೨೬ರಂದು ಸರಳವಾಗಿ ಸಂಡೂರು ಉತ್ಸವ ಆಚರಣೆಗೆ ನಿರ್ಧಾರ

| Published : Jan 17 2024, 01:48 AM IST

೨೬ರಂದು ಸರಳವಾಗಿ ಸಂಡೂರು ಉತ್ಸವ ಆಚರಣೆಗೆ ನಿರ್ಧಾರ
Share this Article
  • FB
  • TW
  • Linkdin
  • Email

ಸಾರಾಂಶ

ಜ. ೨೬ರಂದು ಸಂಜೆ ಸಂಡೂರಿನ ಎಪಿಎಂಸಿ ಬಳಿಯ ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜು ಆವರಣದಲ್ಲಿ ಸಂಡೂರು ಉತ್ಸವವನ್ನು ಆಚರಿಸಲು ತೀರ್ಮಾನಿಸಲಾಯಿತು.

ಸಂಡೂರು: ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ಶಾಸಕ ಈ. ತುಕಾರಾಂ ಅವರ ಅಧ್ಯಕ್ಷತೆಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಸಂಡೂರು ಉತ್ಸವ ಆಚರಣೆ, ಟ್ರಾಫಿಕ್ ನಿಯಂತ್ರಣ, ಸಾರ್ವಜನಿಕ ಆಸ್ತಿಗಳ ಸಂರಕ್ಷಣೆ ಮುಂತಾದ ವಿಷಯಗಳನ್ನು ಪ್ರಮುಖವಾಗಿ ಚರ್ಚಿಸಲಾಯಿತು. ಜ. ೨೬ರಂದು ಸಂಜೆ ಸಂಡೂರಿನ ಎಪಿಎಂಸಿ ಬಳಿಯ ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜು ಆವರಣದಲ್ಲಿ ಸಂಡೂರು ಉತ್ಸವವನ್ನು ಆಚರಿಸಲು ತೀರ್ಮಾನಿಸಲಾಯಿತು.

ಶಾಸಕರು ಮಾತನಾಡಿ, ಬರಗಾಲದ ಹಿನ್ನೆಲೆಯಲ್ಲಿ ಸರಳವಾಗಿ ಸಂಡೂರು ಉತ್ಸವವನ್ನು ಆಚರಿಸೋಣ. ಸಂಜೆ ೪ ಗಂಟೆಯಿಂದ ತಾಲೂಕು ಕಚೇರಿಯಿಂದ ಎಪಿಎಂಸಿ ಬಳಿಯ ಕಾಲೇಜಿನವರೆಗೆ ಕಲಾತಂಡಗಳ ಮೆರವಣಿಗೆ ನಡೆಯಲಿದೆ. ನಂತರ ಕಾಲೇಜಿನ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು. ಮುಂದಿನ ೩೦- ೫೦ ವರ್ಷದಲ್ಲಾಗುವ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಶಾಲೆ, ಅಂಗನವಾಡಿ ಕಟ್ಟಡ ಮುಂತಾದ ಸಾರ್ವಜನಿಕ ಉದ್ದೇಶಕ್ಕಾಗಿ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಹಾಗೂ ಪಟ್ಟಣದಲ್ಲಿರುವ ಸರ್ಕಾರಿ ಜಾಗವನ್ನು ಮೀಸಲಿಡಬೇಕಲ್ಲದೆ, ಅವುಗಳನ್ನು ಸಂರಕ್ಷಿಸಬೇಕು. ಸ್ಮಶಾನಗಳಿರದ ಕಡೆಗಳಲ್ಲಿ ಹೆಚ್ಚುವರಿ ಸರ್ಕಾರಿ ಜಾಗವನ್ನು ಸ್ಮಶಾನಕ್ಕಾಗಿ ಮೀಸಲಿಡಬೇಕು ಎಂದು ತಹಸೀಲ್ದಾರ್ ಜಿ. ಅನಿಲ್‌ಕುಮಾರ್ ಹಾಗೂ ತಾಲೂಕು ಪಂಚಾಯಿತಿ ಇಒ ಎಚ್. ಷಡಾಕ್ಷರಯ್ಯ ಅವರಿಗೆ ತಿಳಿಸಿದರು. ತಾಲೂಕಿನಲ್ಲಿ ಪ್ರಗತಿಯಲ್ಲಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು. ಸಂಡೂರು ಪಟ್ಟಣದ ಜನಸಂಖೆಯು ಹೆಚ್ಚುತ್ತಿದ್ದು, ಏರುತ್ತಿರುವ ಜನಸಂಖ್ಯೆಗೆ ಸಮರ್ಪಕವಾಗಿ ನೀರನ್ನು ಒದಗಿಸಲು, ಕುರೆಕುಪ್ಪ ಬಳಿಯಲ್ಲಿನ ಕಾಲುವೆಯಿಂದ ಹೆಚ್ಚಿನ ಪ್ರಮಾಣದ ನೀರನ್ನು ಪಡೆಯುವುದು ಅಗತ್ಯವಿದೆ. ಅವಶ್ಯವಿರುವ ನೀರು, ಅದನ್ನು ಸಂಗ್ರಹಿಸಲು ಬೇಕಾಗುವ ನೀರು ಸಂಗ್ರಹ ಟ್ಯಾಂಕ್‌ಗಳು, ಪೈಪ್‌ಲೈನ್ ಹಾಕಲು ಬೇಕಾಗುವ ಹಣದ ಅಂದಾಜು ಪಟ್ಟಿಯನ್ನು ತಯಾರಿಸಿ ಸಲ್ಲಿಸಲು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಎಇಇ ವಿನಾಯಕ ಹಾಗೂ ಪುರಸಭೆ ಮುಖ್ಯಾಧಿಕಾರಿ ಕೆ. ಜಯಣ್ಣ ಅವರಿಗೆ ಸೂಚಿಸಿದರು. ರಸ್ತೆಗಳು ಇರುವುದು ಸಾರ್ವಜನಿಕರ ಉಪಯೋಗಕ್ಕಾಗಿ. ಆದರೆ, ಕೆಲವು ಕಡೆಗಳಲ್ಲಿ ಅದಿರು ಲಾರಿಗಳು ಉಂಟು ಮಾಡುವ ಟ್ರಾಫಿಕ್ ಜಾಮ್‌ನಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ವಾಹನಗಳ ವೇಗ ನಿಯಂತ್ರಿಸಲು, ಟ್ರಾಫಿಕ್ ಜಾಮ್ ತಪ್ಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳು ಸೂಚಿಸಿದರು. ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.