ಮಂಡ್ಯ ನಗರದಲ್ಲಿ ಸುಸಜ್ಜಿತ 100 ಹಾಸಿಗೆಗಳ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ಮಾಣಕ್ಕೆ ಐದು ಎಕರೆ ಜಾಗ ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಆಸ್ಪತ್ರೆಯ ಶಾಶ್ವತ ಕಟ್ಟಡ ನಿರ್ಮಾಣವಾಗುವವರೆಗೆ ನಗರದ ಟಿಬಿ ಆಸ್ಪತ್ರೆಯಲ್ಲಿ ತಾತ್ಕಾಲಿಕವಾಗಿ ಜಯದೇವ ಹೃದ್ರೋಗ ಉಪಕೇಂದ್ರ ಆರಂಭಿಸಲು ಕ್ರಮ ವಹಿಸುವಂತೆ ನಿರ್ದೇಶನ.
ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲೆಯ ಜನರ ಬಹುದಿನಗಳ ಆರೋಗ್ಯ ಸೇವೆಯ ಬೇಡಿಕೆಗೆ ಸ್ಪಂದಿಸಿರುವ ರಾಜ್ಯ ಸರ್ಕಾರ ನಗರದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ಉಪಕೇಂದ್ರ ನಿರ್ಮಾಣ ಹಾಗೂ ಬಹುಕಾಲದಿಂದ ನೆನಗುದಿಗೆ ಬಿದ್ದಿರುವ ಕ್ಯಾನ್ಸರ್ ಆಸ್ಪತ್ರೆಯನ್ನು ಡಿಸೆಂಬರ್ ತಿಂಗಳಿನಲ್ಲಿ ಕಾರ್ಯಾರಂಭಗೊಳಿಸಲು ಅಗತ್ಯ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.ಬೆಂಗಳೂರಿನ ವಿಕಾಸಸೌಧದ ಕಚೇರಿಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ನಗರದಲ್ಲಿ ಸುಸಜ್ಜಿತ 100 ಹಾಸಿಗೆಗಳ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ಮಾಣಕ್ಕೆ ಐದು ಎಕರೆ ಜಾಗ ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಆಸ್ಪತ್ರೆಯ ಶಾಶ್ವತ ಕಟ್ಟಡ ನಿರ್ಮಾಣವಾಗುವವರೆಗೆ ನಗರದ ಟಿಬಿ ಆಸ್ಪತ್ರೆಯಲ್ಲಿ ತಾತ್ಕಾಲಿಕವಾಗಿ ಜಯದೇವ ಹೃದ್ರೋಗ ಉಪಕೇಂದ್ರ ಆರಂಭಿಸಲು ಕ್ರಮ ವಹಿಸುವಂತೆ ನಿರ್ದೇಶನ ನೀಡಿದರು.ತಾತ್ಕಾಲಿಕ ಆಸ್ಪತ್ರೆ ಆರಂಭಕ್ಕೆ ಅಗತ್ಯ ವೈದ್ಯಕೀಯ ಉಪಕರಣಗಳನ್ನು ನಿಗದಿತ ಸ್ಥಳದಲ್ಲಿ ಅಳವಡಿಸುವುದು, ವೈದ್ಯರು ಹಾಗೂ ಸಿಬ್ಬಂದಿ ನೇಮಕಾತಿ ಸೇರಿದಂತೆ ಮೂಲ ಸಿದ್ಧತೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಡಿಸೆಂಬರ್ ತಿಂಗಳಲ್ಲೇ ಸೇವೆ ಆರಂಭಿಸುವಂತೆ ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಯಿತು.
ಮಿಮ್ಸ್ ಕ್ಯಾಂಪಸ್ನಲ್ಲಿನ ತುರ್ತು ಚಿಕಿತ್ಸಾ ವಿಭಾಗವನ್ನು ಮೇಲ್ದರ್ಜೆಗೇರಿಸಲು 7 ಕೋಟಿ ರು. ವೆಚ್ಚದ ಯೋಜನೆ ಸಿದ್ಧಗೊಂಡಿದೆ. ಇಲ್ಲಿನ ಪ್ಲೇ ಗ್ರೌಂಡ್ನಲ್ಲಿ ಟ್ರಾಮಾ ಸೆಂಟರ್ ಹಾಗೂ ಡಿಎಚ್ಒ ಕಚೇರಿಯಲ್ಲಿನ ಖಾಲಿ ಜಾಗದಲ್ಲಿ ತರಗತಿ ನಡೆಸಲು ಕಟ್ಟಡ ನಿರ್ಮಾಣಕ್ಕೆ ಪ್ಲ್ಯಾನ್ ಸಿದ್ಧಗೊಳಿಸುವಂತೆ ಸೂಚನೆ ನೀಡಲಾಯಿತು.ವಿವಿಧ ಕಾರಣಗಳಿಂದ ನೆನಗುದಿಗೆ ಬಿದ್ದಿರುವ ಮಂಡ್ಯ ಕ್ಯಾನ್ಸರ್ ಆಸ್ಪತ್ರೆ ಕಾಮಗಾರಿ ಆರಂಭಿಸಿ ಬಾಕಿ ಪ್ರಕ್ರಿಯೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಡಿಸೆಂಬರ್ ತಿಂಗಳಿನಲ್ಲಿ ಉದ್ಘಾಟನೆಗೆ ಸಿದ್ಧಪಡಿಸುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಜಯದೇವ ಹೃದ್ರೋಗ ಉಪಕೇಂದ್ರ ಹಾಗೂ ಕ್ಯಾನ್ಸರ್ ಆಸ್ಪತ್ರೆ ಆರಂಭವಾದರೆ ಮಂಡ್ಯ ಜಿಲ್ಲೆಯ ಜನರು ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಕ್ಯಾನ್ಸರ್ ಚಿಕಿತ್ಸೆಗೆ ಬೆಂಗಳೂರು ಅಥವಾ ಮೈಸೂರು ಸೇರಿದಂತೆ ದೂರದ ನಗರಗಳಿಗೆ ಅಲೆದಾಡುವ ಅನಿವಾರ್ಯತೆ ಕಡಿಮೆಯಾಗಲಿದೆ ಎಂದು ಸಚಿವರು ಹೇಳಿದರು.ಜಿಲ್ಲೆಯ ಕೇಂದ್ರ ಸ್ಥಾನದಲ್ಲೇ ಅತ್ಯಾಧುನಿಕ ವೈದ್ಯಕೀಯ ಸೇವೆಗಳು ಲಭ್ಯವಾಗುವುದರಿಂದ ತುರ್ತು ಸಂದರ್ಭಗಳಲ್ಲಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯಲಿದೆ. ರೋಗಿಗಳ ಜೀವ ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂಬ ಅಭಿಪ್ರಾಯಪಟ್ಟರು.
ಆಸ್ಪತ್ರೆಗಳ ಕಾರ್ಯಾರಂಭಕ್ಕೆ ಡಿಸೆಂಬರ್ ತಿಂಗಳು ಸೂಕ್ತವಾಗಿದೆ. ಮುಖ್ಯಮಂತ್ರಿಗಳ ಸಮಯಾವಕಾಶ ಪಡೆದು ಉದ್ಘಾಟನಾ ದಿನಾಂಕ ಅಂತಿಮಗೊಳಿಸಲಾಗುವುದು. ಜಿಲ್ಲೆಯ ಆರೋಗ್ಯ ಸೇವೆ ಹೊಸ ಬಲ ತುಂಬಲಿರುವ ಈ ಎರಡು ಆಸ್ಪತ್ರೆಗಳ ಆರಂಭವು ಜಿಲ್ಲೆಯ ಜನತೆಗೆ ಸರ್ಕಾರ ನೀಡುತ್ತಿರುವ ಮಹತ್ವದ ಆರೋಗ್ಯ ಕೊಡುಗೆಯಾಗಿದೆ. ವಿಶೇಷವಾಗಿ ಹೃದಯ ಹಾಗೂ ಕ್ಯಾನ್ಸರ್ ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯುವ ಮೂಲಕ ಆರೋಗ್ಯ ಸುರಕ್ಷತೆ ಮತ್ತಷ್ಟು ಬಲಗೊಳ್ಳಲಿದೆ ಎಂದು ಸಚಿವರಾದ ಚಲುವರಾಯಸ್ವಾಮಿ, ಡಾ.ಶರಣ ಪ್ರಕಾಶ ಪಾಟೀಲ್ ತಿಳಿಸಿದರು.ಸಭೆಯಲ್ಲಿ ಶಾಸಕ ಪಿ.ರವಿಕುಮಾರ್ ಮಾತನಾಡಿ, ಕ್ಷೇತ್ರದ ಜನತೆಗೆ ನೀಡಿದ್ದ ಭರವಸೆಯಂತೆ ಜಯದೇವ ಹೃದ್ರೋಗ ಉಪಕೇಂದ್ರ ಹಾಗೂ ಕ್ಯಾನ್ಸರ್ ಆಸ್ಪತ್ರೆಗಳನ್ನು ಆರಂಭಿಸುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ನಿರಂತರ ಪ್ರಯತ್ನ ನಡೆಸುತ್ತಿದೆ. ಈಗ ಎರಡೂ ಆಸ್ಪತ್ರೆಗಳ ಕಾರ್ಯಾರಂಭಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಂಡಿರುವುದು ಜಿಲ್ಲೆಯ ಆರೋಗ್ಯ ಕ್ಷೇತ್ರದಲ್ಲಿ ಹೊಸ ಆಶಾಭಾವನೆ ಮೂಡಿಸಿದೆ ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ಸ್ಲಂ ಬೋರ್ಡ್ ಅಧಿಕಾರಿಗಳು ಉಪಸ್ಥಿತರಿದ್ದರು. ತಮಿಳು ಕಾಲೋನಿ ನಿವಾಸಿಗಳಿಂದ ಮಿಮ್ಸ್ ಜಾಗ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಿಮಂಡ್ಯ:
ನಗರದ ಮಿಮ್ಸ್ಗೆ ಸೇರಿದ ಜಾಗದಲ್ಲಿರುವ ತಮಿಳು ಕಾಲೋನಿ ನಿವಾಸಿಗಳಿಂದ ಒತ್ತುವರಿ ತೆರವುಗೊಳಿಸಿ ಬದಲಿ ನಿವೇಶನ ನೀಡಲು ಕ್ರಮ ಕೈಗೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಬೆಂಗಳೂರಿನ ವಿಕಾಸಸೌಧದ ಕಚೇರಿಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಮಿಮ್ಸ್ ನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಮಿಮ್ಸ್ಗೆ ಸೇರಿದ ಸುಮಾರು 9 ಎಕರೆ ಭೂಮಿಯನ್ನು ತಮಿಳು ಕಾಲೋನಿ ನಿವಾಸಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಪ್ರಕರಣ ನ್ಯಾಯಾಲಯದಲ್ಲಿದೆ. ಮಿಮ್ಸ್ಗೆ ಸೇರಿದ ಜಾಗದ ಕ್ಯಾಂಪಸ್ನಲ್ಲಿ ಆರೋಗ್ಯ ಸೇವೆಗಳು ಮುಂದುವರಿಯಬೇಕು ಎಂದರು.
ಒಟ್ಟು 39.33 ಎಕರೆ ಭೂಮಿ ಮಿಮ್ಸ್ ಸಂಸ್ಥೆಗೆ ಸೇರಿದೆ. ಇದರಲ್ಲಿ ಸದ್ಯಕ್ಕೆ 25.08 ಎಕರೆಯಷ್ಟೇ ಮಿಮ್ಸ್ ಉಳಿಸಿಕೊಂಡಿದೆ. ಇನ್ನುಳಿದ 14.24 ಎಕರೆ ಭೂಮಿಯಲ್ಲಿ ಸರ್ಕಾರಿ ಹಾಗೂ ಖಾಸಗಿ ಒತ್ತುವರಿ ಜೊತೆಗೆ ತಮಿಳು ಕಾಲೋನಿ ನಿವಾಸಿಗಳು 9.17 ಎಕರೆ ಒತ್ತುವರಿ ಮಾಡಿದ್ದಾರೆ ಎಂದರು.1956ರಿಂದ ತಮಿಳು ಕಾಲೋನಿ ನಿವಾಸಿಗಳು ಇಲ್ಲೇ ವಾಸ ಮಾಡುತ್ತಿದ್ದಾರೆ. ಮಿಮ್ಸ್ ಜಾಗಕ್ಕೆ ಪರ್ಯಾಯವಾಗಿ ಚಿಕ್ಕಮಂಡ್ಯದ 6 ಎಕರೆ ಪ್ರದೇಶದಲ್ಲಿ ಸ್ಲಂ ಬೋರ್ಡ್ನಿಂದ 576 ಮನೆಗಳನ್ನು ನಿರ್ಮಿಸಿ 4 ವರ್ಷ ಕಳೆದರೂ ನಿವಾಸಿಗಳು ಸ್ಥಳಾಂತರಿಸಿಲ್ಲ. ನಗರದಿಂದ ದೂರದಲ್ಲಿ ಮನೆ ನಿರ್ಮಾಣ ಕಾರಣದಿಂದ ಸ್ಥಳಾಂತರಕ್ಕೆ ಸಮಸ್ಯೆಯಾಗುತ್ತಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು, ಈಗಾಗಲೇ ನಿರ್ಮಿಸಿರುವ ಮನೆಗಳಿಗೆ ಮೂಲಸೌಲಭ್ಯ ಕಲ್ಪಿಸಲು ‘ಪ್ಲ್ಯಾನ್ ಆಫ್ ಆಕ್ಷನ್’ ಸಿದ್ಧಪಡಿಸಿಕೊಳ್ಳಬೇಕು. ನಿವಾಸಿಗಳ ಮನವೊಲಿಸಿ ಸ್ಥಳಾಂತರಕ್ಕೆ ಮುಂದಾದ ಕೂಡಲೇ ಮನೆಗಳ ನವೀಕರಣ ಕಾಮಗಾರಿ ಆರಂಭಿಸಬೇಕು ಎಂದರು.ತಮಿಳು ಕಾಲೋನಿಯವರ ಬೇಡಿಕೆಯಂತೆ ನಗರದ 5 ಕಿ.ಮೀ ವ್ಯಾಪ್ತಿಯಲ್ಲಿ ಸೂಕ್ತ ಸ್ಥಳ ಹುಡುಕಿ ಅವರಿಗೆ ಖಾಲಿ ನಿವೇಶನಗಳನ್ನು ಹಂಚಿಕೆ ಮಾಡಬೇಕು. ನಿವೇಶನ ಪಡೆದು ಮಿಮ್ಸ್ಗೆ ಸೇರಿದ ಜಾಗದಿಂದ ಸ್ಥಳಾಂತರಗೊಳ್ಳುವ ಬಗ್ಗೆ ಒಪ್ಪಿಗೆ ಪತ್ರ ಪಡೆದುಕೊಳ್ಳಬೇಕು. ಈಗಾಗಲೇ ಸ್ಲಂ ಬೋರ್ಡ್ನಿಂದ ನಿರ್ಮಿಸಿರುವ ಮನೆಗಳನ್ನು ನವೀಕರಿಸಿ ಅನ್ಯ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ತಮಿಳು ಕಾಲೋನಿ ನಿವಾಸಿಗಳ ಸ್ಥಳಾಂತರ ನಡೆಸದಂತೆ ನ್ಯಾಯಾಲಯದಲ್ಲಿನ ತಡೆಯಾಜ್ಞೆ (ಸ್ಟೇ) ತೆರವುಗೊಳಿಸಲು ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡಲಿದೆ. ಯಾವುದೇ ಸಮಸ್ಯೆಯಾಗದಂತೆ ಸರ್ಕಾರಿ ಆಸ್ತಿ ಉಳಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.