ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಈಗಿರುವ ಮೈಸೂರು ಸಕ್ಕರೆ ಕಾರ್ಖಾನೆ ಆವರಣದಲ್ಲೇ ರಾಜ್ಯ ಸರ್ಕಾರ ಹೊಸ ಕಾರ್ಖಾನೆಯನ್ನು ನಿರ್ಮಿಸಲು ತೀರ್ಮಾನಿಸಿದೆ. ೫೯.೮೦ ಕೋಟಿ ರು. ವೆಚ್ಚದಲ್ಲಿ ೫ ಸಾವಿರ ಟಿಸಿಡಿ ಸಾಮರ್ಥ್ಯದ ಕಬ್ಬು ನುರಿಸುವ ಹೊಸ ಯಂತ್ರ, ೧೧೬ ಕೋಟಿ ರು. ವೆಚ್ಚದ ೮೦ ಕೆಎಲ್‌ಪಿಡಿ ಸಾಮರ್ಥ್ಯ ಕಾಕಂಬಿ ಆಧಾರಿತ ಎಥೆನಾಲ್ ಘಟಕವನ್ನು ಅಳವಡಿಸಲು ನಿರ್ಧರಿಸಲಾಗಿದೆ.ವಿಧಾನ ಪರಿಷತ್ತಿನಲ್ಲಿ ಶಾಸಕ ಮಧು ಜಿ.ಮಾದೇಗೌಡರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಕ್ಕರೆ ಸಚಿವ ಶಿವಾನಂದ ಎಸ್.ಪಾಟೀಲ್, ಹೊಸ ಕಾರ್ಖಾನೆ ನಿರ್ಮಾಣ ಸಂಬಂಧ ಬೆಳಗಾವಿಯ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಿಂದ ವಿಸ್ತೃತ ಯೋಜನಾ ವರದಿ ಪಡೆಯಲಾಗಿದೆ. ವರದಿಯಲ್ಲಿರುವ ಮೂರು ಅಂಶಗಳಲ್ಲಿ ಕಬ್ಬು ನುರಿಸಲು ಹೊಸ ಯಂತ್ರ ಅಳವಡಿಕೆ, ಎಥೆನಾಲ್ ಘಟಕ ಸ್ಥಾಪನೆಗೆ ಅಗತ್ಯವಿರುವ ೧೭೫.೮೦ ಕೋಟಿ ರು. ಪ್ರಸ್ತಾವನೆಯನ್ನು ಸರ್ಕಾರ ಒಪ್ಪಿದ್ದು, ಇದರಲ್ಲಿ ೧೦೦ ಕೋಟಿ ರು. ಸಹಾಯ ಧನವನ್ನು ರಾಜ್ಯ ಸರ್ಕಾರದಿಂದ ಒದಗಿಸಲು ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಗೆ ನಂತರ ಸಚಿವ ಸಂಪುಟದಲ್ಲಿ ಮಂಡಿಸಲು ತೀರ್ಮಾನಿಸಲಾಗಿದೆ ಎಂದರು.
ಹೊಸ ಬಾಯ್ಲರ್ ಘಟಕ ಸ್ಥಾಪನೆಗೆ ೨೮೮ ಕೋಟಿ ರು. ಅಗತ್ಯವಿರುವುದರಿಂದ ಸದ್ಯಕ್ಕೆ ಆ ಪ್ರಸ್ತಾವನೆಯನ್ನು ಮುಂದೂಡಲಾಗಿದೆ. ಮುಂದಿನ ಹಂಗಾಮುಗಳಲ್ಲಿ ಕಬ್ಬಿನ ಲಭ್ಯತೆ ಆಧರಿಸಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.ಕಬ್ಬು ನುರಿಸಲು ಹೊಸ ಯಂತ್ರ ಅಳವಡಿಕೆ, ಎಥೆನಾಲ್ ಘಟಕ ಸ್ಥಾಪನೆಗೆ ತಗುಲುವ ೧೭೫.೮೦ ಕೋಟಿ ರು. ಹಣದಲ್ಲಿ ೧೦೦ ಕೋಟಿ ರು. ಆರ್ಥಿಕ ನೆರವನ್ನು ರಾಜ್ಯ ಸರ್ಕಾರ ಒದಗಿಸುವ ಮತ್ತು ಉಳಿದ ೭೫.೮೦ ಕೋಟಿ ರು. ಹಣವನ್ನು ಕಾರ್ಖಾನೆಯು ರಾಷ್ಟ್ರೀಕೃತ ಬ್ಯಾಂಕ್, ಹಣಕಾಸು ಸಂಸ್ಥೆಗಳಿಂದ ಸಾಲ-ನೆರವು ಪಡೆಯುವ ಪ್ರಸ್ತಾವನೆಯನ್ನು ಸಹಮತಿಗಾಗಿ ಆರ್ಥಿಕ ಇಲಾಖೆಗೆ ಸಲ್ಲಿಸಲಾಗಿದೆ ಎಂದು ವಿವರಿಸಿದರು.
ಕಾರ್ಖಾನೆಯಲ್ಲಿ ಪ್ರಸ್ತುತ ಇರುವ ೫ ಸಾವಿರ ಟಿಸಿಡಿ ಸಾಮರ್ಥ್ಯದ ಸಕ್ಕರೆ ಸಂಸ್ಕರಣಾ ಘಟಕಗಳು, ಬಾಯ್ಲಿಂಗ್ ಹೌಸ್‌ನ ಬಹಳಷ್ಟು ಘಟಕಗಳು ಹಳೆಯ ತಂತ್ರಜ್ಞಾನವನ್ನು ಹೊಂದಿವೆ. ಕೆಲವು ಕೆಟ್ಟಿವೆ. ಎಲೆಕ್ಟ್ರಿಕಲ್ ಮೋಟಾರ್ ಎಚ್‌ಪಿ ಅಪ್‌ಗ್ರೇಡ್ ಮಾಡುವ ಪ್ರಕ್ರಿಯೆ ಹೊರತುಪಡಿಸಿ ೫ ಸಾವಿರ ಟಿಸಿಡಿ ಕಬ್ಬು ನುರಿಸಲು ಸ್ಪಂದಿಸುವ ಹೊಸ ಯಂತ್ರಗಳನ್ನು ಅಳವಡಿಸುವುದು ಸೂಕ್ತವಾಗಿರುತ್ತದೆ ಎಂದು ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಅಭಿಪ್ರಾಯಿಸಿದೆ ಎಂದರು.೫ ಸಾವಿರ ಟಿಸಿಡಿ ಹೊಸ ಘಟಕ ಸ್ಥಾಪನೆಯೊಂದಿಗೆ ೧೦೦ ಟಿಪಿಎಚ್‌ನ ೬೭ ಕೆಜಿ ಸಾಮರ್ಥ್ಯದ ಹೊಸ ಬಾಯ್ಲರ್ ಹಾಗೂ ಪ್ರಸ್ತುತ ಇರುವ ಒಂದು ಬಾಯ್ಲರ್ ರಿಪೇರಿ ಮತ್ತು ನಿರ್ವಹಣೆ ಮಾಡಲು ಯೋಜನಾ ವೆಚ್ಚ ಮತ್ತು ನಿರ್ವಹಣಾ ವೆಚ್ಚ ೨೮೮ ಕೋಟಿ ರು.ಗಳಾಗಲಿದೆ. ಹಾಗಾಗಿ ಈ ಯೋಜನೆಯನ್ನು ಮುಂದಿನ ಹಂಗಾಮುಗಳಲ್ಲಿ ಕಬ್ಬಿನ ಲಭ್ಯತೆಯನ್ನು ಆಧರಿಸಿ ಪರಿಶೀಲಿಸಲು ನಿರ್ಧರಿಸಿರುವುದಾಗಿ ಉತ್ತರಿಸಿದರು.
ಕಾರ್ಖಾನೆಯಲ್ಲಿ ೮೦ ಕೆಎಲ್‌ಪಿಡಿ ಸಾಮರ್ಥ್ಯದ ಕಾಕಂಬಿ ಆಧಾರಿತ ಎಥೆನಾಲ್ ಘಟಕ ಅಳವಡಿಸುವುದಾಗಿ ಹಾಗೂ ಈ ಘಟಕದಲ್ಲಿ ಜ್ಯೂಸ್ ಬಳಕೆ ಮಾಡಿದಲ್ಲಿ ೧೨೦ ಕೆಎಲ್‌ಪಿಡಿ ಉತ್ಪಾದನೆಗೆ ಹೊಂದಾಣಿಕೆಯಾಗಲಿದೆ. ಈ ಘಟಕಕ್ಕೆ ೧೧೬ ಕೋಟಿ ರು.ಗಳಾಗುವುದಾಗಿ ವರದಿಯಲ್ಲಿ ತಿಳಿಸಲಾಗಿದೆ. ಕಾರ್ಖಾನೆ ಪುನಶ್ಚೇತನದ ದೃಷ್ಟಿಯಿಂದ ಇದನ್ನು ಸೇರಿಸಿಕೊಳ್ಳಲಾಗಿದೆ ಎಂದು ನುಡಿದರು.೨೦೨೩-೨೪ನೇ ಸಾಲಿನಲ್ಲಿ ಮೈಷುಗರ್‌ನಲ್ಲಿರ ಸಹ ವಿದ್ಯುತ್ ಘಟಕದಿಂದ ೧೨,೨೧,೦೦೦ ಯೂನಿಟ್ ವಿದ್ಯುತ್ ಉತ್ಪಾದಿಸಿ ೪,೯೩,೨೦೦ ಯೂನಿಟ್‌ಗಳನ್ನು ಚೆಸ್ಕಾಂಗೆ ರಫ್ತು ಮಾಡಲಾಗಿದ್ದು, ಇದರ ಮೊತ್ತ ೨೯,೧೪,೮೧೨ ಕೋಟಿ ರು.ಗಳಾಗಿದೆ. ೨೦೨೪-೨೫ನೇ ಸಾಲಿನಲ್ಲಿ ೧,೫೭,೩೦,೦೦೦ ಯೂನಿಟ್ ವಿದ್ಯುತ್ ಉತ್ಪಾದಿಸಿದ್ದು, ೭೧,೮೩,೪೪೦ ಯೂನಿಟ್ ವಿದ್ಯುತ್‌ನ್ನು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮಕ್ಕೆ ರಫ್ತು ಮಾಡಲಾಗಿದೆ. ರಫ್ತು ಮಾಡಿದ ೭೧,೮೩,೪೪೦ ಯೂನಿಟ್‌ಗಳ ಮೊತ್ತ ೪,೩೩,೮೭,೯೭೭ ರು.ಗಳಾಗಿದೆ. ಇದನ್ನು ಚೆಸ್ಕಾಂಗೆ ಪಾವತಿಸಬೇಕಾದ ವಿದ್ಯುತ್ ಬಿಲ್ ಬಾಕಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಮೈಷುಗರ್ ಕಾರ್ಖಾನೆ ಒಡೆತನದಲ್ಲಿ ೨೩೫.೧೦ ಎಕರೆ ಜಮೀನಿದ್ದು, ಈ ಪೈಕಿ ಎಷ್ಟು ಜಮೀನು ಒತ್ತುವರಿಯಾಗಿದೆ ಹಾಗೂ ಯಾವ ಯಾವ ಸರ್ವೇ ನಂಬರ್‌ಗಳಲ್ಲಿ ಒತ್ತುವರಿಯಾಗಿದೆ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದಿರುವ ಸಚಿವ ಶಿವಾನಂದ ಪಾಟೀಲ್, ಕಂಪನಿಯಲ್ಲಿ ಪ್ರಸ್ತುತ ಇರುವ ಡಿಸ್ಟಿಲರಿ ಘಟಕದ ತಂತ್ರಜ್ಞಾನ ಬಹಳ ಹಳೆಯದಾಗಿರುವುದರಿಂದ ಹಾಗೂ ಯಂತ್ರೋಪಕರಣಗಳು ಹಾಳಾಗಿರುವುದರಿಂದ ಡಿಸ್ಟಿಲರಿ ಘಟಕವನ್ನು ಪುನರ್ ಆರಂಭಿಸುವ ಉದ್ದೇಶ ಸದ್ಯಕ್ಕೆ ಇರುವುದಿಲ್ಲ. ಎರಡನೇ ಹಂತದಲ್ಲಿ ಬಾಯ್ಲರ್ ಹಾಗೂ ಡಿಸ್ಟಿಲರಿ ಘಟಕ ಆರಂಭಿಸುವ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.ಮೈಷುಗರ್‌ನಲ್ಲಿ ₹100 ಕೋಟಿ ದುರ್ಬಳಕೆ
ಕನ್ನಡಪ್ರಭ ವಾರ್ತೆ ವಿಧಾನ ಪರಿಷತ್ಮಂಡ್ಯದ ಮೈಸೂರು ಸಕ್ಕರೆ ಕಾರ್ಖಾನೆಯ ಅಭಿವೃದ್ಧಿಗೆಂದು ಬಿಡುಗಡೆ ಮಾಡಿದ್ದ 100 ಕೋಟಿ ರು.ಗಿಂತ ಹೆಚ್ಚು ಹಣ ದುರ್ಬಳಕೆಯಾಗಿದ್ದು, ಈ ಬಗ್ಗೆ ತನಿಖೆ ಮಾಡಲಾಗುವುದು ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಹೇಳಿದರು.
ಕಾಂಗ್ರೆಸ್ಸಿನ ಮಧು ಜಿ.ಮಾದೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಸರ್ಕಾರ ಬಂದ ನಂತರ ಕಾರ್ಖಾನೆ ಅಭಿವೃದ್ಧಿಗೆ ಕೈಗೊಂಡ ವಿವಿಧ ಕ್ರಮಗಳಿಂದಾಗಿ ಪ್ರತಿಶತ 3.5ರಷ್ಟಿದ್ದ ಸಕ್ಕರೆ ಇಳುವರಿ ಪ್ರಮಾಣ ಈಗ ಪ್ರತಿಶತ ಎಂಟಕ್ಕೆ ಏರಿದೆ. ಸಹ ವಿದ್ಯುತ್ ಘಟಕವನ್ನು ಸಹ ಆರಂಭಿಸಲಾಗಿದೆ. 2023-24ನೇ ಸಾಲಿನಲ್ಲಿ12.21 ಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸಿದ್ದು, ಈ ಪೈಕಿ 7.28 ಲಕ್ಷ ಯೂನಿಟ್‌ಗಳನ್ನು ಕಾರ್ಖಾನೆಗೆ ಬಳಸಿಕೊಳ್ಳಲಾಗಿದೆ. 4.93 ಲಕ್ಷ ಯೂನಿಟ್ ವಿದ್ಯುತ್ ಅನ್ನು ಚೆಸ್ಕಾಂಗೆ ಮಾರಾಟ ಮಾಡಿ 29.14 ಲಕ್ಷ ರು. ಆದಾಯ ಗಳಿಸಲಾಗಿದೆ. 2024-25ನೇ ಸಾಲಿನಲ್ಲಿ 1,57,30,000 ಯೂನಿಟ್ ಉತ್ಪಾದಿಸಿಲಾಗಿದೆ. ಈ ಪೈಕಿ 71,83,440 ಯೂನಿಟ್ ವಿದ್ಯುತ್ ಅನ್ನು ಚೆಸ್ಕಾಂಗೆ 4,33,87,977 ರು.ಗೆ ಮಾರಾಟ ಮಾಡಲಾಗಿದೆ. ಈ ಮೊತ್ತವನ್ನು ಚೆಸ್ಕಾಂಗೆ ಪಾವತಿಸಬೇಕಾದ ವಿದ್ಯುತ್ ಬಿಲ್ ಬಾಕಿಗೆ ಹೊಂದಾಣಿಕೆ ಮಾಡಲಾಗಿದೆ ಎಂದರು.