ಹೈಕೋರ್ಟ್ ಆದೇಶ ಪ್ರತಿ ಸಿಗದಿದ್ದರೂ ಡೇರಿ ಫಲಿತಾಂಶ ಘೋಷಣೆ: ಆರೋಪ

| Published : Feb 13 2024, 12:50 AM IST

ಹೈಕೋರ್ಟ್ ಆದೇಶ ಪ್ರತಿ ಸಿಗದಿದ್ದರೂ ಡೇರಿ ಫಲಿತಾಂಶ ಘೋಷಣೆ: ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಮೇಲುಕೋಟೆ ಹಾಲು ಉತ್ಪಾದಕರ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಕೆಲವರು ಅವರಿಗೆ ಬೇಕಾದ ಮತಪಟ್ಟಿ ಸಿದ್ಧಪಡಿಸಿಕೊಂಡು ಚುನಾವಣೆಗೆ ಮುಂದಾಗಿದ್ದರು. ಇದರ ವಿರುದ್ಧ ಹೈಕೋರ್ಟ್ ಮೊರೆಹೋಗಿ ಮತಪಟ್ಟಿಗೆ ತಡೆಯಾಜ್ಞೆ ತಂದು ಮತದಾನದ ಹಕ್ಕುಪಡೆದುಕೊಂಡು ಚುನಾವಣೆ ನಡೆಸಲಾಗಿತ್ತು. ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತರು-7 ಮತ್ತು ರೈತಸಂಘ-ಕಾಂಗ್ರೆಸ್ ಬೆಂಬಲಿತರು 5ರಲ್ಲಿ ಗೆಲುವು ಸಾಧಿಸಿದ್ದರು. ಇದರ ವಿರುದ್ಧ ಅವರು ಕೋರ್ಟ್ ಮೊರೆಹೋದ ಹಿನ್ನೆಲೆಯಲ್ಲಿ ಚುನಾವಣೆಯ ಫಲಿತಾಂಶವನ್ನು ಪ್ರಕಟಿಸಿದೆ ಕಾಯ್ದಿಸಿದ್ದರು.

ಕನ್ನಡಪ್ರಭ ವಾರ್ತೆ ಪಾಂಡವಪುರಮೇಲುಕೋಟೆ ಡೇರಿ ಆಡಳಿತ ಮಂಡಳಿ ಫಲಿತಾಂಶ ಘೋಷಣೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶದ ಪ್ರತಿ ಸಿಗದಿದ್ದರೂ ಚುನಾವಣಾಧಿಕಾರಿ ಏಕಪಕ್ಷೀಯವಾಗಿ ನಿರ್ಧರಿಸಿ ಫಲಿತಾಂಶ ಘೋಷಣೆ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ನೂರಾರು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ದೂರು ಸಲ್ಲಿಸಿದರು.

ಪಟ್ಟಣದ ಮಿನಿ ವಿಧಾನಸೌಧದ ಕಚೇರಿ ಎದುರು ಸೇರಿದ ಜೆಡಿಎಸ್ ಕಾರ್ಯಕರ್ತರು ಚುನಾವಣಾಧಿಕಾರಿಯೂ ಆದ ಸಹಕಾರ ಸಂಘಗಳ ಉಪ ನಿಬಂಧಕರ ವಿರುದ್ಧ ಆಕ್ರೋಶ ಹೊರಹಾಕಿದರು.

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಮೇಲುಕೋಟೆ ಹಾಲು ಉತ್ಪಾದಕರ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಕೆಲವರು ಅವರಿಗೆ ಬೇಕಾದ ಮತಪಟ್ಟಿ ಸಿದ್ಧಪಡಿಸಿಕೊಂಡು ಚುನಾವಣೆಗೆ ಮುಂದಾಗಿದ್ದರು. ಇದರ ವಿರುದ್ಧ ಹೈಕೋರ್ಟ್ ಮೊರೆಹೋಗಿ ಮತಪಟ್ಟಿಗೆ ತಡೆಯಾಜ್ಞೆ ತಂದು ಮತದಾನದ ಹಕ್ಕುಪಡೆದುಕೊಂಡು ಚುನಾವಣೆ ನಡೆಸಲಾಗಿತ್ತು. ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತರು-7 ಮತ್ತು ರೈತಸಂಘ-ಕಾಂಗ್ರೆಸ್ ಬೆಂಬಲಿತರು 5ರಲ್ಲಿ ಗೆಲುವು ಸಾಧಿಸಿದ್ದರು. ಇದರ ವಿರುದ್ಧ ಅವರು ಕೋರ್ಟ್ ಮೊರೆಹೋದ ಹಿನ್ನೆಲೆಯಲ್ಲಿ ಚುನಾವಣೆಯ ಫಲಿತಾಂಶವನ್ನು ಪ್ರಕಟಿಸಿದೆ ಕಾಯ್ದಿಸಿದ್ದರು.

ಇದೀಗ ಕೋರ್ಟ್ ನಲ್ಲಿ ಫಲಿತಾಂಶ ಘೋಷಿಸುವಂತೆ ಆದೇಶವಾಗಿದ್ದರೂ ಈವರೆಗೂ ಆದೇಶ ಪ್ರತಿ ಕೈ ಸೇರಿಲ್ಲ. ಅಷ್ಟೊರೊಳಗಾಗಿ ಸಹಕಾರ ಸಂಘಗಳ ಉಪನಿಬಂಧಕರು ಏಕಪಕ್ಷೀಯವಾಗಿ ನಿರ್ಧಾರ ಡೇರಿ ಆಡಳಿತ ಮಂಡಳಿ ಚುನಾವಣಾ ಫಲಿತಾಂಶವನ್ನು ಆತುರವಾಗಿ ಪ್ರಕಟಿಸಲು ಮುಂದಾಗಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಹೈಕೋರ್ಟ್ ಆದೇಶದ ವಿರುದ್ಧವಾಗಿ ನಾವು ಹೈಕೋರ್ಟ್ ನ ದ್ವೀಸದಸ್ಯ ನ್ಯಾಯಾಧೀಶ ಪೀಠಕ್ಕೆ ಅಪೀಲು ಹೋಗುತ್ತಿದ್ದೇವೆ. ಅಲ್ಲಿ ಕೋರ್ಟ್ ತಡೆಯಾಜ್ಞೆ ಸಿಗಬಹುದೆಂದು ಚುನಾವಣಾಧಿಕಾರಿ ಆತುರದಿಂದ ಫಲಿತಾಂಶ ಪ್ರಕಟಣೆ ಮಾಡಲು ಮುಂದಾಗಿದ್ದಾರೆ ಎಂದು ಹರಿಹಾಯ್ದರು.

ಕ್ಷೇತ್ರದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಕೆಲವು ಅಧಿಕಾರಿಗಳು ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಸಹಕಾರ ಸಂಘಗಳ ಸಹಕಾರಿ ನಿಬಂಧಕರು ತಮಗೆ ಇಷ್ಟಬಂದಂತೆ ನಡೆದುಕೊಳ್ಳುತ್ತಿದ್ದಾರೆ. ಕೆಲವರ ಒತ್ತಡಕ್ಕೆ ಹಲವರನ್ನು ಅನರ್ಹರಾಗಿ ಮಾಡುತ್ತಿದ್ದಾರೆ. ಇದರಿಂದಾಗಿ ಕ್ಷೇತ್ರದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ದೂರಿದರು.

ಕಳೆದ ಹಲವು ವರ್ಷಗಳಿಂದಲೂ ಕ್ಷೇತ್ರದಲ್ಲಿ ಯಾವುದೇ ಗೊಂದಲ, ಅಶಾಂತಿ ಇಲ್ಲದೆ ಕಾನೂನು ಚೌಕಟ್ಟಿನಲ್ಲಿ ನಡೆದುಕೊಂಡು ಬಂದಿದೆ. ಒಂದು ವೇಳೆ ಈ ವಿಚಾರವಾಗಿ ತಾಲೂಕಿನಲ್ಲಿ ಅಶಾಂತಿ ನಿರ್ಮಾಣವಾಗಿ ಯಾವುದಾದೂ ಸಮಸ್ಯೆ ಉಂಟಾದರೆ ಅದಕ್ಕೆ ಸಹಕಾರ ಸಂಘದ ಸಹಕಾರಿ ನಿಬಂಧಕರನ್ನೇ ಹೊಣೆಗಾರರನ್ನಾಗಿ ಮಾಡಬೇಕು ಎಂದು ಆಗ್ರಹಿಸಿದರು.

ತಾವು ತಾತ್ಕಾಲಿಕವಾಗಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸುತ್ತಿದ್ದೇವೆ. ಸಂಬಂಧಪಟ್ಟ ಅಧಿಕಾರಿಗಳು ಇದನ್ನು ಸರಿಪಡಿಸುವ ಕೆಲಸವನ್ನು ಮಾಡದೆ ಹೋದರೆ ಇದರ ವಿರುದ್ದ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪಟ್ಟಣದ ಮಿನಿವಿಧಾನಸೌಧ ಹಾಗೂ ತಾಲೂಕು ಕಚೇರಿಗಳಲ್ಲಿ ಸಾರ್ವಜನಿಕ ಕೆಲಸ ಕಾರ್ಯಗಳು ಸರಿಯಾಗಿ ನಡೆಯುತ್ತಿಲ್ಲ. ರೈತರು, ಸಾರ್ವಜನಿಕರು ಸಣ್ಣಪುಟ್ಟ ಕೆಲಸಗಳಿಗೂ ತಿಂಗಳಗಟ್ಟಲೆ ಅಲೆಯುವಂತಾಗಿದೆ. ಈ ಬಗ್ಗೆ ಕ್ರಮವಹಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದರು.

ಪ್ರತಿಕ್ರಿಯಿಸಿದ ತಹಸೀಲ್ದಾರ್ ಶ್ರೇಯಸ್ ಅವರು ಘಟನೆಗೆ ಸಂಬಂಧಿಸಿದಂತೆ ನೀಡಿರುವ ಮನವಿಯನ್ನು ಮೇಲಾಧಿಕಾರಿಗಳಿಗೆ ಕಳುಹಿಸಿ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಜೆಡಿಎಸ್ ಅಧ್ಯಕ್ಷ ಎಸ್.ಎ.ಮಲ್ಲೇಶ್, ತಾಪಂ ಮಾಜಿ ಅಧ್ಯಕ್ಷ ಎಂ.ಸಿ.ಯಶ್ವಂತ್ ಕುಮಾರ್, ಟಿಎಪಿಸಿಎಂಎಸ್ ಅಧ್ಯಕ್ಷ ಡಿ.ಶ್ರೀನಿವಾಸ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಗುರುಸ್ವಾಮಿ, ಚಲುವರಾಜು, ರಾಮಕೃಷ್ಣೇಗೌಡ, ಪಿ.ಎಸ್.ಲಿಂಗರಾಜು, ಕಣಿವೆಯೋಗೇಶ್, ಟೌನ್ ಚಂದ್ರು, ಹೊಸಕೋಟೆ ಪುಟ್ಟಣ್ಣ, ಎಚ್.ಎಸ್.ವಿ.ಸ್ವಾಮೀಗೌಡ, ಸಿ.ಪ್ರಕಾಶ್, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಮುರುಳಿ, ವಿ.ಎಸ್.ನಿಂಗೇಗೌಡ, ಆರ್. ಸೋಮಶೇಖರ್, ಶಿವಕುಮಾರ್, ಚೇತನ್, ಜೆ.ಪಿ.ಶಿವಶಂಕರ್, ಬೊಮ್ಮರಾಜು, ಅಶ್ವಥ್ ಕುಮಾರೇಗೌಡ, ಮಾಣಿಕ್ಯನಹಳ್ಳಿ ಅಶೋಕ್, ಚಿಕ್ಕಾಡೆ ಗಿರೀಶ್, ಹಾರೋಹಳ್ಳಿ ಮಹೇಶ್,ಎ. ಕೃಷ್ಣ, ಉಮೇಶ್, ಆದರ್ಶ, ಜೆ.ದೇವೇಗೌಡ, ನಲ್ಲಹಳ್ಳಿ ಎಸ್.ಮಹೇಶ್, ಸಗಾಯಂ, ಪ್ರಶಾಂತ್ ಸೇರಿ ಸೇರಿದಂತೆ ಹಲವರು ಹಾಜರಿದ್ದರು.