ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ನಗರಸಭಾ ವ್ಯಾಪ್ತಿಯಲ್ಲಿ ನಿಯಮ ಬಾಹಿರ ಖಾತೆಗಳೆಂದು ಲೋಕಾಯುಕ್ತ ಮುದ್ರೆ ಹಾಕಿದ್ದ 1505 ಸ್ವತ್ತುಗಳಿಗೆ ನಮೂನೆ- 3ಎ(ಬಿ ಖಾತೆ) ನೀಡಲು, ಕೆಲ ಬಡಾವಣೆಗಳನ್ನು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳಲು ಗ್ರಾಮ ಪಂಚಾಯಿತಿಗಳಿಗೆ ಪ್ರಸ್ತಾವನೆ ಸಲ್ಲಿಸಲು ಶುಕ್ರವಾರ ನಡೆದ ನಗರಸಭೆ ವಿಶೇಷ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಯಿತು.ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ) ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಲೋಕಾಯುಕ್ತ ಪ್ರಕರಣದಿಂದ ಅತಂತ್ರ ಖಾತೆಗಳಿಗೆ ಮುಕ್ತಿ ನೀಡುವ ಹಾಗೂ ಬೀಡಿ ಕಾಲೋನಿ, ಸುತ್ತಮುತ್ತಲಿನ ಪ್ರದೇಶ, ಶಾಂತಿಲಾಲ್ ಬಡಾವಣೆ, ಎಂ.ಎಚ್.ಕಾಲೇಜು ಸುತ್ತಮುತ್ತಲಿನ ಪ್ರದೇಶವನ್ನು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳಲು ಆಯಾ ಪಂಚಾಯಿತಿಗಳಿಗೆ ಪ್ರಸ್ತಾವನೆ ಸಲ್ಲಿಸುವ ಕುರಿತು ಚರ್ಚೆ ನಡೆದು ಪ್ರಸ್ತಾವನೆ ಸಲ್ಲಿಸಲು ನಿರ್ಧಾರ ಕೈಗೊಳ್ಳಲಾಯಿತು.
ಈ ಹಿಂದೆ ಸಕ್ಷಮ ಪ್ರಾಧಿಕಾರದಿಂದ ನಕ್ಷೆ ಅನುಮೋದನೆ ಇಲ್ಲದೆ ಖಾತೆ ಮಾಡಲಾಗಿತ್ತು ಎಂಬ ಕಾರಣಕ್ಕೆ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ, ಸರ್ಕಾರ ಇಂತಹ ಪ್ರಕರಣಗಳಿಗೆ ರಿಯಾಯಿತಿ ನೀಡಿದ್ದು, ನಕ್ಷೆ ವಿನ್ಯಾಸ ಇಲ್ಲದೆ ಇದ್ದರೂ ಬಿ ಖಾತೆ ನೀಡಲು ಅನುಮೋದನೆ ನೀಡಿದೆ. ಹಾಗಾಗಿ ಲೋಕಾಯುಕ್ತದಲ್ಲಿನ 1505 ಪ್ರಕರಣಗಳಿಗೆ ರಿಲೀಫ್ ನೀಡುವ ನಿಟ್ಟಿನಲ್ಲಿ ಬಿ ಖಾತೆ ಕೊಡಲು ತೀರ್ಮಾನಿಸಲಾಯಿತು.ಬೀಡಿ ಕಾರ್ಮಿಕರ ಬಡಾವಣೆಯನ್ನು ನಗರಸಭಾ ವ್ಯಾಪ್ತಿಗೆ ಸೇರಿಸಿಕೊಳ್ಳುವ ಕುರಿತು ಚರ್ಚೆ ನಡೆಯಿತು. ಆ ಬಡಾವಣೆಯು ರಾಮನಗರ ನಗರಸಭೆ ವ್ಯಾಪ್ತಿಯ ಸಮೀಪದಲ್ಲಿಯೇ ಇದ್ದು, ಆ ಬಡಾವಣೆ ನಿವಾಸಿಗಳಿಗೆ ಸಾಕಷ್ಟು ಮೂಲಭೂತ ಸೌಕರ್ಯಗಳನ್ನು ರಾಜೀವ್ ಗಾಂಧಿ ವಸತಿ ನಿಗಮದಿಂದ ಒದಗಿಸಲಾಗಿದೆ. ಅಲ್ಲಿನ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲಾಗಿದೆ. ಆದರೆ, ತಾಂತ್ರಿಕವಾಗಿ ಬೀಡಿ ಕಾಲೋನಿ ಪಟ್ಟಣದ ವ್ಯಾಪ್ತಿಗೆ ಸೇರದಿರುವುದರಿಂದ ಈ ಬಗ್ಗೆ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಮಾಡಲಾಯಿತು.
ಕುಡಿಯುವ ನೀರು:ಯುಗಾದಿ ಹಾಗೂ ರಂಜಾನ್ ಹಬ್ಬವೂ ಸಾಲಾಗಿ ಬಂದಿದ್ದು, ಜನತೆ ಸಮಪರ್ಕ ನೀರು ಪೂರೈಕೆ ಕೇಳುತ್ತಿದ್ದಾರೆ. ಆದರೆ, ಸಮಸ್ಯೆ ಕುರಿತು ಜಲಮಂಡಳಿ ಅಧಿಕಾರಿಗಳಿಗೆ ಮಾಹಿತಿ ನೀಡಲು ಕರೆ ಮಾಡಿದರೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ, ಮೊಬೈಲ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಸಾಕಷ್ಟು ಸಮಸ್ಯೆ ಎದುರಾಗುತ್ತಿದೆ. ಹಬ್ಬದ ದಿನವಾದರೂ ಸಮರ್ಪಕ ನೀರು ಪೂರೈಕೆ ಮಾಡಿಸಲು ಸದಸ್ಯರು ಸಭೆಯ ಗಮನಕ್ಕೆ ತಂದರು.
ಈ ವೇಳೆ ಮಾತನಾಡಿದ ಅಧ್ಯಕ್ಷ ಕೆ.ಶೇಷಾದ್ರಿ , ವಾರ್ಡುಗಳಲ್ಲಿ ನೀರಿನ ಸಮಸ್ಯೆ ಇರುವುದರಿಂದಲೇ ಸದಸ್ಯರು ಸಭೆಯ ಗಮನಕ್ಕೆ ತರುತ್ತಿದ್ದಾರೆ. ಆದಷ್ಟು ಸಮಪರ್ಕವಾಗಿ ನೀರು ಪೂರೈಕೆ ಮಾಡಿ ಕರೆ ಮಾಡಿದರೆ ಸ್ಪಂದಿಸಿ ಎಂದು ಜಲಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು.24 ಗಂಟೆ ನೀರು ಪೂರೈಕೆ ಸಂಬಂಧ ನಡೆಸಲಾಗಿರುವ ಕಾಮಗಾರಿ ಅರ್ಧಕ್ಕೆ ನಿಂತಿದೆ. 13ನೇ ವಾರ್ಡಿನಲ್ಲಿ ರಸ್ತೆ ಅಗೆದು ತಿಂಗಳು ಕಳೆಯುತ್ತಿದೆ. ಅರ್ಧ ಕೆಲಸ ಮಾಡಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಿ ಸಾಕಾಗಿದೆ. ಕುಡಿಯುವ ನೀರಿನ ಕಾಮಗಾರಿ ನಡೆಸಲು ಅಗತ್ಯ ಸಿಬ್ಬಂದಿ ನೇಮಕ ಮಾಡಿಸಿಕೊಡಬೇಕು. ಇರುವ ಸಿಬ್ಬಂದಿಯಿಂದ ಸಮಪರ್ಕವಾಗಿ ಕೆಲಸ ತೆಗೆದುಕೊಳ್ಳಲು ಹಾಗೂ ನಿಗದಿತ ಸಮಯದಲ್ಲಿ ಕೆಲಸ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಸದಸ್ಯರು ತಿಳಿಸಿದರು.
ಇನ್ನು ಕೆಲವು ಬಡಾವಣೆಗಳಿಗೆ 8 ರಿಂದ 10 ದಿನಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಹೊಸ ಸಂಪರ್ಕ ನೀಡುವ ನೆಪವೊಡ್ಡಿ ಕೆಲವು ಬಡಾವಣೆಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಆ ಸ್ಥಳಗಳಲ್ಲಿ ಖಾಸಗಿ ಟ್ಯಾಂಕರ್ ಮೂಲಕ ನೀರು ಪೂರೈಸಬೇಕೆಂದು ಸದಸ್ಯರು ಆಗ್ರಹಿಸಿದರು.ಈ ವೇಳೆ ನಗರಸಭೆ ಉಪಾಧ್ಯಕ್ಷೆ ಆಯೀಷಾ ಬಾನು, ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಪಾಷ, ಆಯುಕ್ತ ಡಾ.ಜಯಣ್ಣ ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))