ಟಿಎಸ್ಎಸ್ ಅವ್ಯವಹಾರ ಕುರಿತು ಕಾನೂನು ಕ್ರಮಕ್ಕೆ ತೀರ್ಮಾನ

| Published : Sep 25 2024, 12:58 AM IST

ಸಾರಾಂಶ

ಒಟ್ಟಾರೆ ಇಡೀ ಸಭೆ ಹಿಂದಿನ ಅಕ್ರಮಗಳ ಮೇಲೆ ಕ್ರಮಕ್ಕೆ ಮತ್ತು ವಸೂಲಿಗೆ ತೀರ್ಮಾನಿಸಿಯೇ ಬಂದಂತೆ, ಐದು ವರ್ಷಗಳ ಮರುಲೆಕ್ಕ ಪರಿಶೋಧನಾ ವರದಿಯ ಒಂದೊಂದು ವಿಷಯವನ್ನು ಓದಿ ಹೇಳಿ ಸಭೆಯ ಅನುಮತಿ ಕೇಳಿದಾಗಲೂ ಭರ್ಜರಿ ಚಪ್ಪಾಳೆಯೊಂದಿಗೆ ಪ್ರತಿಕ್ರಿಯೆ ದೊರೆಯಿತು.

ಶಿರಸಿ: ಕುತೂಹಲಕ್ಕೆ ಕಾರಣವಾಗಿದ್ದ ಟಿಎಸ್‌ಎಸ್ ವಾರ್ಷಿಕ ಸರ್ವ ಸಾಧಾರಣ ಸಭೆ ಯಾವುದೇ ಗದ್ದಲ, ಗೊಂದಲಗಳಿಲ್ಲದೆ ಸುಗಮವಾಗಿ ನಡೆಯಿತಲ್ಲದೆ, ೨೦೧೮- ೧೯ನೇ ಸಾಲಿನಿಂದ ೨೦೨೨- ೨೩ನೇ ಸಾಲಿನವರೆಗಿನ ಐದು ವರ್ಷಗಳ ಶಾಸನಬದ್ಧ ಮರುಲೆಕ್ಕ ಪರಿಶೋಧನೆಯಲ್ಲಿ ಹೇಳಲಾದ ಅವ್ಯವಹಾರ, ಹಣ ದುರುಪಯೋಗ, ಆಕ್ಷೇಪಣೆ ಮತ್ತು ವಸೂಲಾತಿಗೆ ಕಾನೂನು ಕ್ರಮ ಕೈಗೊಳ್ಳಲು ಹಾಲಿ ಆಡಳಿತ ಮಂಡಳಿಗೆ ಸರ್ವ ಸದಸ್ಯರು ಅನುಮತಿ ನೀಡಿದರು.

ಮಂಗಳವಾರ ಬೆಳಗ್ಗೆ ನಿಗದಿತ ಅವಧಿಗೆ ಸಭೆ ಆರಂಭವಾಯಿತು. ಸಭೆಗೆ ಸದಸ್ಯರು ಕಿಕ್ಕಿರಿದ ಸಂಖ್ಯೆಯಲ್ಲಿ ಆಗಮಿಸಿದ್ದರು. ಟಿಎಸ್‌ಎಸ್ ಮಾರಾಟ ಅಂಗಳದ ಕಟ್ಟಡದಲ್ಲಿ ಹಾಕಿದ್ದ ಎಲ್ಲ ಕುರ್ಚಿಗಳೂ ಭರ್ತಿಯಾಗಿದ್ದವು. ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿಯ ಎಲ್ಲ ನಿರ್ದೇಶಕರು ಮತ್ತು ಪ್ರಭಾರಿ ಪ್ರಧಾನ ವ್ಯವಸ್ಥಾಪಕರು ವೇದಿಕೆಯಲ್ಲಿದ್ದರು.

ಸಭೆ ಆರಂಭಗೊಂಡ ತಕ್ಷಣ ಹತ್ತು ಹನ್ನೆರಡು ಸಂಖ್ಯೆಯಲ್ಲಿದ್ದ ವಿರೋಧಿ ಗುಂಪು, ವಿಷಯಕ್ಕೆ ಸಂಬಂಧಪಡದ ಬೇರೆ ವಿಷಯಗಳನ್ನೆತ್ತಿ ಕೂಗಲು ಆರಂಭಿಸಿದರು. ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ವಿಷಯಕ್ಕೆ ಸಂಬಂಧಪಟ್ಟಿದ್ದನ್ನು ಮಾತ್ರ ಮಾತನಾಡಿ ಹಾಗೂ ಆಯಾ ವಿಷಯ ಪ್ರಸ್ತಾಪವಾದಾಗ ಮಾತನಾಡಲು ಅವಕಾಶವಿದೆ ಎಂದರು.

ಒಟ್ಟಾರೆ ಇಡೀ ಸಭೆ ಹಿಂದಿನ ಅಕ್ರಮಗಳ ಮೇಲೆ ಕ್ರಮಕ್ಕೆ ಮತ್ತು ವಸೂಲಿಗೆ ತೀರ್ಮಾನಿಸಿಯೇ ಬಂದಂತೆ, ಐದು ವರ್ಷಗಳ ಮರುಲೆಕ್ಕ ಪರಿಶೋಧನಾ ವರದಿಯ ಒಂದೊಂದು ವಿಷಯವನ್ನು ಓದಿ ಹೇಳಿ ಸಭೆಯ ಅನುಮತಿ ಕೇಳಿದಾಗಲೂ ಭರ್ಜರಿ ಚಪ್ಪಾಳೆಯೊಂದಿಗೆ ಪ್ರತಿಕ್ರಿಯೆ ದೊರೆಯಿತು. ಮಧ್ಯಾಹ್ನದ ಭೋಜನದ ವೇಳೆಗೆ ಎರಡು ವರ್ಷದ ಮರುಲೆಕ್ಕ ಪರಿಶೋಧನಾ ವರದಿಯಲ್ಲಿ ಹೇಳಲಾದ ಅವ್ಯವಹಾರಗಳ ಮೇಲೆ ಕ್ರಮ ಕೈಗೊಳ್ಳಲು ಸಭೆ ಬಹುಮತದ ಅಂಗೀಕಾರ ನೀಡಿತ್ತು.ಭೋಜನದ ನಂತರ ಎರಡು ಗಂಟೆಯ ಸಮಯದಲ್ಲಿ, ಮಾಜಿ ಕಾರ್ಯಾಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ರಾಮಕೃಷ್ಣ ಹೆಗಡೆ ಕಡವೆ ತಾವು ಮಾತನಾಡುವುದಾಗಿ ಅಧ್ಯಕ್ಷರಲ್ಲಿ ತಿಳಿಸಿದರು. ಅಧ್ಯಕ್ಷರು ನಂತರ ಮಾತನಾಡುವಂತೆ ಹೇಳಿದರೂ, ತಾನು ಈಗಲೇ ಮಾತನಾಡುವುದಾಗಿ ಹೇಳಿ, ತಾನು ನಿರ್ದೇಶಕ ಹುದ್ದೆಗೆ ರಾಜೀನಾಮೆ ಸಲ್ಲಿಸುವುದಾಗಿ ಪ್ರಕಟಿಸಿದರು. ಇದನ್ನೇ ನಿರೀಕ್ಷಿಸುತ್ತಿದ್ದಂತೆ ಇಡೀ ಸಭೆ ಇದಕ್ಕೆ ಹರ್ಷೋದ್ಗಾರ ಮಾಡಿದ್ದಲ್ಲದೆ, ಚಪ್ಪಾಳೆಯ ಮೂಲಕ ಅನುಮೋದಿಸಿತು. ನಂತರ ವೇದಿಕೆಯಿಂದ ತೆರಳಿದ ಅವರು, ಪ್ರಭಾರಿ ಪ್ರಧಾನ ವ್ಯವಸ್ಥಾಪಕ ಗಿರೀಶ ಹೆಗಡೆ ಅವರಲ್ಲಿ ರಾಜೀನಾಮೆ ಪತ್ರ ನೀಡಿ ನಿರ್ಗಮಿಸಿದರು. ನಂತರ ಸಭೆಯಲ್ಲಿ ಮೂರು ವರ್ಷಗಳ ಮರುಲೆಕ್ಕ ಪರಿಶೋಧನಾ ವರದಿಗೆ ಅನುಮೋದನೆ ನೀಡಲಾಯಿತು. ಇದಕ್ಕೂ ಮೊದಲು ಬೆಳಗ್ಗೆ ಕಳೆದ ಸಾಲಿನ ವಾರ್ಷಿಕ ವರದಿ ಅಢಾವೆ ಪತ್ರಿಕೆಯ ಮೇಲೆ ಚರ್ಚೆ ನಡೆದು ಅನುಮೋದನೆ ನೀಡಲಾಯಿತು.ಬಿಗಿ ಬಂದೋಬಸ್ತ್‌

ಕಳೆದ ವರ್ಷದ ಸಭೆ ಮತ್ತು ಹೊಸ ಆಡಳಿತ ಮಂಡಳಿ ಬಂದ ಮೇಲೆ ಕರೆದ ವಿಶೇಷ ಸರ್ವಸಾಧಾರಣ ಸಭೆಯಲ್ಲಿ ಒಂದಿಷ್ಟು ಗದ್ದಲ ನಡೆದಿದ್ದರಿಂದ ಈ ಸಲದ ಸಭೆಗೆ ವಿಶೇಷ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಷೇರು ಸದಸ್ಯತ್ವ ಇದ್ದವರನ್ನಷ್ಟೇ ಗುರುತು ಚೀಟಿ ನೀಡಿ ಟಿಎಸ್‌ಎಸ್ ಗೇಟಿನ ಒಳಗೆ ಬಿಡಲಾಗಿತ್ತು. ಸಾರ್ವಜನಿಕರಿಗೆ ಹಾಗೂ ಪತ್ರಕರ್ತರಿಗೆ ಪ್ರವೇಶವಿರಲಿಲ್ಲ. ಟಿಎಸ್‌ಎಸ್ ನಿರ್ದೇಶಕ ಸ್ಥಾನಕ್ಕೆ ರಾಮಕೃಷ್ಣ ಹೆಗಡೆ ಕಡವೆ ರಾಜೀನಾಮೆ

ಶಿರಸಿ: ಟಿಎಸ್‌ಎಸ್‌ನ ಆಡಳಿತ ಮಂಡಳಿ ನಿರ್ದೇಶಕ ಹಾಗೂ ಮಾಜಿ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ತಮ್ಮ ಸ್ಥಾನಕ್ಕೆ ಸೆ. ೨೪ರಂದು ರಾಜೀನಾಮೆ ಸಲ್ಲಿಸಿದ್ದಾರೆ.ರಾಜೀನಾಮೆ ಪತ್ರವನ್ನು ಟಿಎಸ್‌ಎಸ್‌ನ ಪ್ರಭಾರ ಪ್ರಧಾನ ವ್ಯವಸ್ಥಾಪಕರಿಗೆ ಸಲ್ಲಿಸಿ, ಪ್ರಸ್ತುತ ಆಡಳಿತ ಮಂಡಳಿಗೆ ರೈತಪರ ಕಾಳಜಿ ಮತ್ತು ಸಂಘದ ಅಭಿವೃದ್ಧಿ ಚಿಂತನೆ ಇಲ್ಲವಾಗಿದೆ. ನನ್ನ ವೈಯಕ್ತಿಕ ವ್ಯವಹಾರ ಮಾಹಿತಿಯನ್ನು ಬೇರೆಯವರಿಗೆ ಕೊಡಲಾಗಿದೆ. ನನ್ನೊಬ್ಬನನ್ನೇ ಗುರಿಯಾಗಿಸಿ, ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ. ಪ್ರತಿ ಸಭೆಯ ಠರಾವುಗಳನ್ನು ನಿರ್ದೇಶಕನಾದ ನನಗೆ ನೀಡುತ್ತಿಲ್ಲ. ಈ ಕಾರಣದಿಂದ ಈಗಿನ ಆಡಳಿತ ಮಂಡಳಿಯ ದ್ವೇಷ ಸಾಧನೆಗೆ ಮನನೊಂದು ತೋಟಗಾರ್ಸ್ ಕೋ ಆಪರೇಟಿವ್ ಸೇಲ್ ಸೊಸೈಟಿಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.