ಸಾರಾಂಶ
ಕೊಡಗು ಜಿಲ್ಲಾ ದೈವ ಆರಾಧಕರು ಹಾಗೂ ದೈವ ನರ್ತಕರ ಸಂಘದ ಸಭೆ ನಗರದಲ್ಲಿ ನಡೆಯಿತು. ಸಭೆಯಲ್ಲಿ ದೈವಾರಾಧನೆಯ ಕಟ್ಟುಪಾಡುಗಳ ಕುರಿತು ಚರ್ಚಿಸಲಾಯಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ ಕೊಡಗು ಜಿಲ್ಲಾ ದೈವ ಆರಾಧಕರು ಹಾಗೂ ದೈವ ನರ್ತಕರ ಸಂಘದ ಸಭೆ ನಗರದಲ್ಲಿ ನಡೆಯಿತು. ದೈವ ಆರಾಧಕರ ಕುಟುಂಬ ಸಮ್ಮಿಲನ ಕಾರ್ಯಕ್ರಮ ನಡೆಸಲು ಸಭೆ ನಿರ್ಧರಿಸಿತು.
ಸಂಘದ ಅಧ್ಯಕ್ಷ ಸದಾಶಿವ ರೈ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ದೈವಾರಾಧನೆಯ ಕಟ್ಟುಪಾಡುಗಳ ಕುರಿತು ಚರ್ಚಿಸಲಾಯಿತು.ಕೊಡಗು ಜಿಲ್ಲೆಯಲ್ಲಿ ಕಳೆದ ಅನೇಕ ವರ್ಷಗಳಿಂದ ದೈವಾರಾಧನೆಯನ್ನು ಮಾಡಿಕೊಂಡು ಬರುತ್ತಿರುವ 90 ಕ್ಕೂ ಹೆಚ್ಚು ದೈವಸ್ಥಾನಗಳಿವೆ. ದೈವಾರಾಧಕರು ಹಾಗೂ ದೈವನರ್ತಕರನ್ನು ಒಂದೇ ವೇದಿಕೆಯಡಿ ಸಂಘಟಿಸಿ ದೈವಾರಾಧನೆಯ ಪದ್ಧತಿ ಕ್ರಮಬದ್ಧವಾಗಿ ನಡೆಸಲು ತುಳುನಾಡಿನ ಜನಪದ ವಿದ್ವಾಂಸರಿಂದ ಮಾಹಿತಿ ನೀಡುವ ಪ್ರಯತ್ನ ಮಾಡಲಾಗುವುದು. ಇದಕ್ಕಾಗಿ ಜಿಲ್ಲೆಯ ಎಲ್ಲಾ ದೈವ ಆರಾಧಕರ ಹಾಗೂ ದೈವನರ್ತಕರ ಕುಟುಂಬ ಸಮ್ಮಿಲನ ಕಾರ್ಯಕ್ರಮವನ್ನು ಮಡಿಕೇರಿ ನಗರದಲ್ಲಿ ಆಯೋಜಿಸಲಾಗುವುದು ಎಂದು ಪ್ರಮುಖರು ತಿಳಿಸಿದರು.
ಜಿಲ್ಲೆಯ ಎಲ್ಲಾ ದೈವ ಆರಾಧಕರು, ದೈವನರ್ತಕರು ಹಾಗೂ ಅವರ ಕುಟುಂಬದ ಎಲ್ಲಾ ಸದಸ್ಯರನ್ನು ಆಹ್ವಾನಿಸುವುದು, ದೈವ ಆರಾಧನಾ ಕ್ಷೇತ್ರದ ವಿದ್ವಾಂಸರಿಂದ ಮಾಹಿತಿ ನೀಡುವುದು. ಕೊಡಗು ಜಿಲ್ಲೆಯಲ್ಲಿರುವ ದೈವಸ್ಥಾನಗಳ ಅಭಿವೃದ್ಧಿಗಾಗಿ ಸರ್ಕಾರದ ಗಮನ ಸೆಳೆಯುವುದು. ಜಿಲ್ಲೆಯ ವಿವಿಧೆಡೆ ಇರುವ ದೈವಸ್ಥಾನಗಳು, ಗ್ರಾಮ, ದೈವ ಆರಾಧಕರ ಹೆಸರುಗಳನ್ನು ನೋಂದಾಯಿಸುವುದು ಮತ್ತು ದಾಖಲೀಕರಣ ಮಾಡುವುದು. ದೈವ ಆರಾಧಕರ ಹಾಗೂ ದೈವ ನರ್ತಕರ ಸದಸ್ಯತ್ವ ಮಾಡಿಸುವುದು ಸೇರಿದಂತೆ ಕುಟುಂಬ ಸಮ್ಮಿಲನ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು.ದೈವ ಆರಾಧಕರು ಹಾಗೂ ದೈವ ನರ್ತಕರ ಸಂಘದ ಸ್ಥಾಪಕ ಅಧ್ಯಕ್ಷ ಪಿ.ಎಂ.ರವಿ, ಸಂಘದ ಅಧ್ಯಕ್ಷ ಸದಾಶಿವ ರೈ, ಸಂಘಟನಾ ಕಾರ್ಯದರ್ಶಿ ರಮೇಶ್ ಹಾಗೂ ಖಜಾಂಚಿ ಜನಾರ್ದನ ಬಿ.ಎ ಹಲವು ಸಲಹೆಗಳನ್ನು ನೀಡಿದರು.
ಸದಸ್ಯರಾದ ಅಣ್ಣು ಪೂಜಾರಿ, ಪವನ್ ಮೊಗೇರ, ಸಂತೊಷ್ ಕುಲಾಲ್, ಮಂಜುನಾಥ್ ಎಂ.ಎಚ್, ಸುಜಿತ್ ಬಿ.ಎ, ಚೇತನ್ ಎಂ.ಜಿ, ಮಂಜುನಾಥ್ ಮತ್ತಿತರರು ಹಾಜರಿದ್ದರು.