ಸಾರಾಂಶ
ಸರಿಯಾದ ರಸ್ತೆ, ರಾಜ ಕಾಲುವೆ ನಿರ್ಮಾಣ ಇಲ್ಲ । ಅಸ್ವಚ್ಛತೆಯ ವಿರುದ್ಧ ಸಿಡಿದೆದ್ದ 3ನೇ ವಾರ್ಡಿನ ನಿವಾಸಿಗಳುಪರಶಿವಮೂರ್ತಿ ದೋಟಿಹಾಳ
ಕನ್ನಡಪ್ರಭ ವಾರ್ತೆ ಕುಷ್ಟಗಿಪಟ್ಟಣದ 3ನೇ ವಾರ್ಡಿನಲ್ಲಿ ಸರಿಯಾದ ರಸ್ತೆಗಳು, ರಾಜ ಕಾಲುವೆ ನಿರ್ಮಾಣ ಇಲ್ಲದೆ ಅಸ್ವಚ್ಛತೆ ತಾಂಡವವಾಡುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸ್ಪಂದಿಸುತ್ತಿಲ್ಲ ಎಂದು ಲೋಕಸಭಾ ಚುನಾವಣೆಯ ಮತದಾನ ಬಹಿಷ್ಕಾರ ಮಾಡಲು ಸ್ಥಳೀಯರು ನಿರ್ಧರಿಸಿದ್ದಾರೆ.
ಪಟ್ಟಣದ ಕೊಪ್ಪಳ ಮುಖ್ಯ ರಸ್ತೆಯ ಪಕ್ಕದಲ್ಲಿರುವ 3ನೇ ವಾರ್ಡಿನ ಮೂಲಕ ಮುಖ್ಯ ರಸ್ತೆಗೆ ಬರಲು ಸಂಪರ್ಕ ರಸ್ತೆ ಇಲ್ಲ. ರಾಜಕಾಲುವೆ ನಿರ್ಮಾಣದ ಕಾರ್ಯ ನನೆಗುದಿಗೆ ಬಿದ್ದಿದೆ. ಸಾರ್ವಜನಿಕರು ಬಳಸಿದ ನೀರು, ಮಳೆಯ ನೀರು ಮುಂದಕ್ಕೆ ಹರಿಯದೆ ನಿಂತಲ್ಲೆ ನಿಂತುಕೊಂಡು ಮಲೀನತೆ ಹೆಚ್ಚಾಗತೊಡಗಿದೆ.2 ವರ್ಷಗಳ ಹಿಂದೆ ರಾಜಕಾಲುವೆಯ ನಿರ್ಮಾಣಕ್ಕಾಗಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ ಸುಮಾರು ₹42 ಲಕ್ಷ ಅನುದಾನ ಬಂದಿದ್ದು, ಪಿಡಬ್ಲ್ಯೂಡಿಯವರು ಕಾಮಗಾರಿ ಮುಗಿಸಬೇಕಿತ್ತು. ಆದರೆ ಕಾಲುವೆ ನಿರ್ಮಿಸುವ ಸಂದರ್ಭ ರಾಜಕಾಲುವೆ ಅಕ್ಕ ಪಕ್ಕದ ನಿವೇಶನದಾರರ ತಕರಾರಿನ ಹಿನ್ನೆಲೆ ಈ ಕಾಮಗಾರಿ ನನೆಗುದಿಗೆ ಬಿದ್ದಿದೆ. ಮುಖ್ಯಮಂತ್ರಿಗಳ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿ ನಗರೋತ್ಥಾನ ಯೋಜನೆಯ 2ನೇ ಹಂತದ ಅನುದಾನದಲ್ಲಿ ₹80 ಲಕ್ಷ ಚರಂಡಿ ಮತ್ತು ರಸ್ತೆ ಡಾಂಬರೀಕರಣ ಕಾಮಗಾರಿಗಳ ಪೈಕಿ ಕೇವಲ ₹30 ಲಕ್ಷ ವೆಚ್ಚದ ಚರಂಡಿ ನಿರ್ಮಿಸಿ, ಇನ್ನುಳಿದ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ.
ಮಲೀನತೆ, ದುರ್ವಾಸನೆಯ ಜೊತೆಗೆ ವಿಷ ಜಂತುಗಳ ಕಾಟವು ಹೆಚ್ಚಾಗಿದೆ. ಜನರು ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ.ತಾತ್ಕಾಲಿಕ ರಸ್ತೆ ನಿರ್ಮಾಣ:
ಮಳೆನೀರು, ಮನೆಯ ಕೊಳಚೆ ನೀರು ಹರಿದು ಹೋಗುವುದಕ್ಕೆ ಕಾಲುವೆಗೆ ಅಡ್ಡಲಾಗಿ ಸಿಮೆಂಟ್ ಕೊಳವೆ ಜೋಡಿಸಿ ಜೆಸಿಬಿ ಯಂತ್ರದ ಮೂಲಕ ನೆಲ ಸಮತಟ್ಟು ಮಾಡಿ ತಾತ್ಕಾಲಿಕ ರಸ್ತೆ ನಿರ್ಮಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಲಾಗಿದ್ದು, ಇದಕ್ಕಾಗಿ ಸ್ಥಳೀಯರೇ ₹ ಸುಮಾರು 9 ಸಾವಿರ ಖರ್ಚು ಮಾಡಿದ್ದಾರೆ.ಮತದಾನ ಬಹಿಷ್ಕಾರಕ್ಕೆ ಚಿಂತನೆ:
ಮೇ 7ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡುವುದರ ಜೊತೆಗೆ ನಮ್ಮ ವಾರ್ಡಿಗೆ ಯಾವ ರಾಜಕೀಯ ಪಕ್ಷದವರು ಮತ ಕೇಳಲು ಬರಬಾರದು ಎಂದು ಫಲಕ ಹಾಕಲು ಮುಂದಾಗುತ್ತೇವೆ ಎಂದು ಸ್ಥಳೀಯರು ತಿಳಿಸಿದ್ದಾರೆ.