ಸಾರಾಂಶ
ತೀರ್ಥಹಳ್ಳಿ: ತೀರ್ಥಹಳ್ಳಿಯ ಶ್ರೀ ರಾಮೇಶ್ವರ ದೇವರ ದಸರಾ ಮಹೋತ್ಸವವನ್ನು 15.60 ಲಕ್ಷ ರು. ವೆಚ್ಚದಲ್ಲಿ ಅತ್ಯಂತ ಅದ್ಧೂರಿಯಾಗಿ ಆಚರಿಸಲು ಸೋಮವಾರ ಪಟ್ಟಣದ ಗೋಪಾಲಗೌಡ ರಂಗಮಂದಿರದಲ್ಲಿ ಶಾಸಕ ಆರಗ ಜ್ಞಾನೇಂದ್ರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.ಈ ವೇಳೆ ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ, ಇಲ್ಲಿ ನಡೆಯುವ ದಸರಾ ಉತ್ಸವ ಮತ್ತು ರಾಮೇಶ್ವರ ದೇವರ ತೆಪ್ಪೋತ್ಸವ ನಾಡಿನಲ್ಲಿ ಮನೆ ಮಾತಾಗಿದೆ. ಈ ಎರಡೂ ಆಚರಣೆಗಳನ್ನು ನಾವುಗಳು ಭಿನ್ನ ಅಭಿಪ್ರಾಯಕ್ಕೆ ಅವಕಾಶವಾಗದಂತೆ ಆಚರಿಸಬೇಕು. ದಸರಾ ಉತ್ಸವ ಸಮಿತಿಯನ್ನು ಪಕ್ಷಭೇದವಿಲ್ಲದೇ ಮುಖಂಡರ ಅಭಿಪ್ರಾಯದಂತೆ ಒಮ್ಮತದಿಂದ ರಚನೆ ಮಾಡಲಾಗುವುದು. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.ಎಂಎಡಿಬಿ ಅಧ್ಯಕ್ಷ್ಷ ಆರ್.ಎಂ.ಮಂಜುನಾಥಗೌಡ ಹಾಗೂ ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಮಾತನಾಡಿ, ನಾಲ್ಕು ದಶಕಗಳಿಂದ ಅತ್ಯಂತ ಸೌಹಾರ್ದಯುತವಾಗಿ ನಡೆದು ಬಂದಿರುವ ಈ ಕಾರ್ಯಕ್ರಮವನ್ನು ಎಲ್ಲರೂ ಒಂದಾಗಿ ಯಶಸ್ವಿಗೊಳಿಸೋಣ ಎಂದರು.ದಸರಾ ಉತ್ಸವ ಸಮಿತಿಯ ನೇತೃತ್ವವನ್ನು ಯಾರು ವಹಿಸಬೇಕೆಂಬ ವಿಚಾರದಲ್ಲಿ ಉಂಟಾಗಿದ್ದ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಸೋಮವಾರ ನಡೆದ ಸಭೆಯ ಬಗ್ಗೆ ಸಾರ್ವಜನಿಕರಲ್ಲಿ ಕುತೂಹಲ ಉಂಟಾಗಿತ್ತು. ಹೀಗಾಗಿ ಗೋಪಾಲಗೌಡ ರಂಗಮಂದಿರದಲ್ಲಿ ನಡೆದ ಸಭೆಗೆ ನಿರೀಕ್ಷೆಗೂ ಮೀರಿ ಜನರು ಸೇರಿದ್ದರು.ವೇದಿಕೆಯಲ್ಲಿ ತಹಸೀಲ್ದಾರ್ ಎಸ್.ರಂಜಿತ್, ರಾಮೇಶ್ವರ ದೇವಸ್ಥಾನ ಸಮಿತಿಯ ಮುಖ್ಯಸ್ಥ ಡಿ.ಎಸ್.ವಿಶ್ವನಾಥ ಶೆಟ್ಟಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಾಬಳ ಶಚ್ಚೀಂದ್ರ ಹೆಗ್ಡೆ, ತಾಪಂ ಕಾರ್ಯನಿರ್ವಹಣಾಧಿಕಾರಿ ಎಂ.ಶೈಲಾ ಹಾಗೂ ಪಪಂ ಸಿಒ ಡಿ.ನಾಗರಾಜ್ ಇದ್ದರು.