ಸ್ವಾತಂತ್ರ್ಯ ದಿನದಂದು ಕಪ್ಪುಬಾವುಟ ಹಾರಿಸಲು ನಿರ್ಧಾರ

| Published : Aug 12 2025, 12:30 AM IST

ಸ್ವಾತಂತ್ರ್ಯ ದಿನದಂದು ಕಪ್ಪುಬಾವುಟ ಹಾರಿಸಲು ನಿರ್ಧಾರ
Share this Article
  • FB
  • TW
  • Linkdin
  • Email

ಸಾರಾಂಶ

ದೊಡ್ಡಬಳ್ಳಾಪುರ: ತಾಲೂಕಿನ ದೊಡ್ಡತುಮಕೂರು ಮತ್ತು ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ಎಲ್ಲ ಜಲಮೂಲಗಳ ನೀರು ದಿನಬಳಕೆ ಮತ್ತು ಕುಡಿಯಲು ಯೋಗ್ಯವಿಲ್ಲದ ಅಪಾಯಕಾರಿ ಸ್ಥಿತಿ ತಲುಪಿದ್ದು, ಈ ಬಗ್ಗೆ ಹಲವು ಒತ್ತಾಯ ಮನವಿಗಳ ಬಳಿಕವೂ ದಿವ್ಯ ಮೌನ ವಹಿಸಿರುವ ಆಡಳಿತಶಾಹಿ ನಿರ್ಲಕ್ಷ್ಯ ಖಂಡಿಸಿ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯಂದು ಗ್ರಾಮಸ್ಥರು ಕಪ್ಪುಪಟ್ಟಿ ಧರಿಸಿ ಎರಡೂ ಪಂಚಾಯಿತಿಗಳ ವ್ಯಾಪ್ತಿಯ ಎಲ್ಲ ಗ್ರಾಮಗಳ ಮನೆಗಳ ಮೇಲೆ ಕಪ್ಪು ಬಾವುಟ ಹಾರಿಸಲು ತೀರ್ಮಾನಿಸಲಾಗಿದೆ ಎಂದು ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ತಿಳಿಸಿದೆ.

ದೊಡ್ಡಬಳ್ಳಾಪುರ: ತಾಲೂಕಿನ ದೊಡ್ಡತುಮಕೂರು ಮತ್ತು ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ಎಲ್ಲ ಜಲಮೂಲಗಳ ನೀರು ದಿನಬಳಕೆ ಮತ್ತು ಕುಡಿಯಲು ಯೋಗ್ಯವಿಲ್ಲದ ಅಪಾಯಕಾರಿ ಸ್ಥಿತಿ ತಲುಪಿದ್ದು, ಈ ಬಗ್ಗೆ ಹಲವು ಒತ್ತಾಯ ಮನವಿಗಳ ಬಳಿಕವೂ ದಿವ್ಯ ಮೌನ ವಹಿಸಿರುವ ಆಡಳಿತಶಾಹಿ ನಿರ್ಲಕ್ಷ್ಯ ಖಂಡಿಸಿ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯಂದು ಗ್ರಾಮಸ್ಥರು ಕಪ್ಪುಪಟ್ಟಿ ಧರಿಸಿ ಎರಡೂ ಪಂಚಾಯಿತಿಗಳ ವ್ಯಾಪ್ತಿಯ ಎಲ್ಲ ಗ್ರಾಮಗಳ ಮನೆಗಳ ಮೇಲೆ ಕಪ್ಪು ಬಾವುಟ ಹಾರಿಸಲು ತೀರ್ಮಾನಿಸಲಾಗಿದೆ ಎಂದು ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ತಿಳಿಸಿದೆ.

ಈ ಕುರಿತು ದೊಡ್ಡತುಮಕೂರು ಕೆರೆ ಬಳಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡ ಸತೀಶ್, ಈ ವಿಚಾರವಾಗಿ ಅನೇಕ ಹೋರಾಟಗಳು ನಡೆಸಲಾಗಿದೆ. ಚುನಾವಣೆ ಬಹಿಷ್ಕರಿಸಿ, ಹಲವು ಹೋರಾಟ ಹಮ್ಮಿಕೊಳ್ಳಲಾಗಿತ್ತು. ಹಿಂದಿನ ಸ್ವಾತಂತ್ರ್ಯ ದಿನಾಚರಣೆಯಂದು ಕಪ್ಪು ಬಾವುಟ ಹಾರಿಸುವ ಕಾರ್ಯಕ್ರಮ ಘೋಷಿಸಲಾಗಿತ್ತು. ಆಗ ಜಿಲ್ಲಾಧಿಕಾರಿಗಳು ಬಂದು ನಿಮ್ಮ ಒತ್ತಾಯ ಸರಿ ಇದೆ, ನೀವು ಕೇಳಿತ್ತಿರುವುದು ನ್ಯಾಯ ಇದೆ, ನಮಗೆ ಸ್ವಲ್ಪ ಕಾಲಾವಕಾಶ ಕೊಡಿ ಸರಿಪಡಿಸಿ ಕೊಡುತ್ತೇವೆ ಎಂದು ಹೇಳಿರುವುದು ಇತಿಹಾಸ. ಆದರೆ ಇಲ್ಲಿವರೆಗೂ ಯಾವುದೇ ಕೆಲಸಗಳು ಆಗಿಲ್ಲ. ಗ್ರಾಮ ಪಂಚಾಯಿತಿಯ 2023ರಲ್ಲಿ ಎರಡು ಪಂಚಾಯಿತಿಯ 36 ಕೊಳವೆ ಬಾವಿಗಳಿಗೆ 34 ಕೊಳವೆ ಭಾವಿಗಳು ಉಪಯೋಗಿಸಲು ಯೋಗ್ಯವಾಗಿಲ್ಲ ಎಂಬ ವರದಿ ಬಂದಿದೆ. 2024ರಲಿ ಕೊಳವೆ ಬಾವಿಗಳಲ್ಲಿ ಕಪ್ಪು ನೀರು ಬರುತ್ತಿದೆ ಎಂದು ಆರೋಪಿಸಿದರು.

ಒತ್ತಾಯಗಳೇನು?:

ಗ್ರಾಪಂ ವ್ಯಾಪ್ತಿಯ ಪ್ರತಿ ಮನೆಗಳಿಗೂ ಮಳೆ ಕೊಯ್ದು ಮಾಡಿಕೊಡಬೇಕು. ದೊಡ್ಡಬಳ್ಳಾಪುರ ನಗರಸಭೆಯ ಒಳಚರಂಡಿ ನೀರನ್ನು ಮೂರನೇ ಹಂತದ ಶುದ್ದೀಕರಣ ಮಾಡಬೇಕು. ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ STP ಘಟಕವನ್ನು ಚಿಕ್ಕತುಮಕೂರು ಕೆರೆಯಿಂದ ಹೊರ ತೆಗೆದು ಕೆರೆಯನ್ನು ಕೆರೆಯಾಗಿ ಬಿಡಬೇಕು. ಇತರೆ ಪಂಚಾಯಿತಿ ಯಿಂದ ನೀರು ಕೊಡುತ್ತೇವೆ ಎಂದು ಬಾಯಿ ಮಾತಿನಲ್ಲಿ ಮತ್ತು ಕಡತಗಳಲ್ಲಿ ಮಾತ್ರ ಇದೆ ಅದನ್ನು ವಾಸ್ತವವಾಗಿ ಜಾರಿಗೆ ತರಬೇಕು. ಕಾನೂನು ವಿರುದ್ಧವಾಗಿ ರಾಸಾಯನಿಕ ನೀರು ಬಿಡುವ ಕಾರ್ಖಾನೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಹಕ್ಕೊತ್ತಾಯವನ್ನು ಸಮಿತಿ ಸದಸ್ಯರು ಮಂಡಿಸಿದರು.

ಹಿಂದೆ ಇದ್ದ ಜಿಲ್ಲಾಧಿಕಾರಿಗಳು ಇನ್ನು ನಾಲ್ಕು ತಿಂಗಳಲ್ಲಿ STP ಘಟಕ ಶುರು ಮಾಡುತ್ತೇವೆ ಎಂದು ಹೇಳಿ ಎರಡು ವರ್ಷ ಕಳೆದರೂ ಇನ್ನೂ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಸಂವಿಧಾನ ಉಳಿಸಲು. ಕಾನೂನು ರಕ್ಷಿಸಲು ಹಾಗೂ ಜನರ ಆರೋಗ್ಯದ ದೃಷ್ಟಿಯಿಂದ ಸ್ವತಂತ್ರ ದಿನಾಚರಣೆಯ ದಿನದಂದು ಎರಡು ಪಂಚಾಯತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಎಲ್ಲ ಮನೆಗಳ ಮೇಲೆ ಕಪ್ಪು ಬಾವುಟ ಹಾರಿಸುವುದಕ್ಕೆ ತೀರ್ಮಾನಿಸಿದ್ದೇವೆ.ಇದಕ್ಕೆ ಸಂಬಂಧಪಟ್ಟಂತೆ ಜನಗಳ ಸಹಿ ಸಂಗ್ರಹ ಕೂಡ ಮಾಡಿ ಜಿಲ್ಲಾಧಿಕಾರಿಗಳಿಗೆ ಕೊಡಲಿದ್ದೇವೆ ಎಂದರು.

ಹಿರಿಯ ವೈದ್ಯ ಡಾ. ಟಿ.ಎಚ್. ಆಂಜಿನಪ್ಪ ಮಾತನಾಡಿ, ನಾನು ಇದೇ ಗ್ರಾಮದಲ್ಲಿ ಹುಟ್ಟಿ ಗ್ರಾಮದ ಕೆರೆಯಲ್ಲಿ ನೀರು ಕುಡಿದು ಬೆಳೆದಿದ್ದೇನೆ. ಆದರೆ ಇಂದು ನಮ್ಮ ಗ್ರಾಮದ ಕೆರೆಗೆ ಬಂದಿರುವ ಪರಿಸ್ಥಿತಿ ಹೇಳಲು ಅಸಾಧ್ಯವಾಗಿದೆ. ಅಧಿಕಾರಿಗಳು ಕೂಡಲೇ ಈ ಕುರಿತು ಕ್ರಮಕ್ಕೆ ಮುಂದಾಗಬೇಕಿದೆ ಈಗಾಗಲೇ ಹಲವಾರು ಬಾರಿ ಮನವಿ ಮಾಡಿದ್ದೇವೆ ಹೋರಾಟಗಳನ್ನು ಮಾಡಿದ್ದೇವೆ ಆದರೂ ಯಾವುದೇ ಪ್ರಯೋಜನವಾಗಿಲ್ಲ , ಹಾಗಾಗಿ ಸ್ವಾತಂತ್ರ ದಿನದಂದು ದೊಡ್ಡ ತುಮಕೂರು ಹಾಗೂ ಮಜರಾಹೊಸಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಎಲ್ಲ ಮನೆಗಳ ಮೇಲೆ ಕಪ್ಪು ಬಾವುಟ ಪ್ರದರ್ಶಿಸಲು ಗ್ರಾಮಸ್ಥರು ನಿರ್ಧರಿಸಿದ್ದು ಈಗಲಾದರೂ ಅಧಿಕಾರಿಗಳು ಎಚ್ಚೆದ್ದು ಜಲ ಸಂಪನ್ಮೂಲ ಉಳಿಸಲು ಮುಂದಾಗಲಿ ಎಂದರು .

ಪ್ರತಿ ಬಾರಿ ಗ್ರಾಮಸ್ಥರು ಹೋರಾಟ ಮಾಡುತ್ತಿವೆ ಎಂದು ಮುಂದೆ ಬರುವುದು ಅಧಿಕಾರಿ ವರ್ಗ ಗ್ರಾಮಗಳಿಗೆ ಭೇಟಿ ಕೊಟ್ಟು ಸಾಂತ್ವನ ಹೇಳುವ ಮೂಲಕ ಸಂಧಾನಕ್ಕೆ ಮುಂದಾಗುವುದು ಕೆಲ ಸಮಯದ ನಂತರ ಮತ್ತೆ ಹೋರಾಟ ಪ್ರಾರಂಭಗೊಳ್ಳುವುದು ಸರ್ವೇಸಾಮಾನ್ಯವಾಗಿದೆ . ಈ ಬಾರಿಯಾದರೂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಗ್ರಾಮಸ್ಥರ ಜೀವ ಉಳಿಸುವ ಕಾರ್ಯ ಮಾಡಬೇಕಾಗಿದೆ ಎಂದು ಸ್ಥಳೀಯ ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.

ಈ ವೇಳೆ ಹೋರಾಟ ಸಮಿತಿಯ ಮುಖಂಡರು ಹಾಜರಿದ್ದರು.11ಕೆಡಿಬಿಪಿ5- ದೊಡ್ಡಬಳ್ಳಾಪುರ ತಾಲೂಕಿನ ಅರ್ಕಾವತಿ ಹೋರಾಟ ಸಮಿತಿ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಯಿತು.