿದರು.

ಮಾಜಿ ಶಾಸಕರಾದ ಬ್ಯಾಡಗಿ ವಿರುಪಾಕ್ಷಪ್ಪ, ರಾಣೆಬೆನ್ನೂರು ಅರುಣಕುಮಾರ ಪೂಜಾರ, ಎಂ.ಬಸವರಾಜ ನಾಯ್ಕ, ವೈ.ಸಂಪಂಗಿ, ಕೊಳ್ಳೇಗಾಲ ಮಹೇಶ, ಮಾನ್ವಿ ಗಂಗಾಧರ ನಾಯ್ಕ, ಶಿವಮೊಗ್ಗ ಕುಮಾರಸ್ವಾಮಿ, ಸೀಮಾ ಮಸೂತಿ, ಮೊಳಕಾಲ್ಮೂರು ತಿಪ್ಪೇಸ್ವಾಮಿ, ಕಡೂರು ಬೆಳ್ಳಿ ಪ್ರಕಾಶ, ರಾಜಶೇಖರ ಶೀಲವಂತ, ಮಸ್ಕಿ ಪ್ರತಾಪ ಗೌಡ, ಮೈಸೂರು ನಾಗೇಂದ್ರ, ಗುಂಡ್ಲುಪೇಟೆ ನಿರಂಜನ, ಜಗದೀಶ ಮೆಟ್‌ಗುಡ್, ಸುರೇಶ ಮಾರಿಹಾಳ, ವಿಶ್ವನಾಥ ಪಟೇಲ್, ಮಾಡಾಳ ಮಲ್ಲಿಕಾರ್ಜುನ, ಬಿ.ಜಿ.ಅಜಯಕುಮಾರ, ಲೋಕಿಕೆರೆ ನಾಗರಾಜ, ಎನ್.ರಾಜಶೇಖರ ನಾಗಪ್ಪ, ಪಿ.ಸಿ.ಶ್ರೀನಿವಾಸ ಭಟ್‌, ಎನ್.ಎಚ್.ಹಾಲೇಶ, ರಾಜು ವೀರಣ್ಣ ಇತರರು ಇದ್ದರು.

 ಬಿಜೆಪಿ ಸಭೆ ನಿರ್ಣಯಗಳು - ದಾವಣಗೆರೆಯಲ್ಲಿ ಫೆ.27ರಂದು ಮಾಜಿ ಸಿಎಂ ಯಡಿಯೂರಪ್ಪ ಜನ್ಮದಿನಾಚರಣೆ

- ನರೇಂದ್ರ ಮೋದಿ, ರಾಜನಾಥ್‌ ಸಿಂಗ್‌ಗೆ ಕಾರ್ಯಕ್ರಮಕ್ಕೆ ಆಹ್ವಾನಿಸಲು ಚರ್ಚೆ - 20 ಲಕ್ಷ ಜನ ಸೇರಿಸಿ, ಬಿಎಸ್‌ವೈ ಜನ್ಮದಿನದ ಹೆಸರಲ್ಲಿ ಹೊಸ ಸಂದೇಶ ರವಾನೆ- ಮುಂದಿನ ಚುನಾವಣೆಗೂ ವಿಜಯೇಂದ್ರಗೆ ರಾಜ್ಯಾಧ್ಯಕ್ಷರಾಗಿ ಮುಂದುವರಿಸಬೇಕು- 60 ಜನ ಮಾಜಿ ಶಾಸಕರು ಮತ್ತೆ ಕ್ಷೇತ್ರದಲ್ಲಿ ಗೆಲ್ಲುವ ನಿಚ್ಚಳವಾದ ಅವಕಾಶವಿದೆ - ಇಷ್ಟೂ ಜನ ಒಗ್ಗಟ್ಟಾಗಿ ಮುಂದಿನ ಚುನಾವಣೆಯಲ್ಲಿ ಕೆಲಸ ಮಾಡುವುದಕ್ಕೆ ಸಂಕಲ್ಪ - ನಾವೆಲ್ಲಾ ಮತ್ತೆ ಗೆದ್ದು ಬರಬೇಕು, ಅದಕ್ಕಾಗಿ ವರಿಷ್ಠರ ಮುಂದೇ ಬೇಡಿಕೆ ಇಡ್ತೇವೆ- ದಾವಣಗೆರೆ ಸಭೆಯಲ್ಲಿ ಭಾಗಿಯಾಗಿದ್ದ ಮಾಜಿ ಸಚಿವ, ಮಾಜಿ ಶಾಸಕರ ಸಂಕಲ್ಪ - - - ಬಾಕ್ಸ್‌-2 * ಬೆಳಗ್ಗೆಯಿಂದ ಮಾಜಿಗಳ ಬಿಡುವಿಲ್ಲದ ಚಟುವಟಿಕೆ!- ಬೆಳ್ಳಂಬೆಳಗ್ಗೆಯೇ ವಾಕಿಂಗ್‌, ಯೋಗಾಭ್ಯಾಸ ಮಾಡಿದ ಮುಖಂಡರು

- ಅನಂತರ ಸ್ನಾನಾದಿಗಳ ಮುಗಿಸಿ ಸಾಲು ಸಾಲು ವಾಹನದಲ್ಲಿ ಟೆಂಪಲ್ ರನ್‌ - ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿಯ ದರ್ಶನ

- ಕಲಾ ತಂಡಗಳು, ನಾಸಿಕ್ ಡೋಲು, ಪಟಾಕಿ ಸಿಡಿಸಿ ಸಂಭ್ರಮಾಚರಣೆ

- ದುಗ್ಗಮ್ಮ ದೇವಿಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದ ಮಾಜಿ ಶಾಸಕರು - ಅನಂತರ ದೊಡ್ಡಬಾತಿ ಗುಡ್ಡದ ಶ್ರೀ ರೇವಣಸಿದ್ದೇಶ್ವರ ಸ್ವಾಮಿಯ ದರ್ಶನ

- ಮಾಜಿ ಶಾಸಕ ಎಸ್.ವಿ.ರಾಮಚಂದ್ರ ತೋಟದ ಮನೆಯಲ್ಲಿ ಉಪಾಹಾರ

- ಅಲ್ಲಿಂದ ನೇರವಾಗಿ ಸಾಯಿ ಇಂಟರ್ ನ್ಯಾಷನಲ್ ಹೋಟೆಲ್ ಸಭೆಗೆ ಹಾಜರು

 ಯತ್ನಾಳ್ ವಿರುದ್ಧದ ಸಭೆ: ಸೋಮಶೇಖರ ರೆಡ್ಡಿ ದಾವಣಗೆರೆ: ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ, ಬೆಳೆಸಿ, ಅಧಿಕಾರಕ್ಕೆ ತಂದಂತಹ ಬಿ.ಎಸ್.ಯಡಿಯೂರಪ್ಪ ಬಗ್ಗೆ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಗ್ಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪದೇಪದೇ ಮಾತನಾಡುತ್ತಿದ್ದಾರೆ. ನೂರಕ್ಕೆ ನೂರು ಪರ್ಸೆಂಟ್ ಇದು ಯತ್ನಾಳ್‌ರ ವಿರುದ್ಧದ ಸಭೆ ಎಂದು ಬಳ್ಳಾರಿಯ ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ ಹೇಳಿದರು.

ನಗರದಲ್ಲಿ ಬಿಜೆಪಿ ಮಾಜಿ ಶಾಸಕರು, ಮಾಜಿ ಸಚಿವರು, ಯಡಿಯೂರಪ್ಪ ಅಭಿಮಾನಿ ಮುಖಂಡರ ಸಭೆಗೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್‌ಗೆ ಮನದಟ್ಟು ಮಾಡಿಸಲು ಸಭೆ ಮಾಡುತ್ತಿದ್ದೇವೆ. ಪಕ್ಷವನ್ನು ಅದೆಷ್ಟೋ ವರ್ಷಗಳ ಕಾಲ ಕಟ್ಟಿ ಬೆಳೆಸಿದ ನಾಯಕ ಯಡಿಯೂರಪ್ಪ. ಅಂತಹವರ ವಿರುದ್ಧ ಯತ್ನಾಳ್ ಮಾತನಾಡುತ್ತಿರುವುದು ತಪ್ಪು ಎಂಬುದನ್ನು ಹೇಳಲು ಈ ಸಭೆ. ಸಭೆ ಬಳಿಕ ನಾವೆಲ್ಲರೂ ದೆಹಲಿಗೂ ಹೋಗುವವರಿದ್ದೇವೆ ಎಂದು ಹೇಳಿದರು.

ರಾಜಕೀಯ ಮಾಡಲು ಸಭೆ ಸೇರಿಲ್ಲ: ರೇಣುಕಾಚಾರ್ಯ ದಾವಣಗೆರೆ: ರಾಜ್ಯದ ವಿವಿಧ ಜಿಲ್ಲೆಗಳ 60 ಮಾಜಿ ಶಾಸಕರ ತಂಡ ನಮ್ಮ ಕಡೆ ಇದ್ದು, ನಿನ್ನೆಯಿಂದ ಎರಡು ದಿನಗಳ ಕಾಲ ದಾವಣಗೆರೆಯಲ್ಲಿ ನಡೆದ ಸಭೆಯಲ್ಲಿ 55 ಮಾಜಿ ಶಾಸಕರು, ಮಾಜಿ ಸಚಿವರು ಪಾಲ್ಗೊಂಡಿದ್ದೇವೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಎರಡು ದಿನಗಳ ದಾವಣಗೆರೆ ಸಭೆಯಲ್ಲಿ 55 ಮಾಜಿ ಸಚಿವರು, ಮಾಜಿ ಶಾಸಕರು ಸೇರಿದ್ದೇವೆ. ನಮ್ಮ ಕಡೆ 60 ಮಾಜಿ ಶಾಸಕ ತಂಡವಿದ್ದು, ನಾವ್ಯಾರೂ ರಾಜಕೀಯ ಮಾಡಲು ಇಲ್ಲಿ ಸಭೆ ಸೇರಿಲ್ಲ ಎಂದರು.

ಯಡಿಯೂರಪ್ಪನವರ ಅಭಿಮಾನಿ ಬಳಗದ ನಾವಲ್ಲರೂ ಇಲ್ಲಿ ಸೇರಿದ್ದೇವೆ. ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಉತ್ತಮ ಕೆಲಸ ಮಾಡುತ್ತಿದ್ದಾರೆ. ಯಡಿಯೂರಪ್ಪನವರ ಜನ್ಮದಿನವನ್ನು ಫೆ.27ರಂದು ಇಲ್ಲಿ ನಡೆಸಲು ನಿರ್ಧರಿಸಿದ್ದು, ಈ ಮೂಲಕ ಪಕ್ಷದ ಮುಖಂಡರು, ಕಾರ್ಯಕರ್ತರು ಒಟ್ಟು ಗೂಡಬೇಕೆಂಬ ಸದುದ್ದೇಶದಿಂದ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ. ಈ ಮೂಲಕ ರಾಜ್ಯಕ್ಕೂ ಸಂದೇಶ ನೀಡುವುದು ನಮ್ಮ ಉದ್ದೇಶ ಎಂದು ತಿಳಿಸಿದರು.

60 ಮಾಜಿ ಶಾಸಕರ ಭವಿಷ್ಯದ ದೃಷ್ಟಿಯಿಂದ ಸಭೆ: ಕಟ್ಟಾ ದಾವಣಗೆರೆ: ನಾವ್ಯಾರೂ ಬಿ.ವೈ.ವಿಜಯೇಂದ್ರ ಪರವಾಗಲೀ ಅಥವಾ ಬೇರೆ ಯಾರ ವಿರುದ್ಧವಾಗಲೀ ಸಭೆ ಮಾಡುತ್ತಿಲ್ಲ. ನಾವು 60 ಜನ ಮಾಜಿ ಶಾಸಕರು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವಂತಹವರು. ನಮ್ಮ ಭವಿಷ್ಯದ ದೃಷ್ಟಿಯಿಂದ ಸಭೆ ಮಾಡುತ್ತಿದ್ದೇವಷ್ಟೇ ಎಂದು ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹೇಳಿದರು.

ತಾಲೂಕಿನ ದೊಡ್ಡಬಾತಿ ಗ್ರಾಮದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು 60 ಜನರೂ ಒಂದು ಕಡೆ ಸೇರಿ, ಮುಂದಿನ ಚುನಾವಣೆ ಬಗ್ಗೆ, ಪಕ್ಷ ಸಂಘಟನೆಯ ಬಗ್ಗೆ ಚರ್ಚಿಸುತ್ತಿದ್ದೇವೆ. ಪಕ್ಷ ಸಂಘಟನೆ, ಮತ್ತೆ ಬಿಜೆಪಿ ಅಧಿಕಾರಕ್ಕೆ ತರುವ ಬಗ್ಗೆ ಚರ್ಚಿಸುತ್ತೇವೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರ ಸ್ಥಾನಕ್ಕೆ ಯಾವುದೇ ತೊಂದರೆ ಇಲ್ಲ. ಅಲ್ಲಿ ಇಲ್ಲಿ ಸರಿದಾಡುತ್ತದೆ. ಆದರೆ, ಮತ್ತೆ ಅಲ್ಲಿಗೆ ಬರುತ್ತದೆ. ಬಸನಗೌಡ ಪಾಟೀಲ್ ಯತ್ನಾಳ್‌ ಬಗ್ಗೆ ಮಾತನಾಡುವುದಿಲ್ಲ. ಈಗಾಗಲೇ ಪಕ್ಷದ ವರಿಷ್ಠರು ಯತ್ನಾಳ್‌ರಿಗೆ ನೋಟಿಸ್ ನೀಡಿದ್ದಾರೆ. ಯತ್ನಾಳ್ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.