ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಭ್ರಷ್ಟಾಚಾರ, ಸ್ವಜನ ಪಕ್ಷಪಾತ, ನಿರುದ್ಯೋಗ, ಮಹಿಳಾ ಶೋಷಣೆ ತಡೆಯಲು ಒಂದು ನಿರ್ಣಾಯಕ ಶಕ್ತಿ ಅವಶ್ಯಕತೆ ಇದೆ ಎಂದು ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಅಭಿಪ್ರಾಯಪಟ್ಟರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಸಮಾನತೆಯ ಕರ್ನಾಟಕ ನಿರ್ಮಾಣದ ಭವಿಷ್ಯದ ಕುರಿತು ಚರ್ಚೆ ಒಂದು ಮುಕ್ತ ಸಂವಾದದಲ್ಲಿ ಸಮಾನ ಮನಸ್ಕರ ಸಭೆಯಲ್ಲಿ ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಬಲ, ಎಡ ಹಾಗೂ ಮಧ್ಯಮ ಪಂಥದ ವಾದಿಗಳು ಇದ್ದಾರೆ. ಆದರೆ ಜನ ಸಾಮಾನ್ಯರ ಜೀವನ ಮಟ್ಟ ಸುಧಾರಣೆ ಮಾಡುವಲ್ಲಿ ಹಿಂದೆ ಬಿದ್ದಿವೆ. ಡಾ.ಬಿ.ಆರ್.ಅಂಬೇಡ್ಕರ್, ಕಾನ್ಸಿರಾಂ, ಪೆರಿಯಾರ್ ವಿಚಾರಗಳು ಸತ್ಯದ ಪಂಥದಲ್ಲಿ ನಡೆಯುವ ಮಾರ್ಗ. ಮತ ಬ್ಯಾಂಕ್ ರಾಜಕಾರಣದಿಂದ ಪರಿವರ್ತನಾಕಾರರ ಮೂಲ ಆಶಯಗಳು ಸಫಲತೆ ಪಡೆದಿಲ್ಲ. ಬಡವ ಶ್ರೀಮಂತರ ನಡುವೆ ಅಂತರ ಹೆಚ್ಚುತ್ತಿದೆ. ಪ್ರಭುತ್ವದ ವಿರುದ್ಧ ನಿಲ್ಲುವ ಶಕ್ತಿಗಳ ಮೇಲೆ ಕೇಸು ದಾಖಲಿಸಿ ಬಾಯಿ ಮುಚ್ಚಿಸಲಾಗುತ್ತಿದೆ ಎಂದರು. ಸಾಮಾಜಿಕ ಜಾಲತಾಣಗಳು ಪ್ರಬಲವಾದ ಮಾದ್ಯಮ ಆಗಿವೆ. ಯುವ ಜನಾಂಗ ನಿಷ್ಕ್ರಿಯ ಮನೋಭಾವದಿಂದ ಹೊರ ಬರಬೇಕು. ಡಾ. ಅಂಬೇಡ್ಕರ್, ಬಸವ, ಪೆರಿಯಾರ್, ಕುವೆಂಪು ಮುಂತಾದ ದಾರ್ಶನಿಕರ ಹಾದಿಯಲ್ಲಿ ನಡೆದು ಸಧೃಢ ಸಮಾಜದ ಕಟ್ಟಲು ಎಲ್ಲರೂ ಕೈ ಜೋಡಿಸಿ ಮುನ್ನಡೆಯ ಬೇಕಾಗಿದೆ ಎಂದರು.ಪ್ರಗತಿಪರ ಹೋರಾಟಗಾರ ಸುಭಾಷ್ ಮಾಡ್ರಹಳ್ಳಿ ಮಾತನಾಡಿ, ಸ್ವಾತಂತ್ರ್ಯ ಭಾರತದಲ್ಲಿ ಸಮಾಜದಲ್ಲಿ ವ್ಯವಸ್ಥೆಯ ಬಗ್ಗೆ ತೀವ್ರ ವಿರೋಧ ಇದೆ. ಅವರೆಲ್ಲರೂ ಒಂದು ವೇದಿಕೆ ಅಡಿಯಲ್ಲಿ ಬರಲು ಸಾಧ್ಯವಾಗಿಲ್ಲ ಎಂದರು. ನಟ ಚೇತನ್ ಅಹಿಂಸಾ ಜನಪ್ರಿಯತೆ ಗಳಿಸಿದ್ದರೂ ಸಾಮಾಜಿಕ ಹೋರಾಟಗಾರರಾಗಿ ಕಳೆದ ಇಪ್ಪತ್ತು ವರ್ಷಗಳಿಂದ ತೊಡಗಿಕೊಂಡಿದ್ದಾರೆ. ಅವರಲ್ಲಿ ಸಾಮಾಜಿಕ ಕಾಳಜಿಯಿದೆ. ಅಸಾಧ್ಯ ಎಂಬುದು ಯಾವುದು ಇಲ್ಲ. ಹಾಗಾಗಿ ಯುವ ಸಮುದಾಯದ ಧ್ವನಿಯಾಗಬೇಕು ಎಂದರು. ಸಂವಾದದಲ್ಲಿ ದಲಿತ ಮುಖಂಡ ಆರ್. ಸೋಮಣ್ಣ,ರಾಘವಾಪುರ ಗ್ರಾಮ ಪಂಚಾಯತಿ ಅಧ್ಯಕ್ಷ ಆರ್.ಡಿ.ಉಲ್ಲಾಸ್ ಹಾಗು ಶಂಕರ್,ಮುತ್ತಣ್ಣ,ವಕೀಲರಾದ ರಾಜೇಶ್,ಎಂ.ಎನ್.ಸಂಪತ್,ಅರುಣ್ ಗೌಡ,ಶಿವಕುಮಾರ್,ಪುರಸಭೆ ಮಾಜಿ ಸದಸ್ಯ ಮೋಹನ್ ಕುಮಾರ್,ಆಟೋ ನಾಗರಾಜ್,ಅಬ್ದುಲ್ ಮಾಲಿಕ್,ಮುನೀರ್ ಪಾಷಾ , ಮದ್ದಯ್ಯನಹುಂಡಿನಾಗರಾಜ್,ಮಲ್ಲಿಕಾರ್ಜುನ,ಗೌತಮ್ ಶಾಕ್ಯ,ಮಹದೇವಸ್ವಾಮಿ, ಹೊನ್ನೇಗೌಡನಹಳ್ಳಿ ನಾಗಯ್ಯ,ಗೋಪಾಲ್ ಕಬ್ಬಹಳ್ಳಿ,ರಾಮೆಗೌಡ, ರವಿಕುಮಾರ್,ಕೆ.ಎಂ. ಮನಸ್ ಮುಂತಾದವರಿದ್ದರು.