ಕನ್ನಡಪ್ರಭ ವಾರ್ತೆ ಅಥಣಿಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡುವುದಾದರೆ ಜಿಲ್ಲಾ ಕೇಂದ್ರದಿಂದ 200 ಕೀ.ಮೀ ದೂರದಲ್ಲಿರುವ ಭೌಗೋಳಿಕ ವಿಸ್ತೀರ್ಣದಲ್ಲಿ ದೊಡ್ಡ ತಾಲೂಕು ಅಥಣಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಬೇಕು. ನಮ್ಮ ಬೇಡಿಕೆಗೆ ಸ್ಪಂದಿಸದೆ ಹೋದರೆ ಡಿ.10ರಂದು ಅಥಣಿ ಪಟ್ಟಣ ಬಂದ್ ಕರೆ ನೀಡುವ ಮೂಲಕ ಉಗ್ರ ಹೋರಾಟ ನಡೆಸಲಾಗುವುದು ಎಂದು ಅಥಣಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಪ್ರಶಾಂತ ತೋಡ್ಕರ ಹೇಳಿದರು.
ಕನ್ನಡಪ್ರಭ ವಾರ್ತೆ ಅಥಣಿ
ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡುವುದಾದರೆ ಜಿಲ್ಲಾ ಕೇಂದ್ರದಿಂದ 200 ಕೀ.ಮೀ ದೂರದಲ್ಲಿರುವ ಭೌಗೋಳಿಕ ವಿಸ್ತೀರ್ಣದಲ್ಲಿ ದೊಡ್ಡ ತಾಲೂಕು ಅಥಣಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಬೇಕು. ನಮ್ಮ ಬೇಡಿಕೆಗೆ ಸ್ಪಂದಿಸದೆ ಹೋದರೆ ಡಿ.10ರಂದು ಅಥಣಿ ಪಟ್ಟಣ ಬಂದ್ ಕರೆ ನೀಡುವ ಮೂಲಕ ಉಗ್ರ ಹೋರಾಟ ನಡೆಸಲಾಗುವುದು ಎಂದು ಅಥಣಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಪ್ರಶಾಂತ ತೋಡ್ಕರ ಹೇಳಿದರು.ಪಟ್ಟಣದ ಸುಕ್ಷೇತ್ರ ಗಚ್ಚಿನಮಠದ ಸಭಾಂಗಣದಲ್ಲಿ ಜಿಲ್ಲಾ ಹೋರಾಟ ಸಮಿತಿಯಿಂದ ಆಯೋಜಿಸಿದ್ದ ಪೂರ್ವಭಾವಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಕಳೆದ ಮೂರು ದಶಕಗಳಿಂದ ಜಿಲ್ಲಾ ವಿಂಗಡಣೆ ಪ್ರಕ್ರಿಯೆ ನಡೆದಿಲ್ಲ. ಈ ಬಾರಿ ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳುವುದಾದರೆ ಗೋಕಾಕ್, ಚಿಕ್ಕೋಡಿ ಮತ್ತು ಬೈಲಹೊಂಗಲ ಜೊತೆಗೆ ಅಥಣಿ ತಾಲೂಕನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಗಚ್ಚಿನ ಮಠದ ಶಿವಬಸವ ಸ್ವಾಮೀಜಿ ಮಾತನಾಡಿ, ರಾಜ್ಯ ಸರ್ಕಾರ ಮತ್ತು ಜನಪ್ರತಿನಿಧಿಗಳು ಈ ಬಗ್ಗೆ ಆಸಕ್ತಿ ತೋರಬೇಕು. ಜಿಲ್ಲಾ ಸಮಿತಿ ಕೈಗೊಳ್ಳುವ ಹೋರಾಟಕ್ಕೆ ಮಠಾಧೀಶರಾಗಿ ನಾವು ಭಾಗವಹಿಸಿ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇವೆ. ಅಥಣಿ ತಾಲೂಕಿನ ಸಮೀಪದ ಕಾಗವಾಡ, ರಾಯಬಾಗ, ಕುಡಚಿ, ತೇರದಾಳ, ಜಮಖಂಡಿ, ರಬಕವಿ ಸೇರಿಸಿ ಅಥಣಿ ಜಿಲ್ಲಾ ಕೇಂದ್ರ ಮಾಡಬೇಕು ಎಂದು ಆಗ್ರಹಿಸಿದರು.ರೈತ ಮುಖಂಡ ಶಿವಾನಂದ ಖೋತ ಮಾತನಾಡಿ, ನಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸದಿದ್ದರೆ ಅಥಣಿ ತಾಲೂಕ ಆಡಳಿತದ ಕೇಂದ್ರ ಮಿನಿ ವಿಧಾನಸೌಧ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳಿಗೆ ಬೀಗ ಜಡಿದು ಉಗ್ರ ಹೋರಾಟ ನಡೆಸಬೇಕಾಗುತ್ತದೆ. ಹೋರಾಟದಲ್ಲಿ ಸಂಭವಿಸುವ ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ. ಸರ್ಕಾರ ಇದಕ್ಕೆ ಆಸ್ಪದ ಕೊಡದೇ ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಬೇಕು. ಶಾಸಕ ಲಕ್ಷ್ಮಣ ಸವದಿ ಅವರು ಕೂಡ ಸದನದಲ್ಲಿ ಧ್ವನಿ ಎತ್ತುವ ಮೂಲಕ ತಾಲೂಕಿನ ಜನರ ಪರವಾಗಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.
ಸೋಮವಾರ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಮನವಿಗೆ ಸ್ಪಂದಿಸದೆ ಹೋದಲ್ಲಿ ಅಧಿವೇಶನ ಸಂದರ್ಭದಲ್ಲಿಯೇ ಡಿ.10 ರಂದು ಅಥಣಿ ಬಂದ್ ಕರೆ ನೀಡಲಾಗುವುದು ಎಂದು ಎಚ್ಚರಿಸಿದರು.ಈ ವೇಳೆ ಮಾಜಿ ಸೈನಿಕ ಸಂಘದ ಅಧ್ಯಕ್ಷ ಗುರಪ್ಪ ಮಗದುಮ, ಬಿಜೆಪಿ ಮಂಡಲ ಅಧ್ಯಕ್ಷ ಗಿರೀಶ್ ಬೂಟಾಳಿ, ವಕೀಲ ಸಂಪತ್ ಕುಮಾರ್ ಶೆಟ್ಟಿ, ಮಿತೇಶ್ ಪಟ್ಟಣ, ಕರವೇಯ ಶಬ್ಬೀರ್ ಸಾತಬಚ್ಚಿ, ಉದಯ ಮಹಾಕಾಣಿ, ಅಣ್ಣಾಸಾಹೇಬ ತೆಲಸಂಗ, ಶಶಿಧರ ಬರ್ಲಿ, ರವಿ ಬಡಕಂಬಿ, ಆಕಾಶ ನಂದಗಾವ, ವಿನಯ್ ಗೌಡ ಪಾಟೀಲ ಸೇರಿ ಹೋರಾಟಗಾರರು ಸಭೆಯಲ್ಲಿ ಭಾಗವಹಿಸಿದ್ದರು.