ಗಣಿಗಾರಿಕೆ ನಡೆಸದಂತೆ ಆಗ್ರಹಿಸಿ ಮತದಾನ ಬಹಿಷ್ಕಾರಕ್ಕೆ ನಿರ್ಧಾರ

| Published : Mar 29 2024, 12:46 AM IST

ಗಣಿಗಾರಿಕೆ ನಡೆಸದಂತೆ ಆಗ್ರಹಿಸಿ ಮತದಾನ ಬಹಿಷ್ಕಾರಕ್ಕೆ ನಿರ್ಧಾರ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಬಾಣಸಂದ್ರ ಸುತ್ತಮುತ್ತಲ ಹತ್ತಾರು ಗ್ರಾಮಗಳಲ್ಲಿ ಕೋಬಾಲ್ಟ್ ಮತ್ತು ನಿಕ್ಕಲ್ ಗಣಿಗಾರಿಕೆ ನಡೆಯುವ ಬಗ್ಗೆ ಖಾತರಿ ಇಲ್ಲ. ಇದು ಕೇವಲ ಸರ್ವೇ ಮಾತ್ರ ಎಂದು ಉಪವಿಭಾಗಾಧಿಕಾರಿ ಸಪ್ತಶ್ರೀ ಹೇಳಿದ್ದಾರೆ. ಆದರೂ ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲ ಎಂದು ಖಚಿತವಾಗುವವರೆಗೆ ಬಹಿಷ್ಕಾರ ಹಿಂದಕ್ಕಿಲ್ಲವೆಂದು ಗ್ರಾಮಸ್ಥರ ಪಟ್ಟು ಹಿಡಿದಿದ್ದಾರೆ.

ತಾಲೂಕಿನ ಬಾಣಸಂದ್ರ ಸುತ್ತಮುತ್ತಲ ಹತ್ತಾರು ಗ್ರಾಮಗಳಲ್ಲಿ ಕೋಬಾಲ್ಟ್ ಮತ್ತು ನಿಕ್ಕಲ್ ಗಣಿಗಾರಿಕೆ ನಡೆಯುವ ಬಗ್ಗೆ ಖಾತರಿ ಇಲ್ಲ. ಇದು ಕೇವಲ ಸರ್ವೇ ಮಾತ್ರ ಎಂದು ಉಪವಿಭಾಗಾಧಿಕಾರಿ ಸಪ್ತಶ್ರೀ ಹೇಳಿದ್ದಾರೆ. ಆದರೂ ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲ ಎಂದು ಖಚಿತವಾಗುವವರೆಗೆ ಬಹಿಷ್ಕಾರ ಹಿಂದಕ್ಕಿಲ್ಲವೆಂದು ಗ್ರಾಮಸ್ಥರ ಪಟ್ಟು ಹಿಡಿದಿದ್ದಾರೆ.

ಕನ್ನಡಪ್ರಭ ವಾರ್ತೆ ತುರುವೇಕೆರೆ

ತಾಲೂಕಿನ ಬಾಣಸಂದ್ರ ಸುತ್ತಮುತ್ತಲ ಹತ್ತಾರು ಗ್ರಾಮಗಳಲ್ಲಿ ಕೋಬಾಲ್ಟ್ ಮತ್ತು ನಿಕ್ಕಲ್ ಗಣಿಗಾರಿಕೆ ಮಾಡುವ ಸಲುವಾಗಿ ಕೇಂದ್ರ ಸರ್ಕಾರದಿಂದ ಆದೇಶ ಬಂದಿದೆ. ಇದು ಅಲ್ಲಿ ನೂರಾರು ವರ್ಷಗಳಿಂದ ಜೀವನ ನಡೆಸುತ್ತಿರುವ ರೈತಾಪಿಗಳ ಜೀವನದ ಮೇಲೆ ದಬ್ಬಾಳಿಕೆ ಮಾಡಿದಂತಾಗುತ್ತದೆ. ಅಲ್ಲದೇ ಸಾವಿರಾರು ಕುಟುಂಬಗಳು ಬೀದಿಗೆ ಬೀಳುವುದರಿಂದ ಕೂಡಲೇ ಗಣಿಗಾರಿಕೆ ಯೋಜನೆಯನ್ನು ಕೈ ಬಿಡಬೇಕೆಂದು ಆಗ್ರಹಿಸಿ ಏಪ್ರಿಲ್ ೨೬ ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವುದಾಗಿ ಹತ್ತಾರು ಗ್ರಾಮಗಳ ಜನರು ಉಪವಿಭಾಗಾಧಿಕಾರಿಗಳಿಗೆ ತಿಳಿಸಿದ್ದಾರೆ. ತಾಲೂಕಿನ ಕೋಡಿಹಳ್ಳಿ ಮತ್ತು ಕುಣಿಕೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದ ಉಪವಿಭಾಗಾಧಿಕಾರಿಗಳಾದ ಸಪ್ತಶ್ರೀ, ಸಹಾಯಕ ಚುನಾವಣಾಧಿಕಾರಿಗಳಾದ ಎನ್.ಮಂಜುನಾಥ್, ತಹಸೀಲ್ದಾರ್ ವೈ.ಎಂ.ರೇಣುಕುಮಾರ್, ಡಿವೈಎಸ್ಪಿ ಓಂಪ್ರಕಾಶ್, ಸಿಪಿಐ ಲೋಹಿತ್ ಸೇರಿದಂತೆ ಹಲವು ಅಧಿಕಾರಿಗಳು ಗ್ರಾಮಸ್ಥರ ಮನವೊಲಿಸುವ ಕಾರ್ಯ ಮಾಡಿದರು.

ಭೂವಿಜ್ಞಾನ ಮತ್ತು ಗಣಿ ಇಲಾಖಾ ವತಿಯಿಂದ ತಾಲೂಕಿನ ಬಾಣಸಂದ್ರ, ಕುಣಿಕೇನಹಳ್ಳಿ, ಕೋಡಿಹಳ್ಳಿ, ಬಲಮಾದಿಹಳ್ಳಿ, ದುಂಡ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ನಿಕ್ಕಲ್ ಮತ್ತು ಕೋಬಾಲ್ಟ್ ಎಂಬ ಲೋಹಗಳು ದೊರೆಯುತ್ತವೆ ಎಂದು ಸರ್ವೇಯಲ್ಲಿ ತಿಳಿಸಲಾಗಿದೆ.

ಈ ಪ್ರದೇಶದಲ್ಲಿರುವ ಸರ್ಕಾರಿ ಜಮೀನುಗಳು, ಖಾಸಗಿ ಜಮೀನುಗಳು ಮತ್ತು ಅರಣ್ಯ ಪ್ರದೇಶಗಳ ಬಗ್ಗೆ ಮಾಹಿತಿ ನೀಡುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವತಿಯಿಂದ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇದರಿಂದಾಗಿ ಈ ಪ್ರದೇಶದಲ್ಲಿರುವ ಸಾವಿರಾರು ಕುಟುಂಬಗಳಿಗೆ ಜೀವನಾಧಾರ ಇಲ್ಲದಂತಾಗುತ್ತದೆ. ಅಲ್ಲದೇ ಗಣಿಗಾರಿಕೆ ನಡೆದರೆ ಹತ್ತಾರು ಸಾಂಕ್ರಾಮಿಕ ರೋಗಗಳು ಉಂಟಾಗುತ್ತದೆ ಎಂಬ ಭೀತಿಯಲ್ಲಿ ಜನರು ಇದ್ದಾರೆ ಎಂದು ಗ್ರಾಮಸ್ಥರು ಅಧಿಕಾರಿಗಳ ಗಮನಕ್ಕೆ ತಂದರು.

ಮತದಾನ ಬಹಿಷ್ಕಾರ

ತಮ್ಮ ಕುಟುಂಬಗಳೇ ತ್ರಿಶಂಕು ಸ್ಥಿತಿಯಲ್ಲಿರುವ ಇರುವ ಸಂದರ್ಭ ಇರುವುದರಿಂದ ನಮಗೆ ಈ ಲೋಕಸಭಾ ಚುನಾವಣೆ ಬೇಡವಾಗಿದೆ. ಬದುಕೇ ಬರಡಾಗುತ್ತಿರುವ ಈ ಸಂದರ್ಭದಲ್ಲಿ ಹತ್ತಾರು ಗ್ರಾಮಗಳ ಜನರು ಮತದಾನ ಮಾಡದಂತೆ ನಿರ್ಧರಿಸಿದ್ದೇವೆ ಎಂದು ಜನರು ಅಧಿಕಾರಿಗಳಿಗೆ ತಿಳಿಸಿದರು.

ಮತದಾನ ಮಾಡಿ

ಈ ಪ್ರದೇಶದಲ್ಲಿ ಸರ್ವೇ ಕಾರ್ಯ ಮಾಡುವುದಕ್ಕೂ, ಈ ಚುನಾವಣೆಗೂ ಸಂಬಂಧವಿಲ್ಲ. ದಯಮಾಡಿ ಎಲ್ಲರೂ ಮತದಾನದಲ್ಲಿ ಭಾಗವಹಿಸಬೇಕೆಂ ದು ಸಪ್ತಶ್ರೀ ಮನವಿ ಮಾಡಿಕೊಂಡರು. ಆದರೆ ಸಾರ್ವಜನಿಕರು ಗಣಿಗಾರಿಕೆ ನಡೆಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳುವ ತನಕ ಮತದಾನದಲ್ಲಿ ಭಾಗವಹಿಸುವುದಿಲ್ಲ ಎಂದು ಪಟ್ಟು ಹಿಡಿದರು. ಆದರೆ ಉಪವಿಭಾಗಾಧಿಕಾರಿಗಳು ಗಣಿಗಾರಿಕೆ ನಡೆಸುವುದು ಬಿಡುವುದು ಸರ್ಕಾರಕ್ಕೆ ಬಿಟ್ಟ ವಿಷಯ. ಇದರಲ್ಲಿ ನಮ್ಮದೇನೂ ಪಾತ್ರವಿಲ್ಲ. ಈ ಪ್ರಕ್ರಿಯೆಗಳು ನಡೆಯಲು ಸಾಕಷ್ಟು ಕಾಲ ಹಿಡಿಯಲಿದೆ. ಆದರೆ ಈಗ ಹತ್ತಿರದಲ್ಲೇ ಇರುವ ಚುನಾವಣೆಯ ನ್ನು ಬಹಿಷ್ಕರಿಸುವುದು ಸರಿಯಲ್ಲ. ಎಲ್ಲರೂ ತಮ್ಮ ಹಕ್ಕನ್ನು ಚಲಾಯಿಸಬೇಕು. ಇದಕ್ಕೂ ಗ್ರಾಮಸ್ಥರು ಬಗ್ಗದಿದ್ದಾಗ, ಮತಕೇಂದ್ರಗಳಲ್ಲಿ ನಮ್ಮ ಮತಗಟ್ಟೆ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸಲು ಬರುತ್ತಾರೆ. ಆ ವೇಳೆ ಸಾರ್ವಜನಿಕರು ಮತದಾನ ಪ್ರಕ್ರಿಯೆಗೆ ಅಡ್ಡಿ ಉಂಟು ಮಾಡಬಾರದು. ಮತದಾನ ಮಾಡಲು ಬರುವವರನ್ನು ತಡೆಯಕೂಡದು. ಇಂತಹ ಕೃತ್ಯ ಕಂಡು ಬಂದಲ್ಲಿ ವಿಧಿಯಿಲ್ಲದೇ ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಲಿದೆ ಎಂದರು.

ಮತದಾನ ಮಾಡಿ ಎಂದು ನಾವೆಲ್ಲರೂ ಮನವಿ ಮಾಡಿಕೊಳ್ಳುತ್ತಿದ್ದೇವೆ. ನಿಮ್ಮ ಮನವಿಯನ್ನು ಸಂಬಂಧಿಸಿದ ಇಲಾಖಾ ಗಮನಕ್ಕೂ ತರುವುದಾಗಿ ಹೇಳಿದ್ದೇವೆ. ಇಷ್ಟಾದರೂ ನೀವುಗಳು ಮತಚಲಾವಣೆ ಮಾಡುವುದಿಲ್ಲ ಎಂದು ಪಟ್ಟು ಹಿಡಿಯುವುದು ಒಳಿತಲ್ಲ. ಮಿಕ್ಕಿದ್ದು ನಿಮ್ಮ ಇಷ್ಠಕ್ಕೆ ಬಿಟ್ಟದ್ದು. ಆದರೆ ಯಾರೂ ಸಹ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ಉಪವಿಭಾಗಾಧಿಕಾರಿ ಸಪ್ತಶ್ರೀ ಮನವಿ ಮಾಡಿಕೊಂಡರು.

ಈ ಸಂಧರ್ಭದಲ್ಲಿ ಕೋಡಿಹಳ್ಳಿ, ಬಾಣಸಂದ್ರ, ದುಂಡ, ಕುಣಿಕೇನಹಳ್ಳಿ, ಬಲಮಾದಿಹಳ್ಳಿಯ ನೂರಾರು ರೈತರು ಹಾಜರಿದ್ದರು. ಗ್ರಾಮ ಪಂಚಾಯ್ತಿ ಸದಸ್ಯರಾದ ನವೀನ್, ಶಿವಕುಮಾರ್, ಆನಂದ್ ಮರಿಯಾ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ದುಂಡ ಸುರೇಶ್, ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಎಪಿಎಂಸಿ ಮಾಜಿ ಅಧ್ಯಕ್ಷ ನರಸಿಂಹರಾಜು, ಮುಖಂಡರಾದ ಪ್ರಕಾಶ್, ಈಶ್ವರಯ್ಯ, ಮಲ್ಲಿಕಾರ್ಜುನ್, ನಾಗಮ್ಮ, ಜ್ಯೋತಿ, ಕಿಟ್ಟಿ, ಶಶಿಧರ್, ಪರಮೇಶ್, ಮಂಜುನಾಥ್, ಬಸವಣ್ಣ, ಗುರುಲಿಂಗಯ್ಯ, ಯೋಗೀಶ್, ಕೃಷ್ಣಸ್ವಾಮಿ, ಚಂದ್ರಣ್ಣ, ಕುಮಾರ್, ಶೇಖರಣ್ಣ, ಬಸವರಾಜು, ಮಲ್ಲಿಕ್, ಕಲಾವತಿ, ಸಾವಿತ್ರಮ್ಮ ಸೇರಿದಂತೆ ಹಲವಾರು ಮಂದಿ ಇದ್ದರು.

-----------------------ಗಣಿಗಾರಿಕೆ ನಡೆಯುತ್ತದೋ, ಬಿಡುತ್ತದೋ ಗೊತ್ತಿಲ್ಲಈ ಪ್ರದೇಶದಲ್ಲಿ ಕೋಬಾಲ್ಟ್ ಮತ್ತು ನಿಕ್ಕಲ್ ದೊರೆಯುತ್ತದೆ ಎಂಬ ಮಾಹಿತಿಯನ್ನು ಆಧರಿಸಿ ಇಲಾಖಾ ವತಿಯಿಂದ ಕೇವಲ ಸರ್ವೇ ಕಾರ್ಯಕ್ಕೆ ಸೂಚನೆ ಬಂದಿದೆ. ಈ ಪ್ರದೇಶದಲ್ಲಿ ಎಷ್ಟೆಷ್ಟು ಪ್ರಮಾಣದಲ್ಲಿ ಜಮೀನು ಇದೆ ವಿವರ ಕಳಿಸಿ ಎಂದು ಮಾತ್ರ ಕೇಳಲಾಗಿದೆ ಎಂದು ಉಪವಿಭಾಗಾಧಿಕಾರಿ ಸಪ್ತಶ್ರೀ ಅವರು ಹೇಳಿದರು.

ಇದು ಇನ್ನೂ ಆರಂಭ. ಗಣಿಗಾರಿಕೆ ನಡೆಯುತ್ತದೋ, ಬಿಡುತ್ತದೋ ಗೊತ್ತಿಲ್ಲ. ಆದರೆ ನಾವು ಸರ್ಕಾರ ಮತ್ತು ಜನರ ಮಧ್ಯೆ ಸೇತುವೆ ರೀತಿ ಕಾರ್ಯ ಮಾಡಬೇಕಿರುವುದರಿಂದ ಸರ್ವೇ ಮಾಡಿಸಬೇಕಿದೆ. ಸರ್ವೇ ಕಾರ್ಯ ಇನ್ನೂ ಆಗಿಲ್ಲ. ಈ ಪ್ರದೇಶದಲ್ಲಿ ಕೋಬಾಲ್ಟ್, ನಿಕ್ಕಲ್ ಲೋಹ ದೊರೆಯುತ್ತದೋ, ಬಿಡುತ್ತದೋ ನಮಗೂ ಗೊತ್ತಿಲ್ಲ. ಕೇವಲ ಸರ್ವೇ ಮಾಡುವುದು ಮಾತ್ರ ನಮ್ಮ ಕೆಲಸ. ಈ ಮಧ್ಯೆ ಗ್ರಾಮಸ್ಥರು ಗಣಿಗಾರಿಕೆ ನಡೆಸಲು ವಿರೋಧ ವ್ಯಕ್ತಪಡಿಸುತ್ತಿದ್ದಾರೆಂಬ ಮಾಹಿತಿಯನ್ನೂ ಸಹ ಸಂಬಂಧಿಸಿದ ಇಲಾಖೆಗೆ ವರದಿ ನೀಡಲಾಗುವುದು ಎಂದು ಸಾರ್ವಜನಿಕರಿಗೆ ಉಪವಿಭಾಗಾಧಿಕಾರಿ ಸಪ್ತಶ್ರೀ ವಿವರಿಸಿದರು.