ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಮಾಡಿರುವುದರಿಂದ ಖಾಸಗಿ ಬಸ್‍ಗಳ ಪ್ರಯಾಣ ದರವನ್ನು ಏರಿಸಲು ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದಿಂದ ತೀರ್ಮಾನಿಸಲಾಯಿತು.ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯಲ್ಲಿ ಮಂಗಳವಾರ ನಡೆದ ಖಾಸಗಿ ಬಸ್ ಮಾಲೀಕರ ಸಂಘದ ಸಭೆಯಲ್ಲಿ ಪ್ರಯಾಣಿಕರ ದರ ಏರಿಕೆ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು. ಈ ವೇಳೆ ಚಿತ್ರದುರ್ಗ ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಮಾತನಾಡಿ, ಆಯಿಲ್, ಟೈರ್, ವಾಹನಗಳ ಬಿಡಿ ಭಾಗಗಳ ಬೆಲೆ ಗಗನಕ್ಕೆ ಏರಿದ್ದು, ಬಸ್‍ಗಳನ್ನು ಓಡಿಸಲು ಸಾಧ್ಯವಾಗುತ್ತಿಲ್ಲ. ರಾಜ್ಯ
ಸರ್ಕಾರದ ಶಕ್ತಿ ಯೋಜನೆಯಿಂದ ಮಹಿಳೆಯರು ನಮ್ಮ ಬಸ್‍ಗಳಲ್ಲಿ ಪ್ರಯಾಣಿಸುತ್ತಿಲ್ಲ. ಆರ್‌ಟಿಓ ಕಚೇರಿಯಲ್ಲಿ ಎಲ್ಲಾ ರೀತಿಯ ಶುಲ್ಕವನ್ನು ನೂರರಷ್ಟು ಹೆಚ್ಚಿಸಲಾಗಿದೆ. ಇದರಿಂದ ಖಾಸಗಿ ಬಸ್ ಮಾಲೀಕರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದರು.ಯಾವುದೇ ರೀತಿಯ ತೆರಿಗೆ ಶುಲ್ಕವನ್ನು ಕಡಿಮೆ ಮಾಡಲು ಸಹಕರಿಸಲಿಲ್ಲ. ಈ ಹಿಂದೆ ಸರ್ಕಾರಿ ಬಸ್‍ಗಳ ಪ್ರಯಾಣ ದರ ಹೆಚ್ಚಳವಾದಾಗಲೂ ನಾವುಗಳು ಹಳೆ ದರದಲ್ಲಿಯೇ ಬಸ್‍ಗಳನ್ನು ಓಡಿಸಿದ್ದೇವೆ. ಇದರಿಂದ ಪ್ರತಿನಿತ್ಯ ಒಂದು ಬಸ್‍ಗೆ ಎರಡು ಸಾವಿರ ರು. ಹೆಚ್ಚಿನ ಹೊರೆಯಾಗುತ್ತಿದೆ. ಆದ್ದರಿಂದ ಬಸ್ ಪ್ರಯಾಣ ದರವನ್ನು ಶೀಘ್ರದಲ್ಲಿಯೇ ಹೆಚ್ಚಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಖಾಸಗಿ ಬಸ್ ಮಾಲೀಕರ ಸಂಘದ ಕಾರ್ಯದರ್ಶಿ ಜಿ.ಬಿ.ಶೇಖರ್, ಉಪಾಧ್ಯಕ್ಷ ಇ.ವಿ.ಅಜ್ಜಪ್ಪ, ಖಜಾಂಚಿ ಎಸ್.ವಿ.ನಾಗರಾಜ್ ಸೇರಿದಂತೆ ಖಾಸಗಿ ಬಸ್ ಮಾಲೀಕರುಗಳು ಹಾಜರಿದ್ದರು.