ಸಾರಾಂಶ
ಸೋಮರಡ್ಡಿ ಅಳವಂಡಿ
ಕೊಪ್ಪಳ:ಬೆಂಗಳೂರು ಬಳಿಯ ದೇವನಹಳ್ಳಿಯಲ್ಲಿ ಕೈಗಾರಿಕಾ ಪಾರ್ಕ್ ಮಾಡಲು ಸ್ವಾಧೀನಪಡಿಸಿಕೊಂಡ ಭೂಮಿಯನ್ನು ರೈತ ಮತ್ತು ಪ್ರಗತಿಪರ ಸಂಘಟನೆಗಳ ಹೋರಾಟಕ್ಕೆ ಮಣಿದು ಕೈಬಿಟ್ಟಿರುವ ಸಿಎಂ ಸಿದ್ದರಾಮಯ್ಯ, ಕೊಪ್ಪಳ ಬಳಿ ಕಾರ್ಖಾನೆ ಸ್ಥಾಪಿಸಲು ಸ್ವಾಧೀನಪಡಿಸಿಕೊಂಡ ಭೂಸ್ವಾಧೀನ ಕೈಬಿಡುವುದು ಯಾವಾಗವೆಂದು ಜಿಲ್ಲೆಯ ಹೋರಾಟಗಾರರು ಪ್ರಶ್ನಿಸಿದ್ದಾರೆ.
ಅತ್ಯಾಧುನಿಕ ರಕ್ಷಣಾ ಮತ್ತು ವೈಮಾನಿಕ ಪಾರ್ಕ್ ಸ್ಥಾಪಿಸಲು ಬೆಂಗಳೂರಿನ ದೇವನಹಳ್ಳಿ ಬಳಿ 2021ರಲ್ಲಿ ಭೂಸ್ವಾಧೀನ ಪಡಿಸಿಕೊಂಡು 1777 ಎಕರೆ ಜಮೀನನ್ನು, ಮಂಗಳವಾರ ಸಿದ್ದರಾಮಯ್ಯ ಹೋರಾಟಗಾರ ಸಭೆ ನಡೆಸಿ ರದ್ದುಗೊಳಿಸಿದ್ದಾರೆ. ಅವರ ಈ ನಿರ್ಧಾರ ಕೊಪ್ಪಳ ಹೋರಾಟಗಾರರ ನಿರೀಕ್ಷೆ ಹೆಚ್ಚಿಸಿದೆ.ಕೊಪ್ಪಳ ಬಳಿ 1084 ಎಕರೆಯನ್ನು ಕೈಗಾರಿಕೆ ಸ್ಥಾಪನೆಗೆ ರಾಜ್ಯ ಸರ್ಕಾರವೇ ಸ್ವಾಧೀನಪಡಿಸಿಕೊಂಡು ಕಂಪನಿಗೆ ನೀಡಿದ್ದು, ಆ ಭೂಮಿಯಲ್ಲಿ ಕಾರ್ಖಾನೆ ಸ್ಥಾಪಿಸಲು ಕಂಪನಿ ಸಿದ್ಧತೆ ನಡೆಸಿದ್ದ ಸಂದರ್ಭದಲ್ಲೇ ಸಿಎಂ ಮೌಖಿಕವಾಗಿ ತಡೆ ನೀಡಿದ್ದಾರೆ. ಈ ಕುರಿತು ಲಿಖಿತ ಆದೇಶ ಮಾಡುವುದು ಯಾವಾಗವೆಂಬುದು ಯಕ್ಷಪ್ರಶ್ನೆಯಾಗಿದೆ.
ಗವಿಸಿದ್ಧೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಬೃಹತ್ ಹೋರಾಟದ ಬಳಿಕ ಜನಪ್ರತಿನಿಧಿಗಳ ನಿಯೋಗ ಸಿಎಂ ಭೇಟಿಯಾಗಿ ಚರ್ಚಿಸಿದ ಬಳಿಕ ಸಿಎಂ ಕಾರ್ಖಾನೆ ಸ್ಥಾಪನೆಗೆ ತಡೆ ನೀಡಿದ್ದರು. ಬಳಿಕ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಕೊಪ್ಪಳಕ್ಕೆ ಭೇಟಿ ನೀಡಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದರು. ಆದರೆ, ಅವರು ಈ ವರೆಗೆ ಜಿಲ್ಲೆಗೆ ಕಾಲಿಟ್ಟಿಲ್ಲ. ಇದೀಗ ಆ.4ರಂದು ಕೊಪ್ಪಳಕ್ಕೆ ಸಿದ್ದರಾಮಯ್ಯ ಆಗಮಿಸುವ ಮೊದಲೇ ಬಲ್ಡೋಟಾ ಕಾರ್ಖಾನೆ ಸ್ಥಾಪಿಸುವ ಆದೇಶ ರದ್ದುಗೊಳಿಸಿ ಬರಬೇಕೆಂದು ಕೊಪ್ಪಳ ಬಚಾವೋ ಆಂದೋಲನ ಸಮಿತಿ ಹಾಗೂ ಕೊಪ್ಪಳ ತಾಲೂಕು ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ಸಮಿತಿ ಪಟ್ಟುಹಿಡಿದಿದೆ.ಕೊಪ್ಪಳ ಹೋರಾಟಕ್ಕೆ ಆಹ್ವಾನ:
ದೇವನಹಳ್ಳಿ ಭೂ ಸ್ವಾಧೀನ ವಿರೋಧಿಸಿ ನಡೆಸಿದ ಹೋರಾಟದಲ್ಲಿ ಪಾಲ್ಗೊಂಡ ಹೋರಾಟಗಾರರಾದ ಮೇಧಾ ಪಾಟ್ಕರ್, ಪ್ರಕಾಶ ರೈ, ರಾಕೇಶ ಟಿಕಾಯತ್ ಸೇರಿದಂತೆ ಹಲವು ಮುಖಂಡರನ್ನು ಆಹ್ವಾನಿಸಿ ಕೊಪ್ಪಳ ಬಲ್ಡೋಟಾ ತೊಲಗಿಸಿ ಹೋರಾಟದ ನೇತೃತ್ವ ವಹಿಸಿ ಕೊಪ್ಪಳ ಸೇರಿದಂತೆ ಸುತ್ತಲ 20 ಗ್ರಾಮಗಳ ಬದುಕಿಗೆ ಬಂದಿರುವ ಸಂಚಕಾರದ ಧ್ವನಿಯಾಗುವಂತೆ ಕೋರಲು ನಿರ್ಧರಿಸಿದ್ದಾರೆ.ದೇವನಹಳ್ಳಿ ಭೂಸ್ವಾಧೀನ ಕೈಬಿಟ್ಟಿರುವುದರಿಂದ ನಮ್ಮ ಹೋರಾಟಕ್ಕೆ ಬಲ ಬಂದಿದೆ. ಸಿಎಂ ಸಿದ್ದರಾಮಯ್ಯ ಅವರು ಆ. 4ರಂದು ಕೊಪ್ಪಳಕ್ಕೆ ಆಗಮಿಸುವ ಮುನ್ನವೇ ಬಲ್ಡೋಟಾ ಕಾರ್ಖಾನೆ ಸ್ಥಾಪನೆ ರದ್ದುಪಡಿಸಿ ಆದೇಶಿಸಬೇಕು.ಅಲ್ಲಮಪ್ರಭು ಬೆಟ್ಟದೂರು ಹೋರಾಟಗಾರಬಲ್ಡೋಟಾ ವಿರುದ್ಧದ ಹೋರಾಟ ತೀವ್ರಗೊಳಿಸಲು ದೇವನಹಳ್ಳಿ ಭೂ ಸ್ವಾಧೀನ ರದ್ದತಿ ಹೋರಾಟದಲ್ಲಿ ಪಾಲ್ಗೊಂಡಿದ್ದ ಮೇಧಾ ಪಾಟ್ಕರ್, ರೈತ ಹೋರಾಟಗಾರರಾದ ರಾಕೇಶ ಟಿಕಾಯತ್ ಹಾಗೂ ಪ್ರಕಾಶ ರೈ ಅವರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ.
ಮಂಜುನಾಥ ಗೊಂಡಬಾಳ, ಹೋರಾಟಗಾರ