ಗದಗ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡುವಂತೆ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ರೈತನಿಗೆ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ಕೊಡಬೇಕು ಎಂದು ಆಗ್ರಹಿಸಲಾಯಿತು.
ಡಂಬಳ: ವಿಧಾನಸಭಾಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ತಮ್ಮ ಸ್ವಕ್ಷೇತ್ರವಾದ ರೋಣ ವಿಧಾನಸಭಾ ಕ್ಷೇತ್ರದ ಮುಂಡರಗಿ ತಾಲೂಕಿನ ಡಂಬಳ ಹೋಬಳಿಗೆ ಆಗಮಿಸಿದ ಜಿ.ಎಸ್. ಪಾಟೀಲ ಅವರನ್ನು ಕದಾಂಪುರ ಗ್ರಾಮದಲ್ಲಿ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಭವ್ಯವಾಗಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿ.ಎಸ್. ಪಾಟೀಲ, ನಾನು ವಿಧಾನಸಭಾಧ್ಯಕ್ಷ ಸ್ಥಾನದಲ್ಲಿದ್ದರೂ ರೋಣ ಕ್ಷೇತ್ರದ ಜನರ ಸೇವೆ ಮಾಡುತ್ತೇನೆ. ಕ್ಷೇತ್ರದ ಜನರು ಹಾಗೂ ಕಾರ್ಯಕರ್ತರೊಂದಿಗೆ ನನ್ನ ನಿಕಟ ಸಂಪರ್ಕ ಮುಂದುವರಿಯಲಿದೆ. ಸಭಾಧ್ಯಕ್ಷ ಸ್ಥಾನದಿಂದ ನನ್ನ ಸೇವೆಗೆ ಅಡ್ಡಿಯಾಗುವುದಿಲ್ಲ ಎಂದು ಹೇಳಿದರು.ನಾನು ಈ ಹಂತಕ್ಕೆ ಬರಲು ಕ್ಷೇತ್ರದ ಜನರು, ಕಾರ್ಯಕರ್ತರು ಹಾಗೂ ಹಿರಿಯರ ಸಹಕಾರ ಮತ್ತು ಮಾರ್ಗದರ್ಶನವೇ ಕಾರಣವಾಗಿದೆ. ನನಗೆ ದೊರೆತಿರುವ ಈ ಗೌರವ ಉಳಿಸಿಕೊಂಡು ಜಿಲ್ಲೆಗೆ ಹಾಗೂ ರೋಣ ಕ್ಷೇತ್ರಕ್ಕೆ ಮತ್ತಷ್ಟು ಗೌರವ ತರುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತೇನೆ ಎಂದು ಹೇಳಿದರು.
ವಿಧಾನಸಭೆಯ ಕಲಾಪವನ್ನು ದ್ವೇಷ, ಆವೇಶವಿಲ್ಲದೆ ನಡೆಸುವುದು ತಮ್ಮ ಜವಾಬ್ದಾರಿ ಎಂದು ಹೇಳಿದ ಅವರು, ಜನರೊಂದಿಗೆ ಒಡನಾಟ ಮುಂದುವರಿಸುವ ಜತೆಗೆ ಸಭಾಧ್ಯಕ್ಷ ಸ್ಥಾನದ ಘನತೆಯನ್ನೂ ಕಾಪಾಡಿಕೊಳ್ಳಬೇಕಾಗಿದೆ. ಈ ಸಂದರ್ಭದಲ್ಲಿ ಕ್ಷೇತ್ರದ ಜನರು ನನಗೆ ಸಂಪೂರ್ಣ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.ಇದಕ್ಕೂ ಮುನ್ನ ಕದಾಂಪುರದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಜಿ.ಎಸ್. ಪಾಟೀಲ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಹೂಮಾಲೆ ಹಾಕಿ ಸನ್ಮಾನಿಸಿ ಶುಭ ಹಾರೈಸಿದರು.
ರೋಣ ಗ್ಯಾರಂಟಿ ಸಮಿತಿ ಅಧ್ಯಕ್ಷ ಸಂಗನಗೌಡ (ಮಿಥುನ) ಜಿ. ಪಾಟೀಲ, ಮರಿಯಪ್ಪ ಸಿದ್ದಣ್ಣವರ, ಮಹೇಶ ಗಡಗಿ, ಸೋಮಣ್ಣ ಗುಡ್ಡದ, ಕುಬೇರಪ್ಪ ಕೊಳ್ಳಾರ, ರೇವಣಸಿದ್ದ ಕರಿಗಾರ, ಕಳ್ಳೆಪ್ಪ ಪೂಜಾರ, ಬಸವರಡ್ಡಿ ಬಂಡಿಹಾಳ, ಬಾಬುಸಾಬ ಮೂಲಿಮನಿ, ನೂರಹಮ್ಮದ ಸರಕಾವಾಸ, ಕನಕಮೂರ್ತಿ ನರೇಗಲ್ಲ, ಮಲ್ಲಿಕಾರ್ಜುನ ಕಾರಪುಡಿ, ಜಯಮ್ಮ ಯಲಭೋವಿ, ಮಹಾದೇವಮ್ಮ ಕೊಳ್ಳಾರ, ಜ್ಯೋತಿ ಕುರಿ, ಕುಬೇರ ನಾಯಕ್, ನಾಗರಾಜ ಸಜ್ಜನ, ಸುರೇಶ ಗಡಗಿ, ಮಾರುತಿ ಎಮ್ಮಿ, ಕಾಶಣ್ಣ ಅಳವಂಡಿ, ಹನುಮಂತ ಗದಗಿನ, ಮಲ್ಲಿಕಾರ್ಜುನ ಪ್ಯಾಟಿ, ಬಶೀರಹಮ್ಮದ ಒಡ್ಡಟ್ಟಿ ಇದ್ದರು.