ಸಾರಾಂಶ
ದೇವಸ್ಥಾನ ವಿಶ್ವಸ್ಥರ ಸಭೆ । ೧೫೦ಕ್ಕೂ ಹೆಚ್ಚು ಅರ್ಚಕರು, ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರು ಭಾಗಿಕನ್ನಡಪ್ರಭ ವಾರ್ತೆ ಹಾಸನ
ನಗರದ ಸಪ್ತಪದಿ ಸೌಧಾಮಿನಿ ಸಭಾಂಗಣದಲ್ಲಿ ಕರ್ನಾಟಕ ದೇವಸ್ಥಾನ, ಮಠ, ಧಾರ್ಮಿಕ ಸಂಸ್ಥೆಗಳ ಮಹಾಸಂಘ ಮತ್ತು ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುಮಾರು ೧೫೦ಕ್ಕೂ ಹೆಚ್ಚು ಅರ್ಚಕರು ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರ ಸಮ್ಮುಖದಲ್ಲಿ ಜಿಲ್ಲೆಯ ನೂರಕ್ಕೂ ಅಧಿಕ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸಲು ನಿರ್ಧರಿಸಲಾಯಿತು.ಈ ಕಾರ್ಯಕ್ರಮವನ್ನು ಶಂಕರ ಮಠದ ಧರ್ಮದರ್ಶಿ ಎಂ.ಎಸ್. ಶ್ರೀಕಂಠಯ್ಯ, ಹೊಳೆ ಮಲ್ಲೇಶ್ವರ ದೇವಸ್ಥಾನದ ಕಾರ್ಯದರ್ಶಿ ಮಂಜುನಾಥ್, ಉತ್ತರಮುಖಿ ಉತ್ತಿಷ್ಟ ಗಣಪತಿ ದೇವಸ್ಥಾನದ ಅಧ್ಯಕ್ಷ ರಾಘವೇಂದ್ರ ಹಾಗೂ ಕರ್ನಾಟಕ ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ರಾಜ್ಯ ಸಂಯೋಜಕ ಮೋಹನ್ ಗೌಡ ಉದ್ಘಾಟನೆ ಮಾಡಿದರು.
ಹಿಂದೂ ಜನಜಾಗೃತಿ ಸಮಿತಿ ಸಮನ್ವಯಕರಾದ ಚಂದ್ರ ಮೊಗವೀರ ಮಾತನಾಡಿ, ಸನಾತನ ಧರ್ಮದಲ್ಲಿ ದೇವಸ್ಥಾನಗಳು ಅತ್ಯಂತ ಪವಿತ್ರ ಸ್ಥಳಗಳು. ದೇವಸ್ಥಾನಗಳು ಎಂದರೆ ದೇವರು ಇರುವ, ದೇವರ ಅಸ್ತಿತ್ವ ಮತ್ತು ಚೈತನ್ಯ ಇರುವ ಕ್ಷೇತ್ರವಾಗಿದೆ. ದೇವಸ್ಥಾನವನ್ನು ಆದರ್ಶ ರೀತಿಯಲ್ಲಿ ಹೇಗೆ ನಡೆಸಬೇಕು? ದೇವಸ್ಥಾನವನ್ನು ಯಾವ ರೀತಿ ಧಾರ್ಮಿಕ ಕೇಂದ್ರ ಬಿಂದುವಾಗಿ ಮಾಡಬೇಕು ಹಾಗೂ ದೇವಸ್ಥಾನದಲ್ಲಿ ಸಾತ್ವಿಕ ಉಡುಪು ಧರಿಸುವುದರಿಂದ ಯಾವ ರೀತಿ ದೇವರ ಚೈತನ್ಯ ಪಡೆಯಬಹುದು ಎಂದು ವಸ್ತ್ರ ಸಂಹಿತೆ ಬಗ್ಗೆ ತಿಳಿಸಿದರು.ಕರ್ನಾಟಕ ದೇವಸ್ಥಾನ ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಸಂಯೋಜಕ ಮೋಹನ್ ಗೌಡ ಮಾತನಾಡಿ, ಕರ್ನಾಟಕದಲ್ಲಿ ೩೪,೦೦೦ ದೇವಸ್ಥಾನಗಳನ್ನು ಸರ್ಕಾರ ನಿಯಂತ್ರಣ ಮಾಡುತ್ತಿದೆ. ಇದರಲ್ಲಿ ಹೆಚ್ಚಿನ ದೇವಸ್ಥಾನಗಳು ಅವ್ಯವಹಾರದ ಆಗರವಾಗಿದೆ. ಈ ದೇವಸ್ಥಾನಗಳನ್ನು ಸರ್ಕಾರದ ಮುಷ್ಠಿಯಿಂದ ಹೊರ ತರಲು ಎಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕಿದೆ. ಕರ್ನಾಟಕ ದೇವಸ್ಥಾನ ಮಹಾಸಂಘವು ಈ ಕಾರ್ಯಕ್ಕೆ ಮುಂದಾಗಿದ್ದು ಅದರಲ್ಲಿ ಎಲ್ಲರೂ ಕೈ ಜೋಡಿಸಿ ಎಂದು ಹೇಳಿದರು.
ಶ್ರೀ ಶಂಕರ ಮಠದ ಧರ್ಮದರ್ಶಿ ಎಂ.ಎಸ್. ಶ್ರೀಕಂಠಯ್ಯ ಮಾತನಾಡಿ, ದೇವಸ್ಥಾನದ ಗರ್ಭಗುಡಿಯ ರಕ್ಷಣೆ, ಸುತ್ತಮುತ್ತಲಿನ ಪರಿಸರದ ರಕ್ಷಣೆ ಹಾಗೂ ದೇವಸ್ಥಾನದ ಜಮೀನಿನ ರಕ್ಷಣೆಯನ್ನು ಕೇವಲ ಸ್ಥಳೀಯ ಸಂಘಟನೆಯಿಂದ ಮಾತ್ರ ರಕ್ಷಣೆ ಮಾಡಲು ಸಾಧ್ಯವಿದೆ. ಹಾಗಾಗಿ ಎಲ್ಲರೂ ಈ ಕಾರ್ಯದಲ್ಲಿ ಕೈಜೋಡಿಸಿ ಸಂಘಟಿತರಾಗೋಣ. ನಮ್ಮಲ್ಲಿ ಇರುವ ಭಿನ್ನಾಭಿಪ್ರಾಯವನ್ನು ಮರೆತು ಎಲ್ಲರೂ ಕೈಜೋಡಿಸಿ ಸಂಘಟಿತರಾಗಿ ಸರ್ಕಾರಕ್ಕೆ ಒತ್ತಡ ಹೇರಿದರೆ ದೇವಸ್ಥಾನಗಳನ್ನು ಸರ್ಕಾರೀಕರಣದಿಂದ ರಕ್ಷಣೆ ಮಾಡಿಕೊಳ್ಳಬಹುದು. ಎಂದರು.ಹಿಂದೂ ಜನಜಾಗೃತಿಯ ಪಾಂಡುರಂಗ ಮಾತನಾಡಿ, ದೇವಾಲಯವನ್ನು ಶುಚಿಯಾಗಿ ಇಟ್ಟುಕೊಳ್ಳುವುದರಿಂದ ದೇವರ ಮೂರ್ತಿಯಿಂದ ಪ್ರಸರಣವಾಗುವ ಚೈತನ್ಯ ಶಕ್ತಿಯ ಮೂಲಕ ಋಣಾತ್ಮಕ ಶಕ್ತಿಗಳಿಂದ ರಕ್ಷಣೆ ಪಡೆಯಬಹುದು. ಅರ್ಚಕರ ಪೂಜೆ ಮಾಡುವಾಗ ಏಕಾಗ್ರತೆಯಿಂದ ಸ್ಥಿರವಾದ ಮನಸ್ಸಿನಿಂದ ಸ್ಪಷ್ಟ ಶ್ಲೋಕ ಉಚ್ಛಾರಣೆಯಿಂದ ವಿಧಿವತ್ತಾಗಿ ಪೂಜೆ ಮಾಡಿದಾಗ ಭಕ್ತರಿಗೂ ಹಾಗೂ ಅರ್ಚಕರಿಗೂ ಪೂಜೆ ಫಲ ದೊರೆಯುತ್ತದೆ ಎಂದು ಹೇಳಿದರು.
ದೇವಸ್ಥಾನಗಳ ನಿರ್ವಹಣೆಯಲ್ಲಿ ಬರುವ ಕಾನೂನು ಸಮಸ್ಯೆಗಳಿಗೆ ನುರಿತ ವಕೀಲರು ಕಾನೂನು ಸಲಹೆಗಳನ್ನು ನೀಡಿದರು. ಮಧ್ಯಾಹ್ನದ ನಂತರ ಮುಂದಿನ ಕಾರ್ಯ ಯೋಜನೆ ಬಗ್ಗೆ ಗುಂಪು ಚರ್ಚೆ ನಡೆಯಿತು. ಈ ಗುಂಪು ಚರ್ಚೆಯಲ್ಲಿ ಜಿಲ್ಲಾದ್ಯಂತ ನೂರಕ್ಕೂ ಅಧಿಕ ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಜಾರಿಗೊಳಿಸುವ ಬಗ್ಗೆ ನಿರ್ಣಯ ತೆಗೆದುಕೊಂಡರು. ದೇವಸ್ಥಾನಗಳಲ್ಲಿ ಧರ್ಮ ಶಿಕ್ಷಣ ಪ್ರಾರಂಭಿಸುವುದು ಮತ್ತು ಇತ್ಯಾದಿ ವಿಷಯಗಳ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಯಿತು. ಪರಿಷತ್ತಿನ ಕೊನೆಯಲ್ಲಿ ಎಲ್ಲ ವಿಶ್ವಸ್ಥರು ಕೆಲವು ಠರಾವುಗಳಿಗೆ ಅನುಮೋದನೆ ನೀಡಿದರು.ಹಾಸನದಲ್ಲಿ ಜನಜಾಗೃತಿ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಕರ್ನಾಟಕ ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ರಾಜ್ಯ ಸಂಯೋಜಕರಾದ ಮೋಹನ್ ಗೌಡ ಉದ್ಘಾಟಿಸಿದರು.