ಸಾರಾಂಶ
ಕರೆ ಒಕ್ಕಲು ಒಂದು ಆದಿಮ ಸಂಸ್ಕೃತಿಯ ಸಮುದಾಯವಾಗಿದ್ದು ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದೆ.
ಕಾರವಾರ: ಹಿಂದುಳಿದ ವರ್ಗಗಗಳ ಶಾಶ್ವತ ಆಯೋಗ ಆರಂಭಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವೇಳೆ ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿರುವ ಎಲ್ಲ ಕರೆ ಒಕ್ಕಲಿಗ ಸಮುದಾಯದವರು ಜಾತಿ ಹಾಗೂ ಉಪಜಾತಿ ಕಾಲಂಗಳಲ್ಲಿ ಕರೆ ಒಕ್ಕಲು ಎಂದು ಬರೆಸಲು ಸಮಗ್ರ ಕರೆ ಒಕ್ಕಲು ಸಂಘದಿಂದ ಸರ್ವಾನುಮತದಿಂದ ತೀರ್ಮಾನಿಸಲಾಯಿತು.
ಶಿರಸಿ ತಾಲೂಕಿನ ಮಳಲಿ ಶ್ರೀ ವೀರಭದ್ರೇಶ್ವರ ಸಭಾಭವನದಲ್ಲಿ ಈಚೆಗೆ ಆಯೋಜಿಸಿದ್ದ ಸಮಾಲೋಚನಾ ಸಭೆಯಲ್ಲಿ ಎರಡು ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ ಸಮಾಜದ ಹಿರಿಯರು ಹಾಗೂ ಮುಖಂಡರು ಚರ್ಚಿಸಿ ಈ ನಿರ್ಣಯ ಕೈಗೊಂಡಿದ್ದಾರೆ.ಉಪನ್ಯಾಸಕ ಡಾ. ಉಮೇಶ ಭದ್ರಾಪುರ, ಕರೆ ಒಕ್ಕಲು ಒಂದು ಆದಿಮ ಸಂಸ್ಕೃತಿಯ ಸಮುದಾಯವಾಗಿದ್ದು ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದೆ. ಸರಿಸುಮಾರು 1 ಲಕ್ಷ ಜನಸಂಖ್ಯೆ ಇರಬಹುದಾದ ಕರೆ ಒಕ್ಕಲು ಸಮುದಾಯ ಇಂದಿಗೂ ಹಿಂದುಳಿದಿರುವ ಕಾರಣ ಈ ಸಂದರ್ಭದಲ್ಲಿ ನಾವೆಲ್ಲರೂ ಒಂದಾಗಿ ನಿರ್ಣಯ ಕೈಗೊಳ್ಳಬೇಕಿದೆ ಎಂದರು.
ಸಮಾಜದ ಹಿರಿಯ ಮುಖಂಡರಾದ ಆನಂದ ಗೌಡ, ಸಮುದಾಯದವರಿಗೆ ಸರಿಯಾದ ಮಾರ್ಗದರ್ಶನಕ್ಕಾಗಿ ಈ ಸಭೆಯ ನಿರ್ಣಯ ಅತಿ ಅಮೂಲ್ಯವಾಗಿದ್ದು, ಎಲ್ಲರೂ ಗಣತಿದಾರರೂ ಮನೆಗೆ ಬಂದಾಗ ತಪ್ಪದೆ ಕರೆ ಒಕ್ಕಲು ಎಂದು ಬರೆಸುವಂತೆ ಮನವಿ ಮಾಡಿದರು.ಸಿದ್ದಾಪುರ ತಾಲೂಕು ಕರೆ ಒಕ್ಕಲು ಸಮುದಾಯದ ಗೌರವಾಧ್ಯಕ್ಷ ಮಹಾಬಲೇಶ್ವರ ಗೌಡ ಸರಕುಳಿ, ನಮ್ಮ ಮಕ್ಕಳ ಹಾಗೂ ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಇಂದಿನ ಸಮಗ್ರ ಕರೆ ಒಕ್ಕಲು ಸಂಘದಿಂದ ಕೈಗೊಂಡ ನಿರ್ಣಯ ಅಮೂಲ್ಯವಾಗಿದೆ ಎಂದರು.
ಸಮುದಾಯದ ಹಿರಿಯರು ಹಾಗೂ ಮುಖಂಡರು ಅಭಿಪ್ರಾಯಗಳನ್ನು ಹಂಚಿಕೊಂಡರು. ಶಿರಸಿ ತಾಲೂಕು ಕರೆ ಒಕ್ಕಲಿಗರ ಸಂಘದ ಅಧ್ಯಕ್ಷ ಅರುಣ ಗೌಡ, ಸಿದ್ದಾಪುರ ಸಂಘದ ಅಧ್ಯಕ್ಷ ಸುಬ್ರಾಯ ಗೌಡ, ಸೊರಬ ಸಂಘದ ಅಧ್ಯಕ್ಷ ಉಮಾಕಾಂತ ಗೌಡ ನೆಲ್ಲೂರು ಮತ್ತಿತರರು ಇದ್ದರು.