ಸಾರಾಂಶ
75 ಮಹಿಳಾ ಸ್ವಸಹಾಯ ಸಂಘಗಳಿಗೆ ಸುಮಾರು ₹2.5 ಕೋಟಿ ವಂಚನೆ ಮಾಡಿದ್ದ ವ್ಯವಸ್ಥಾಪಕರ ಮೇಲೆ ಪ್ರಕರಣ ದಾಖಲಿಸಲು ಕೆನರಾ ಬ್ಯಾಂಕ್ ಮುಂದಾಗಿದ್ದರಿಂದ, ಅಂಕೋಲಾದಲ್ಲಿ ಬ್ಯಾಂಕ್ ಎದುರು ಗುರುವಾರ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಯನ್ನು ಮಹಿಳೆಯರು ಕೈಬಿಟ್ಟಿದ್ದಾರೆ.
ಅಂಕೋಲಾ: 75 ಮಹಿಳಾ ಸ್ವಸಹಾಯ ಸಂಘಗಳಿಗೆ ಸುಮಾರು ₹2.5 ಕೋಟಿ ವಂಚನೆ ಮಾಡಿದ್ದ ವ್ಯವಸ್ಥಾಪಕರ ಮೇಲೆ ಪ್ರಕರಣ ದಾಖಲಿಸಲು ಕೆನರಾ ಬ್ಯಾಂಕ್ ಮುಂದಾಗಿದ್ದರಿಂದ, ಬ್ಯಾಂಕ್ ಎದುರು ಗುರುವಾರ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಯನ್ನು ಮಹಿಳೆಯರು ಕೈಬಿಟ್ಟಿದ್ದಾರೆ.
ಸ್ತ್ರೀಶಕ್ತಿಗಳಿಗೆ ಸಾಲ ನೀಡಿ, ಅದನ್ನು ಸಂಘದವರು ಮರು ಪಾವತಿ ಮಾಡಿದರೂ ಅದನ್ನು ದಾಖಲೆಗಳಲ್ಲಿ ನಮೂದಿಸದೇ ಇರುವ ಹಿನ್ನೆಲೆಯಲ್ಲಿ ಬ್ಯಾಂಕ್ ವ್ಯವಸ್ಥಾಪಕ ವೆಂಕಟೇಶ ಮಜ್ಜಿಗಡ್ಡಾ ಅವರ ವಿರುದ್ಧ ಗುರುವಾರ ವಂಚನೆಗೊಳಗಾದ ಸ್ವಸಹಾಯ ಸಂಘದ ಮಹಿಳೆಯರು ಪೊರಕೆ ಹಿಡಿದು ಪ್ರತಿಭಟಿಸಲು ನಿರ್ಧರಿಸಿದ್ದರು. ಮಹಿಳೆಯರ ಬೇಡಿಕೆಗೆ ಬ್ಯಾಂಕ್ ಸ್ಪಂದಿಸಿದೆ. ಅಂಕೋಲಾ ಕೆನರಾ (ಸಿಂಡಿಕೇಟ್) ಬ್ಯಾಂಕಿನ ವ್ಯವಸ್ಥಾಪಕಿ ಪ್ರತೀಕ್ಷಾ ಅವರು ಪೊಲೀಸ್ ಠಾಣೆಗೆ ಆಗಮಿಸಿ ವಂಚನೆಗೈದ ವ್ಯವಸ್ಥಾಪಕ ವೆಂಕಟೇಶ ಮಜ್ಜಿಗಡ್ಡಾ ಅವರ ಮೇಲೆ ನಡೆದ ಆಂತರಿಕ ತನಿಖಾ ವಿವರ ನೀಡಿದರು. ಕಾನೂನಿನ ಅಡಿಯಲ್ಲಿ ವೆಂಕಟೇಶ ಮಜ್ಜಿಗುಡ್ಡಾ ಅವರ ಮೇಲೆ ಕ್ರಮ ಜರುಗಿಸಲು ಇನ್ನು ಕೆಲವು ದಾಖಲಾತಿಗಳು ಮತ್ತು ಅನುಮತಿ ಮುಖ್ಯ ಪ್ರಬಂಧಕರಿಂದ ಬರ ಬೇಕಾಗಿರುವುದರಿಂದ ಪ್ರಕರಣ ದಾಖಲಿಸಲು ಸಾಧ್ಯವಾಗಿಲ್ಲ ಎಂದರು.ಮೋಸಕ್ಕೆ ಒಳಗಾದ ಸ್ವಸಹಾಯ ಸಂಘಕ್ಕೆ ಬ್ಯಾಂಕಿಂಗ್ ಕಾನೂನಿನ ಇತಿ-ಮಿತಿಗಳಲ್ಲಿ ಸ್ಪಂದನೆ ನೀಡಿ ಆದ ಅನ್ಯಾಯವನ್ನು ಸರಿಪಡಿಸಿಕೊಡಲು ಎಲ್ಲ ಪ್ರಕ್ರಿಯೆಗಳು ನಡೆಯುತ್ತಲಿದೆ. ಇದಕ್ಕೆಲ್ಲ ಕೆಲವು ದಿನಗಳ ಕಾಲವಕಾಶ ಬೇಕಾಗುತ್ತದೆ. ಈ ಬಗ್ಗೆ ಯಾವುದೇ ಆತಂಕ ಬೇಡ ಎಂದು ವ್ಯವಸ್ಥಾಪಕಿ ಪ್ರತೀಕ್ಷಾ ಸ್ಪಷ್ಟಪಡಿಸಿದ್ದಾರೆ.ಸ್ವಸಹಾಯ ಸಂಘದ ರೇವತಿ ಶೆಟ್ಟಿ ಮಾತನಾಡಿ, ಕೆನರಾ ಬ್ಯಾಂಕ್‌ನಿಂದ ಆದ ವಂಚನೆಯಿಂದ ನಾವು ನೊಂದಿದ್ದೇವೆ, ಒಂದು ವರ್ಷದಿಂದ ಅತಂತ್ರರಾಗಿದ್ದೇವೆ. ನಮಗೆ ಬೇರೆ ಕಡೆ ಸಾಲ ಕೂಡ ಸಿಗುತ್ತಿಲ್ಲ. ರಾಷ್ಟ್ರೀಕೃತ ಬ್ಯಾಂಕ್ ಎಂದು ವಿಶ್ವಾಸ ಇಟ್ಟು ನಾವು ವ್ಯವಹಾರ ಮಾಡಿದ್ದೇವು. ಆದರೆ ಬೇಲಿಯೆ ಎದ್ದು ಹೊಲ ಮೇಯ್ದಂತೆ ಆಗಿದೆ ನಮ್ಮ ಪರಿಸ್ಥಿತಿ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.ಮಹಿಳೆಯರು ಸಿಪಿಐ ಸಂತೋಷ ಶೆಟ್ಟಿ ಅವರಿಗೆ ಮನವಿ ಸಲ್ಲಿಸಿದರು. ವೈಶಾಲಿ ನಾಯ್ಕ, ಮಮತಾ ಶೆಟ್ಟಿ, ರೇವತಿ ಅಂಕೋಲಾ, ಅನಿತಾ ನಾಯ್ಕ, ಲತಾ ನಾಯ್ಕ್, ರೇಶ್ಮಾ ಶಿರೋಡಕರ, ಗೀತಾ ನಾಯ್ಕ್, ಶಾರದಾ ನಾಯ್ಕ್, ಸುಜನಾ, ಬಾಶಿರಾ ಮಾಂಡ್ಲಿಕ್, ಶಬಾನಾ ಶೇಖ್, ಹಸೀನಾ ಮುಜಾವರ, ಕವಿತಾ ಕೋಟೆವಾಡಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.