೨೩ರಂದು ರಾಣಿ ಚೆನ್ನಮ್ಮ ಜಯಂತಿ ಆಚರಣೆಗೆ ನಿರ್ಧಾರ: ತಹಸೀಲ್ದಾರ್ ಕೆ. ರಾಘವೇಂದ್ರ ರಾವ್

| Published : Oct 15 2025, 02:07 AM IST

೨೩ರಂದು ರಾಣಿ ಚೆನ್ನಮ್ಮ ಜಯಂತಿ ಆಚರಣೆಗೆ ನಿರ್ಧಾರ: ತಹಸೀಲ್ದಾರ್ ಕೆ. ರಾಘವೇಂದ್ರ ರಾವ್
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆಗೆ ₹೨೦ ಸಾವಿರ ಅನುದಾನ ನೀಡಿದ್ದು, ಕಿತ್ತೂರು ರಾಣಿ ಚೆನ್ನಮ್ಮ ಭಾವಚಿತ್ರ ಮೆರವಣಿಗೆ, ವೇದಿಕೆ ಕಾರ್ಯಕ್ರಮ ಸೇರಿದಂತೆ ಸಮಾಜದವರು ತಾಲೂಕು ಮಟ್ಟದಲ್ಲಿ ಆಚರಿಸಿದ ಬಗ್ಗೆ ಖರ್ಚು- ವೆಚ್ಚದ ಜಿಎಸ್ಟಿ ಬಿಲ್ ನೀಡಿ ಅನುದಾನ ಪಡೆದುಕೊಳ್ಳುವ ಕುರಿತು ಸೂಚನೆ ನೀಡಿದರು.

ಶಿರಹಟ್ಟಿ: ತಾಲೂಕು ಆಡಳಿತದ ವತಿಯಿಂದ ಅ. ೨೩ರಂದು ಬೆಳಗ್ಗೆ ೧೧ ಗಂಟೆಗೆ ತಹಸೀಲ್ದಾರ್ ಕಾರ್ಯಾಲಯದ ಸಭಾಭವನದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತಿಯನ್ನು ಆಚರಣೆ ಮಾಡುತ್ತಿದ್ದು, ಅಂದು ಎಲ್ಲ ಸಮಾಜದವರು ಹಾಜರಿರಲು ತಹಸೀಲ್ದಾರ್ ಕೆ. ರಾಘವೇಂದ್ರ ರಾವ್ ತಿಳಿಸಿದರು.ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಎಲ್ಲ ಸರ್ಕಾರಿ ಇಲಾಖೆ, ಶಾಲೆ, ಕಾಲೇಜುಗಳಲ್ಲಿ ಆಚರಿಸುವಂತೆ ಸುತ್ತೋಲೆ ಹೊರಡಿಸಲಾಗುವುದು ಎಂದರು.ಸರ್ಕಾರ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆಗೆ ₹೨೦ ಸಾವಿರ ಅನುದಾನ ನೀಡಿದ್ದು, ಕಿತ್ತೂರು ರಾಣಿ ಚೆನ್ನಮ್ಮ ಭಾವಚಿತ್ರ ಮೆರವಣಿಗೆ, ವೇದಿಕೆ ಕಾರ್ಯಕ್ರಮ ಸೇರಿದಂತೆ ಸಮಾಜದವರು ತಾಲೂಕು ಮಟ್ಟದಲ್ಲಿ ಆಚರಿಸಿದ ಬಗ್ಗೆ ಖರ್ಚು- ವೆಚ್ಚದ ಜಿಎಸ್ಟಿ ಬಿಲ್ ನೀಡಿ ಅನುದಾನ ಪಡೆದುಕೊಳ್ಳುವ ಕುರಿತು ಸೂಚನೆ ನೀಡಿದರು.ಅಧಿಕಾರಿಗಳ ಗೈರು: ಪೂರ್ವಭಾವಿ ಸಭೆ ನಡೆಯುವ ಕುರಿತಾಗಿ ಮೊದಲೇ ಎಲ್ಲ ಇಲಾಖೆ ಅಧಿಕಾರಿಗಳಿಗೆ ನೋಟಿಸ್ ನೀಡಿದರೂ ಅಧಿಕಾರಿಗಳು ಸಭೆಗೆ ಗೈರು ಹಾಜರಾಗಿದ್ದಾರೆ. ಬಹುತೇಕ ಸರ್ಕಾರಿ ಕಚೇರಿ, ಶಾಲಾ- ಕಾಲೇಜುಗಳಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ ಮಾಡುವುದಿಲ್ಲ. ಸರ್ಕಾರಿ ಇಲಾಖೆಗಳಲ್ಲಿ ಅವರ ಭಾವಚಿತ್ರವನ್ನು ಇಟ್ಟಿಲ್ಲ. ಇದು ಮಹನಿಯರಿಗೆ ಮಾಡಿದ ಅವಮಾನವಲ್ಲವೇ ಎಂದು ಸಮಾಜದ ಮುಖಂಡರಾದ ಬಿ.ಡಿ. ಪಲ್ಲೇದ, ಬಸವರಾಜ ತುಳಿ, ಬಸವರಾಜ ವಡವಿ ತಹಸೀಲ್ದಾರ ಗಮನ ಸೆಳೆದರು.ಈಗಾಗಲೇ ರಾಜ್ಯದಲ್ಲಿ ನಡೆದಿರುವ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಜನಗಣತಿ ಕಾರ್ಯಕ್ಕೆ ಸರ್ಕಾರದ ಆದೇಶದಂತೆ ಇಲಾಖೆ ಅಧಿಕಾರಿಗಳನ್ನು ಗಣತಿ ಕಾರ್ಯಕ್ಕೆ ಮೇಲ್ವಿಚಾರಕರೆಂದು ನೇಮಿಸಲಾಗಿದೆ. ಹಾಗಾಗಿ ಪೂರ್ವಭಾವಿ ಸಭೆಗೆ ಬಂದಿಲ್ಲ ಎಂದು ತಹಸೀಲ್ದಾರ್ ತಿಳಿಸಿದರು.

ಸಭೆಯಲ್ಲಿ ಶಿರಸ್ತೇದಾರ ಜೆ.ಪಿ. ಪೂಜಾರ, ಖಜಾನೆ ಇಲಾಖೆಯ ಶಿವಪ್ಪ ಹದ್ಲಿ, ಬಸವರಾಜ ಪಲ್ಲೇದ, ಯಲ್ಲಪ್ಪ ಇಂಗಳಗಿ, ಬಸವರಾಜ ತುಳಿ, ಅಶೋಕ ವರವಿ, ಬಸವರಾಜ ವಡವಿ, ತಿಪ್ಪಣ್ಣ ಕೊಂಚಿಗೇರಿ, ಎಸ್.ಬಿ. ಹೊಸೂರ, ನಂದಾ ಪಲ್ಲೇದ, ಬಸವರಾಜ ಚಿಕ್ಕತೋಟದ, ಎಂ.ಎ. ಪಾಟೀಲ, ಎಸ್.ಎಸ್. ಪಾಟೀಲ, ಮಹೇಶ ಮತ್ತೂರ, ಶರಣಪ್ಪ ಹೊಂಬಳ, ಚನ್ನವೀರಗೌಡ ಪಾಟೀಲ, ಹಾಲಪ್ಪ ದುಗ್ಗಾಣಿ, ಬಸವರಾಜ ಶಾಲಿ ಇದ್ದರು.