ಸಾರಾಂಶ
ಜಲಾಶಯದ ಗೇಟ್‌ಗಳನ್ನು ಬದಲಿಸಲು ಸಲಹೆ ನೀಡಲಾಗಿದೆ.
ಹೊಸಪೇಟೆ: ತುಂಗಭದ್ರಾ ಜಲಾಶಯದ ಎಲ್ಲ 33 ಗೇಟ್‌ಗಳನ್ನು ಬದಲಿಸಲು ತುಂಗಭದ್ರಾ ಮಂಡಳಿ ಸಭೆಯಲ್ಲಿ ಚರ್ಚಿಸಲಾಗಿದ್ದು, ಬೇಸಿಗೆ ಆರಂಭವಾಗುವುದರೊಳಗೆ ಟೆಂಡರ್ ಪ್ರಕ್ರಿಯೆ ಆರಂಭಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಜಲಾಶಯದಲ್ಲಿ ಶುಕ್ರವಾರ ತುಂಗಭದ್ರಾ ಮಂಡಳಿ ಅಧ್ಯಕ್ಷ ಎಸ್.ಎನ್. ಪಾಂಡೆ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಎ.ಕೆ. ಬಜಾಜ್ ನೇತೃತ್ವದ ತಾಂತ್ರಿಕ ಸಮಿತಿ ನೀಡಿದ ವರದಿ ಬಗ್ಗೆ ವಿಸ್ತೃತ ಚರ್ಚೆ ನಡೆದಿದೆ. ಜಲಾಶಯದ ಗೇಟ್‌ಗಳನ್ನು ಬದಲಿಸಲು ಸಲಹೆ ನೀಡಲಾಗಿದ್ದು, ಹಳೇ ಮಾದರಿಯಲ್ಲಿ ಗೇಟ್‌ಗಳ ವಿನ್ಯಾಸ ಸಿದ್ಧಪಡಿಸಬೇಕೋ ಇಲ್ಲವೇ ಆಧುನಿಕ ಶೈಲಿಯ ಮಾದರಿಯಲ್ಲಿ ಗೇಟ್‌ಗಳನ್ನು ನಿರ್ಮಾಣ ಮಾಡಬೇಕೋ ಎಂಬುದರ ಬಗ್ಗೆ 2025ರ ಜನವರಿಯೊಳಗೆ ಪರಿಣತರಿಂದ ಸಲಹೆ ಪಡೆದು ಅಂತಿಮಗೊಳಿಸಲು ಸಭೆಯಲ್ಲಿ ಚರ್ಚಿಸಲಾಯಿತು.ಜಲಾಶಯದ 33 ಗೇಟ್‌ಗಳನ್ನು ಒಮ್ಮೇಲೆ ಬದಲಿಸಲು ಹಣಕಾಸಿನ ಸ್ಥಿತಿಗತಿ, ನೀರಾವರಿ ವ್ಯವಸ್ಥೆಗೆ ಧಕ್ಕೆಯಾಗದಂತೆ ಹಂತ ಹಂತವಾಗಿ ಬದಲಿಸಲು ಸಭೆಯಲ್ಲಿ ಸಲಹೆ ಬಂದಿತು. ಈ ಬಗ್ಗೆಯೂ ಕ್ರಮ ವಹಿಸಲಾಗುವುದು ಎಂದು ಅಧ್ಯಕ್ಷ ಎಸ್.ಎನ್. ಪಾಂಡೆ ತಿಳಿಸಿದರು.
ಸಂಸ್ಥೆಯೊಂದಕ್ಕೆ ಜಲಾಶಯದ ಗೇಟ್‌ಗಳ ಸ್ಥಿತಿಗತಿ ಅಧ್ಯಯನ ನಡೆಸಲು ಅವಕಾಶ ನೀಡುವುದರ ಬಗ್ಗೆಯೂ ಚರ್ಚಿಸಲಾಯಿತು. ಬರುವ ಜನವರಿಯೊಳಗೆ ಎಲ್ಲ ಪ್ರಕ್ರಿಯೆ ಮುಗಿಸಿ, ಗೇಟ್ ಬದಲಿಸಲು ಕ್ರಮ ವಹಿಸಬೇಕು ಎಂದು ಸಭೆಯಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತವಾಯಿತು.ಜಲಾಶಯದ ನವಲಿ ಬಳಿ ಹೂಳಿನ ಸಮಸ್ಯೆ ಪರಿಹಾರಕ್ಕಾಗಿ ಸಮನಾಂತರ ಜಲಾಶಯ ನಿರ್ಮಾಣದ ಬಗ್ಗೆಯೂ ಚರ್ಚೆ ನಡೆಯಿತು. ಆದರೆ, ವಿಡಿಯೋ ಕಾನ್ಫರೆನ್ಸ್‌ನಲ್ಲಿದ್ದ ತೆಲಂಗಾಣದ ಪ್ರತಿನಿಧಿ ಅನಿಲ್‌ಕುಮಾರ ಇದಕ್ಕೆ ಸಹಮತ ವ್ಯಕ್ತಪಡಿಸಲಿಲ್ಲ. ಆಂಧ್ರಪ್ರದೇಶದ ಪ್ರತಿನಿಧಿ ನಾಗರಾಜ ಕೂಡ ಈ ಬಗ್ಗೆ ಚರ್ಚಿಸಲಾಗುವುದು ಎಂದು ಚುಟುಕಾಗಿ ಉತ್ತರಿಸಿದರು ಎಂದು ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ.
ಕೇಂದ್ರ ಸರ್ಕಾರದ ಪ್ರತಿನಿಧಿ ರೀಚಾ ಶರ್ಮಾ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು. ತುಂಗಭದ್ರಾ ಮಂಡಳಿ ಕಾರ್ಯದರ್ಶಿ ಒಆರ್‌ಕೆ ರೆಡ್ಡಿ, ಅಧಿಕಾರಿಗಳಾದ ಹನುಮಂತಪ್ಪ ದಾಸರ, ಬಸವರಾಜ, ನೀಲಕಂಠ ರೆಡ್ಡಿ, ರವಿಚಂದ್ರ ಮತ್ತಿತರರಿದ್ದರು.