18ರಂದು ಕನಕದಾಸರ ಅದ್ಧೂರಿ ಜಯಂತಿ ಆಚರಣೆಗೆ ನಿರ್ಧಾರ

| Published : Nov 07 2024, 11:45 PM IST

ಸಾರಾಂಶ

ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕನಕದಾಸರ ಜಯಂತಿ ಆಚರಣೆ ಸಂಬಂಧ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಿಲ್ಲಾಕೇಂದ್ರದಲ್ಲಿ ನ.18ರಂದು ಭಕ್ತಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಎಲ್ಲರ ಸಹಕಾರದೊಂದಿಗೆ ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಯಿತು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕನಕದಾಸರ ಜಯಂತಿ ಆಚರಣೆ ಸಂಬಂಧ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಜಿಲ್ಲಾಡಳಿತ ಭವನದ ಆವರಣದಲ್ಲಿರುವ ವರನಟ ಡಾ. ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಕನಕದಾಸ ಜಯಂತಿ ಕಾರ್ಯಕ್ರಮ ನಡೆಯಲಿದೆ. ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಪ್ರವಾಸಿ ಮಂದಿರದಿಂದ ಹೊರಡುವ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಜಿಲ್ಲಾಡಳಿತ ಭವನ ತಲುಪಲಿದೆ. ಅಲಂಕೃತ ಬೆಳ್ಳಿರಥದಲ್ಲಿರಿಸಿದ ಕನಕದಾಸರ ಭಾವಚಿತ್ರದ ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಭಾಗವಹಿಸಲಿವೆ ಎಂದು ತಿಳಿಸಿದರು.

ಆಹ್ವಾನ ಪತ್ರಿಕೆಯನ್ನು ಶಿಷ್ಟಾಚಾರದಂತೆ ಮುದ್ರಿಸಿ ಎಲ್ಲಾ ಜನಪ್ರತಿನಿಧಿಗಳನ್ನು ಕಾರ್ಯಕ್ರಮಕ್ಕೆ ಆಮಂತ್ರಿಸಬೇಕು. ಕನಕದಾಸರ ಮಾಹಿತಿಯುಳ್ಳ ಕರಪತ್ರಗಳನ್ನು ಸಾರ್ವಜನಿಕರಿಗೆ ವಿತರಿಸಬೇಕು. ವೇದಿಕೆ ಕಾರ್ಯಕ್ರಮದ ಬ್ಯಾಕ್‌ಡ್ರಾಪ್ ಆಕರ್ಷಕವಾಗಿ ಮುದ್ರಣವಾಗಬೇಕು. ಕನಕದಾಸರ ಬಗ್ಗೆ ಹೆಚ್ಚಿನ ಮಾಹಿತಿ ಇರುವ ಸಂಪನ್ಮೂಲ ವ್ಯಕ್ತಿಯವರಿಂದ ಮುಖ್ಯಭಾಷಣ ಕಾರ್ಯಕ್ರಮದಲ್ಲಿ ಇರಲಿದೆ. ಕಾರ್ಯಕ್ರಮದಂದು ರಂಗಮಂದಿರದ ಹೊರ ಆವರಣ ಹಾಗೂ ಒಳಾವರಣಗಳು ಸ್ವಚ್ಛತೆಯಿಂದ ಕೂಡಿರುವಂತೆ ನೋಡಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉದಯ್‌ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ, ನಗರಸಭೆ ಹಿರಿಯ ಆರೋಗ್ಯ ನೀರಿಕ್ಷಕಿ ಸುಷ್ಮಾ, ಸಮಾಜದ ತಾಲೂಕು ಅಧ್ಯಕ್ಷ ಆರ್. ಉಮೇಶ್, ಪ್ರಧಾನ ಕಾರ್ಯದರ್ಶಿ ಬಿ. ಶಿವಲಿಂಗೇಗೌಡ, ಮುಖಂಡರಾದ ಮಹೇಶ್, ಸೂರ್ಯಕುಮಾರ್, ಮರಿಸ್ವಾಮಿ, ಹೊನ್ನಳ್ಳಿ ಬಸವಣ್ಣ, ನವೀನ್ ಹೊಂಗನೂರು, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.