ಸಾಣೇಹಳ್ಳಿಯಲ್ಲಿ ನವೆಂಬರ್‌ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ನಾಟಕೋತ್ಸವದ ಕುರಿತು ಪೂರ್ವಭಾವಿ ಸಭೆಯಲ್ಲಿ ಪಂಡಿತಾರಾಧ್ಯ ಸ್ವಾಮೀಜಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ತಾಲೂಕಿನ ಸಾಣೇಹಳ್ಳಿಯ ತರಳಬಾಳು ಶಾಖಾಮಠದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ನವೆಂಬರ್‌ ತಿಂಗಳಲ್ಲಿ ರಾಷ್ಟ್ರೀಯ ನಾಟಕೋತ್ಸವ ನಡೆಸುವ ಕುರಿತಂತೆ ಸೋಮವಾರ ಇಲ್ಲಿನ ಗುರುಬಸವ ಮಹಾಮನೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಸಭೆಯ ಸಾನ್ನಿಧ್ಯ ವಹಿಸಿದ್ದ ಪಂಡಿತಾರಾಧ್ಯ ಸ್ವಾಮೀಜಿ ಮಾತನಾಡಿ, ನಮ್ಮ ಹಿರಿಯ ಗುರುಗಳಾದ ಶಿವಕುಮಾರ ಸ್ವಾಮೀಜಿಯವರು ತೋರಿದ ದಾರಿಯಲ್ಲಿ ಮಠದ ಚಟುವಟಿಕೆಗಳು ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದ್ದು, ಭಕ್ತಾದಿಗಳು ಹಾಗೂ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ನೀಡುತ್ತಿರುವ ಸಹಕಾರ ಮರೆಯುವಂಥದ್ದಲ್ಲ ಎಂದರು.

ನಮ್ಮ ಮಠದ ಪ್ರತಿಯೊಂದು ಕಾರ್ಯಕ್ರಮಕ್ಕೂ ಕೇವಲ ಒಂದು ಸಮುದಾಯ ಮಾತ್ರವಲ್ಲದೆ, ಎಲ್ಲಾ ವರ್ಗದ ಜನರು ತಮ್ಮ ಕೈಲಾದ ಸಹಾಯ ನೀಡುತ್ತಿರುವುದು ಮಠದ ಮೇಲಿರುವ ಗೌರವಕ್ಕೆ ಸಾಕ್ಷಿಯಾಗಿದೆ. ಈ ಬಾರಿ ನ.1 ರಿಂದ 6ರವರೆಗೆ ಒಟ್ಟು 6 ದಿನಗಳ ಕಾಲ ರಾಷ್ಟ್ರೀಯ ನಾಟಕೋತ್ಸವವನ್ನು ಅರ್ಥಪೂರ್ಣವಾಗಿ ನಡೆಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ನವೀನ್ ಕುಮಾರ್ ಮಾತನಾಡಿ, ಈ ವರ್ಷ ಎದುರಾಗಿರುವ ತೀವ್ರ ಬರಗಾಲದ ಹಿನ್ನೆಲೆಯಲ್ಲಿ ನಾಟಕೋತ್ಸವದ ಯಾವುದಾದರೂ ಒಂದು ದಿನ ನೀರಿನ ಸಂರಕ್ಷಣೆ, ಮಳೆ ನೀರಿನ ಕೊಯ್ಲು ಮತ್ತು ಬರಗಾಲದ ಪರಿಸ್ಥಿತಿಯನ್ನು ಧೈರ್ಯವಾಗಿ ಎದುರಿಸುವ ಕುರಿತು ರೈತರಲ್ಲಿ ಆತ್ಮವಿಶ್ವಾಸ ಹಾಗೂ ಜಾಗೃತಿ ಮೂಡಿಸುವಂತಹ ನಾಟಕವನ್ನು ಆಯ್ಕೆ ಮಾಡಿ ಪ್ರದರ್ಶಿಸಬೇಕೆಂದು ಪೂಜ್ಯರಲ್ಲಿ ವಿನಂತಿಸಿದರು.

ಬರಪೀಡಿತ ಪ್ರದೇಶಗಳಲ್ಲಿ ರೈತರು ಸಾಂಪ್ರದಾಯಿಕ ಬೆಳೆಗಳನ್ನು ಬಿಟ್ಟು ಅತಿಯಾದ ನೀರು ಬೇಡುವ ಅಡಕೆಯಂತಹ ಬೆಳೆಗಳನ್ನು ನಂಬಿ ಸಂಕಷ್ಟಕ್ಕೆ ಈಡಾಗುತ್ತಿದ್ದಾರೆ, ಹೀಗಾಗಿ ಲಭ್ಯವಿರುವ ಭೂಮಿಯಲ್ಲಿ ಹಾಗೂ ಕಡಿಮೆ ನೀರಿನಲ್ಲಿ ವೈಜ್ಞಾನಿಕವಾಗಿ ಬೆಳೆ ಬೆಳೆಯುವ ಕುರಿತು ರೈತರಿಗೆ ಸರಿ ಹಾದಿ ತೋರಿಸುವ ಸಾಂಸ್ಕೃತಿಕ ಸಂದೇಶಗಳು ನಾಟಕದ ಮೂಲಕ ತಲುಪಬೇಕಿದೆ ಎಂದು ಅಭಿಪ್ರಾಯಪಡಲಾಯಿತು.

*6 ದಿನ ನಾಟಕೋತ್ಸವ:

ನ.1 ರಿಂದ 6ರವರೆಗೆ ಆರು ದಿನಗಳ ಕಾಲ ರಾಷ್ಟ್ರೀಯ ನಾಟಕೋತ್ಸವ ನಡೆಯಲಿದೆ. ಶ್ರೀ ಶಿವಕುಮಾರ ಬಯಲು ರಂಗಮಂದಿರದಲ್ಲಿ ಮುಖ್ಯ ವೇದಿಕೆ ಕಾರ್ಯಕ್ರಮ ಮತ್ತು ನಾಟಕಗಳ ಪ್ರದರ್ಶನ ನಡೆಯಲಿವೆ.

ಶಿವಕುಮಾರ ರಂಗಮಂದಿರದಲ್ಲಿ ಪ್ರತಿದಿನ ಬೆಳಗ್ಗೆ ಪ್ರಾರ್ಥನಾ ಕಾರ್ಯಕ್ರಮಗಳು ಜರುಗಲಿದ್ದು, ನಾಟಕೋತ್ಸವದಲ್ಲಿ ಶಿವ ಸಂಚಾರದ 3 ನಾಟಕಗಳು ಮತ್ತು ಬೇರೆ ಕಡೆಯಿಂದ ಮೂರು ನಾಟಕಗಳೂ ಸೇರಿದಂತೆ ಒಟ್ಟು 6 ನಾಟಕಗಳು ಪ್ರದರ್ಶನಗೊಳ್ಳುವವು. ಪ್ರತಿದಿನದ ವಿಚಾರ ಮಾಲಿಕೆ, ವಚನ ಸಂಗೀತ, ನೃತ್ಯರೂಪಕ, ಸಾಧಕರಿಗೆ ಅಭಿನಂದನೆ, ರಾಜಕೀಯ ನೇತಾರರ, ವಿದ್ವಜನರ, ಚಿಂತಕರ ಮಾತುಗಳು, ಸ್ವಾಮೀಜಿಗಳ ಆಶೀರ್ವಚನ, ಶಿವಕುಮಾರ ಪ್ರಶಸ್ತಿ ಪ್ರದಾನ ಹಾಗೂ ಗುರುಭವನ ಉದ್ಘಾಟನೆ ಮುಂತಾದ ಕಾರ್ಯಕ್ರಮಗಳು ಪ್ರತಿವರ್ಷದಂತೆ ಈ ವರ್ಷವೂ ನಡೆಸಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಮಾಜಿ ಶಾಸಕ ಬೆಳ್ಳಿ ಪ್ರಕಾಶ್, ಸಿದ್ಧಪ್ಪ, ಅಜ್ಜಂಪುರದ ಎಸಿ ಚಂದ್ರಣ್ಣ, ಢಣಾಯಕಪುರದ ಗಂಗಾಧರಪ್ಪ, ಸಿದ್ದು ಯಾಪಲಪರವಿ, ಜಾನಕಲ್ ತಿಮ್ಮಜ್ಜ, ಕೆ.ಸಿ.ಶಿವಮೂರ್ತಿ, ಹೆಬ್ಬಳ್ಳಿ ಮಲ್ಲಿಕಾರ್ಜುನ, ದೃವಕುಮಾರ್, , ಶಾಲಾ ಕಾಲೇಜಿನ ಮುಖ್ಯಸ್ಥರು, ನೌಕರರು, ಸಾಣೇಹಳ್ಳಿ ಮತ್ತು ಸುತ್ತಮುತ್ತಲ ಗ್ರಾಮಸ್ಥರು, ತರೀಕೆರೆ, ಕಡೂರು, ಭದ್ರಾವತಿ, ಜಗಳೂರು, ದಾವಣಗೆರೆ, ಚಿತ್ರದುರ್ಗ ಹೊಸದುರ್ಗ ಶಿವಮೊಗ್ಗ, ಅರಸೀಕೆರೆ ಭಾಗದ ನೂರಾರು ಭಕ್ತರು, ಕಲಾಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.