ಋಷಿಶ್ರೀ ವಿದ್ಯಾನಿಕೇತನ ವಿರುದ್ಧ ದೂರಿಗೆ ನಿರ್ಧಾರ

| Published : May 15 2024, 01:40 AM IST

ಋಷಿಶ್ರೀ ವಿದ್ಯಾನಿಕೇತನ ವಿರುದ್ಧ ದೂರಿಗೆ ನಿರ್ಧಾರ
Share this Article
  • FB
  • TW
  • Linkdin
  • Email

ಸಾರಾಂಶ

ಹೊಳೆನರಸೀಪುರ ತಾಲೂಕಿನ ಐಚನಹಳ್ಳಿ ಗ್ರಾಪಂ ವ್ಯಾಪ್ತಿಯ ಎಲೆಚಾಗಳ್ಳಿ ಮಾರ್ಗದ ಲಕ್ಷ್ಮೀಪುರ ಸಮೀಪ ಇರುವ ಋಷಿಶ್ರೀ ವಿದ್ಯಾನಿಕೇತನ ಅಂತಾರಾಷ್ಟ್ರೀಯ ಶಾಲೆಯ ಆವರಣದಲ್ಲಿ ಆಯೋಜನೆ ಮಾಡಿದ್ದ ಪೋಷಕರ ಜತೆಗಿನ ಮುಕ್ತ ಚರ್ಚೆಯು ತಾತ್ವಿಕ ಅಂತ್ಯ ಕಾಣದೆ ಶಾಲೆಯ ವಿರುದ್ಧ ವಂಚನೆ ದೂರು ದಾಖಲಿಸಲು ಪೋಷಕರು ಮುಂದಾದರು.

ಹೆಚ್ಚು ಶುಲ್ಕ ಆರೋಪ । ಶಾಲೆ ವಿರುದ್ಧ ಕ್ರಮಕ್ಕೆ ಪೋಷಕರ ತೀರ್ಮಾನ । ತಾತ್ವಿಕ ಅಂತ್ಯ ಕಾಣದ ವಿದ್ಯಾಸಂಸ್ಥೆ ಜತೆಗಿನ ಚರ್ಚೆ

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ತಾಲೂಕಿನ ಐಚನಹಳ್ಳಿ ಗ್ರಾಪಂ ವ್ಯಾಪ್ತಿಯ ಎಲೆಚಾಗಳ್ಳಿ ಮಾರ್ಗದ ಲಕ್ಷ್ಮೀಪುರ ಸಮೀಪ ಇರುವ ಋಷಿಶ್ರೀ ವಿದ್ಯಾನಿಕೇತನ ಅಂತಾರಾಷ್ಟ್ರೀಯ ಶಾಲೆಯ ಆವರಣದಲ್ಲಿ ಆಯೋಜನೆ ಮಾಡಿದ್ದ ಪೋಷಕರ ಜತೆಗಿನ ಮುಕ್ತ ಚರ್ಚೆಯು ತಾತ್ವಿಕ ಅಂತ್ಯ ಕಾಣದೆ ಶಾಲೆಯ ವಿರುದ್ಧ ವಂಚನೆ ದೂರು ದಾಖಲಿಸಲು ಪೋಷಕರು ಮುಂದಾದರು.

ಋಷಿಶ್ರೀ ವಿದ್ಯಾಸಂಸ್ಥೆಯ ಕಾರ್ಯದರ್ಶಿಯ ಧೋರಣೆ ಖಂಡಿಸಿ, ಪೋಷಕರು ಸೋಮವಾರ ಬೆಳಿಗ್ಗೆ ಶಾಲೆಯ ಮುಂಭಾಗ ಪ್ರತಿಭಟನೆ ನಡೆಸಿ, ಒಪ್ಪಂದದಂತೆ ಹಣ ಹಿಂದಿರುಗಿಸುವಂತೆ ಒತ್ತಾಯಿಸಿದರು. ಸ್ಥಳಕ್ಕೆ ಆಗಮಿಸಿದ ಗ್ರಾಮಾಂತರ ಪೊಲೀಸ್ ಪಿಎಸ್‌ಐ ಜಿ.ಎಸ್.ರಕ್ಷಿತಾ ಅವರ ಸಲಹೆ ಮೇರೆಗೆ ದೂರು ಸಲ್ಲಿಕೆ ನಂತರ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಮಂಗಳವಾರ ಬರುವುದಾಗಿ ತಿಳಿಸಿದ ನಂತರ ಪೋಷಕರು ಪ್ರತಿಭಟನೆ ಹಿಂದಕ್ಕೆ ಪಡೆದಿದ್ದರು.

ಮಂಗಳವಾರ ಬೆಳಿಗ್ಗೆ ೧೧ ಗಂಟೆಗೆ ಪ್ರಾರಂಭವಾದ ಸಭೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಸುರೇಶ್ ಮಾತನಾಡಿ, ವಿದ್ಯಾಸಂಸ್ಥೆಯನ್ನು ಮುನ್ನಡೆಸಲು ತೊಂದರೆಯಾಗುತ್ತಿದೆ, ಹಣಕೊಟ್ಟು ಸಹಕರಿಸಿ ಎಂದು ಸಂಸ್ಥೆಯ ಆಡಳಿತ ಹಾಗೂ ಹಣಕಾಸಿನ ಸಮಸ್ಯೆ ಕುರಿತು ತಿಳಿಸಿದರು.

ಈ ಸಂದರ್ಭದಲ್ಲಿ ಕೆಲ ಪೋಷಕರು, ‘ನೀವು ಸಂಸ್ಥೆ ಪ್ರಾರಂಭ ಮಾಡಿದ್ದಾಗ ಇದ್ದ ಸೇವಾ ಮನೋಭಾವ ಈಗಿಲ್ಲ, ವ್ಯಾವಹಾರಿಕ ಮನಸ್ಥಿತಿಯಿಂದ ಈ ರೀತಿ ವಿನಾಕಾರಣ ತೊಂದರೆ ನೀಡುತ್ತಿದ್ದೀರಿ, ಮುಂಗಡ ಹಣ ಪಡೆದು ಕರಾರು ಪತ್ರ ಮಾಡಿಕೊಟ್ಟಿದ್ದೀರಿ, ನಿಮ್ಮ ಕರಾರಿನಂತೆ ನಡೆದುಕೊಳ್ಳಬೇಕಾದ್ದು ನಿಮ್ಮ ಜವಾಬ್ದಾರಿ ಹಾಗೂ ಕರ್ತವ್ಯ’ ಎಂದು ಹೇಳಿದರು.

‘ನಮ್ಮ ಮಕ್ಕಳು ಶಾಲೆ ಬಿಟ್ಟು ನಾಲ್ಕು ವರ್ಷವಾಗಿದೆ, ಹಣ ಕೇಳಿ, ಕೇಳಿ, ನಂತರ ಅವರು ನೀವು ನೀಡಿದ್ದ ಚೆಕ್ ಬ್ಯಾಂಕ್‌ಗೆ ಹಾಕಿದಾಗ ಹಣವಿಲ್ಲದೇ ಚೆಕ್ ಬೌಸ್ಸ್ ಆಯಿತು. ನಂತರ ನ್ಯಾಯಾಲಯಕ್ಕೆ ಹೋಗಬೇಡಿ ಎಂದು ಸಮಯಾವಕಾಶ ಕೇಳಿ, ನ್ಯಾಯಾಲಯಕ್ಕೆ ಹೋಗಲು ಆಗದಂತಹ ಇಕ್ಕಿಟ್ಟಿನ ಪರಿಸ್ಥಿತಿಗೆ ತಂದು ನಿಲ್ಲಿಸಿದ್ದಾರೆ’ ಎಂದು ಪೋಷಕರೊಬ್ಬರು ಕಣ್ಣೀರು ಹಾಕಿದರು.

ಕೆಲವು ತಿಂಗಳ ಹಿಂದೆ ಆರೋಗ್ಯ ಸಮಸ್ಯೆ ಉಂಟಾಗಿ ಅಂಗವಿಕಲನಾಗಿರುವ ಕುಮಾರ್ ಮಾತನಾಡಿ, ‘ನನ್ನ ಮಗಳಿಗೆ ೨೦೨೩-೨೪ನೇ ಸಾಲಿನಲ್ಲಿ ಶೈಕ್ಷಣಿಕವಾಗಿ ಹಿಂದೆ ಉಳಿದಿದ್ದಾಳೆ ಎಂದು ಒತ್ತಾಯದಿಂದ ವರ್ಗಾವಣೆ ಪತ್ರ ನೀಡಿ ಕಳುಹಿಸಿದ್ದರು. ಅಂದು ಮುಂಗಡವಾಗಿ ನೀಡಿದ್ದ ೧ ಲಕ್ಷ ರು. ಹಣ ವಾಪಸ್ ನೀಡಿರಲಿಲ್ಲ. ನನ್ನ ಮಗಳು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ, ತೇರ್ಗಡೆಯಾಗಿದ್ದಾಳೆ, ಕಾಲೇಜಿಗೆ ಸೇರಿಸಲು ಹಣ ಬೇಕು, ಕೊಡಿ’ ಎಂದು ವಿನಂತಿಸಿದರು. ಇದೇ ರೀತಿ ನೂರಾರು ಜನರು ಹಣ ಹಿಂಪಡೆಯಲು ಆಗಮಿಸಿದ್ದರು.

ಸಂಸ್ಥೆಯ ಕಾರ್ಯದರ್ಶಿ ಸುರೇಶ್ ಮಾತನಾಡಿ, ‘ನಿಮ್ಮ ಮಕ್ಕಳು ಶಾಲೆಯಲ್ಲಿ ವ್ಯಾಸಂಗ ಮಾಡಲು ಅವಕಾಶ ಬೇಕಿದ್ದರೆ ದಯವಿಟ್ಟು ಸಂಸ್ಥೆ ಕೇಳಿರುವ ಹಣದಲ್ಲಿ ಶೇ. ೫೦ರಷ್ಟು ನೀಡಿ ಅಥವಾ ಜುಲೈ ೩೦ರ ಒಳಗೆ ಹಂತಹಂತವಾಗಿ ಹಣ ನೀಡಿ’ ಎಂದರು.

‘ಜುಲೈ ತಿಂಗಳಲ್ಲಿ ಸಿಬಿಎಸ್‌ಸಿ ಶಾಲೆಗಳಲ್ಲಿ ಪ್ರವೇಶಾತಿ ಕೊಡಲ್ಲ, ಆದ್ದರಿಂದ ಹಣ ನೀಡುವುದಾದರೆ ಈಗ ನೀಡಿ ಅಥವಾ ನಿಮ್ಮ ಕರಾರಿನಂತೆ ಶಾಲೆಯಲ್ಲಿ ವ್ಯಾಸಂಗ ಮಾಡಲು ಅವಕಾಶ ಕೊಡಿ, ಒಂದು ರು. ಸಹ ಹೆಚ್ಚುವರಿಯಾಗಿ ಕೊಡಲ್ಲ’ ಎಂದು ಪೋಷಕರು ಖಡಕ್ಕಾಗಿ ನುಡಿದರು.

ಪೋಷಕರ ಮಾತುಗಳನ್ನು ವಿದ್ಯಾಸಂಸ್ಥೆಯ ಕಾರ್ಯದರ್ಶಿ ಅಥವಾ ಪೋಷಕರ ಮಾತನ್ನು ಕಾರ್ಯದರ್ಶಿ ಕೇಳುವ ಮನಸ್ಥಿತಿಯಲ್ಲಿ ಇರಲಿಲ್ಲ. ಕೊನೆಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವ ಹಂತಕ್ಕೆ ಬಂದು ತಲುಪಿತು.

ಖಾಸಗಿ ಶಾಲಾ ಒಕ್ಕೂಟದ ಸದಸ್ಯೆ ಶೋಭ ಉಪಸ್ಥಿತರಿದ್ದು, ಪೋಷಕರ ಮನವೊಲಿಸುವ ಮಾತುಕತೆ ಸಹ ವಿಫಲವಾಯಿತು.

ಪ್ರತಿಭಟನೆಯಲ್ಲಿ ಪೋಷಕರಾದ ವಕೀಲ ವಸಂತಕುಮಾರ್, ಹೇಮಂತ್, ಪ್ರಶಾಂತ್, ಶಿವಣ್ಣ, ಪುಷ್ಪರಾಜ್, ಸತೀಶ್, ಯಶೋಧ, ಪ್ರಶಾಂತ್, ತೇಜಸ್ವಿನಿ, ಸುಮಿತ್ರಾ, ಸುಬ್ರಮಣ್ಯ, ಶಕುಂತಲಾ, ವೆಂಕಟೇಶ್, ಸುರೇಶ್, ಹಾಗೂ ಎಪ್ಪತ್ತಕ್ಕೂ ಹೆಚ್ಚು ಪೋಷಕರು ಇದ್ದರು.