ಕಾರ್ಯಕ್ರಮದ ನಂತರ ಭುವನೇಶ್ವರಿದೇವಿ ಭಾವಚಿತ್ರ ಹಾಗೂ ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳನ್ನೊಳಗೊಂಡ ಭವ್ಯ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ.
ಬಳ್ಳಾರಿ: ನಾಡಹಬ್ಬ ಕನ್ನಡ ರಾಜ್ಯೋತ್ಸವವನ್ನು ಜಿಲ್ಲಾ ಕೇಂದ್ರದಲ್ಲಿ ಅತ್ಯಂತ ಸಡಗರ,ಸಂಭ್ರಮ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಹೇಳಿದರು.
ಜಿಲ್ಲಾ ಕೇಂದ್ರದಲ್ಲಿ ನ.1 ರಂದು 71ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ ಆಚರಿಸುವ ಕುರಿತು ನಗರದ ನೂತನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ. ಅಂದು ಬೆಳಗ್ಗೆ 9 ಗಂಟೆಗೆ ರಾಷ್ಟ್ರಧ್ವಜಾರೋಹಣ ನಡೆಯಲಿದೆ. ಬಳಿಕ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ, ರಾಜ್ಯೋತ್ಸವದ ಸಂದೇಶ ಇರಲಿದೆ. ಸ್ಥಳೀಯ ಪ್ರತಿಭೆ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಆದ್ಯತೆ ನೀಡಿ ಕನ್ನಡ ಸಂಸ್ಕೃತಿ ಬಿಂಬಿಸುವ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಯಾವುದೇ ಅಧಿಕಾರಿಗಳು ಕೇಂದ್ರಸ್ಥಾನ ಬಿಟ್ಟು ತೆರಳಬಾರದು. ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು.
ಕಾರ್ಯಕ್ರಮದ ನಂತರ ಭುವನೇಶ್ವರಿದೇವಿ ಭಾವಚಿತ್ರ ಹಾಗೂ ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳನ್ನೊಳಗೊಂಡ ಭವ್ಯ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ. ಸ್ತಬ್ಧಚಿತ್ರಗಳು ಗುಣಮಟ್ಟದಿಂದ ಕೂಡಿರಬೇಕು. ಕೇವಲ ಕಾಟಾಚಾರಕ್ಕೆ ಮಾಡದೇ ಗುಣಮಟ್ಟದ ಆಯ್ದ ಸ್ತಬ್ಧಚಿತ್ರ ಸಿದ್ಧಪಡಿಸಬೇಕು. ಮೆರವಣಿಗೆ ಆರಂಭವಾದ ನಂತರ ಅಧಿಕಾರಿಗಳು ಅರ್ಧದಲ್ಲೇ ತೆರಳದೆ ಕಡ್ಡಾಯವಾಗಿ ಮೆರವಣಿಗೆಯ ಜೊತೆಗಿರಬೇಕು ಎಂದು ಸೂಚಿಸಿದರು.ಖಾಸಗಿ ಶಾಲೆ ಮತ್ತು ಕಾಲೇಜುಗಳಲ್ಲಿ ಕನ್ನಡ ರಾಜ್ಯೋತ್ಸವವನ್ನು ಕಡ್ಡಾಯವಾಗಿ ಆಚರಿಸುವಂತೆ ನೋಡಿಕೊಳ್ಳಲು ಡಿಡಿಪಿಯು ಹಾಗೂ ಡಿಡಿಪಿಐ ಜಂಟಿಯಾಗಿ ಸಭೆ ನಡೆಸಬೇಕು. ಪ್ರೌಢಶಾಲೆ ಹಾಗೂ ಪಿಯು ಕಾಲೇಜು ಮಟ್ಟದಲ್ಲಿ ಕೇವಲ ಒಂದೇ ವಿಷಯಕ್ಕೆ ಸೀಮಿತವಾಗದೆ ಕನ್ನಡ ಭಾಷೆಯ ಶ್ರೀಮಂತಿಕೆ, ಭಾಷಾ ಸ್ವೀಕರಣೆ ಹಾಗೂ ಏಕೀಕರಣ ಹೋರಾಟಗಾರರ ಪಾತ್ರಗಳ ಕುರಿತು ಪ್ರಬಂಧ ಮತ್ತು ಭಾಷಣ ಸ್ಪರ್ಧೆ ಆಯೋಜಿಸಬೇಕು. ವಿವಿಧ ಕ್ಷೇತ್ರಗಳ ಸಾಧಕರು ಹಾಗೂ ಕನ್ನಡ ಮಾಧ್ಯಮದಲ್ಲೇ ಓದಿ ಯುಪಿಎಸ್ಸಿ ಪಾಸಾದಂತಹ ಅರ್ಹ ಪ್ರತಿಭೆಗಳನ್ನು ಗುರುತಿಸಿ ಪಾರದರ್ಶಕವಾಗಿ ಸಮಿತಿ ಮೂಲಕ ಆಯ್ಕೆ ಮಾಡಿ ಸನ್ಮಾನಿಸುವಂತೆ ನಿರ್ದೇಶನ ನೀಡಿದರು.
ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್, ಎಸ್ಪಿ ಡಾ. ಸುಮನ್ ಡಿ.ಪೆನ್ನೇಕರ್, ಎಡಿಸಿ ಮಹಮ್ಮದ್ ಝುಬೇರ್.ಎನ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿ ಹಾಗೂ ಕನ್ನಡ ಪರ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.