ಗ್ರಾಮ ಪಂಚಾಯಿತಿಯನ್ನು ಸ್ಥಳೀಯ ಸರ್ಕಾರವೆಂದು ಘೋಷಿಸಿ

| Published : Sep 05 2024, 12:39 AM IST

ಗ್ರಾಮ ಪಂಚಾಯಿತಿಯನ್ನು ಸ್ಥಳೀಯ ಸರ್ಕಾರವೆಂದು ಘೋಷಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ರಾಜ್ಯ ಗ್ರಾಪಂ ಮಹಾ ಒಕ್ಕೂಟದ ವತಿಯಿಂದ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರನ್ನು ಭೇಟಿ ಮಾಡಿ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷ ಹೆಗ್ಗವಾಡಿ ಕೆಂಪರಾಜು ನೇತೃತ್ವದಲ್ಲಿ ಒಕ್ಕೂಟದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಗ್ರಾಮ ಪಂಚಾಯಿತಿಗಳನ್ನು ಸ್ಥಳೀಯ ಸರ್ಕಾರವೆಂದು ಘೋಷಣೆ ಮಾಡಿ, ಸೂಕ್ತ ಸೌಲಭ್ಯಗಳು ಹಾಗೂ ಹೆಚ್ಚಿನ ಅಧಿಕಾರವನ್ನು ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದಿಂದ ಜಿಲ್ಲಾಧಿಕಾರಿಗಳ ಮುಖಾಂತರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಗೆ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷ ಹೆಗ್ಗವಾಡಿ ಕೆಂಪರಾಜು ನೇತೃತ್ವದಲ್ಲಿ ಒಕ್ಕೂಟದ ಪದಾಧಿಕಾರಿಗಳು ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಒಕ್ಕೂಟದ ಪದಾಧಿಕಾರಿಗಳು ಮಾತನಾಡಿ, ಗ್ರಾಮ ಸ್ವರಾಜ್ಯಕ್ಕಾಗಿ ಗ್ರಾಪಂ ಸದಸ್ಯರ ನಿರ್ಣಾಯಕ ಹೋರಾಟ ಹಮ್ಮಿಕೊಂಡಿರುವ ಬಗ್ಗೆ ಹಾಗೂ ಗ್ರಾಮ ಪಂಚಾಯಿತಿ ಆಡಳಿತದಲ್ಲಿ ಹಸ್ತಕ್ಷೇಪ ನಿಲ್ಲಿಸಲು ಆಗ್ರಹಿಸಿದರು. ಒಕ್ಕೂಟದ ಜಿಲ್ಲಾಧ್ಯಕ್ಷ ಹೆಗ್ಗವಾಡಿ ಕೆಂಪರಾಜು ಮಾತನಾಡಿ, ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರಿಗೆ ಹೆಚ್ಚಿನ ಅಧಿಕಾರ ನೀಡಬೇಕು. ಗೌರವ ಧನ ಹೆಚ್ಚಳವಾಗಬೇಕು. ಪಂಚಾಯಿತಿ ಸದಸ್ಯರಿಗೆ ಸಾರಿಗೆ ಬಸ್‌ಗಳಲ್ಲಿ ಬಸ್‌ಪಾಸ್ ವ್ಯವಸ್ಥೆಯಾಗಬೇಕು. ಉದ್ಯೋಗ ಖಾತರಿ ಯೋಜನೆಗಳ ಅನುಷ್ಠಾನ, ನಿರ್ವಹಣೆ ಸಂಪೂರ್ಣ ಜವಾಬ್ದಾರಿಯನ್ನು ಗ್ರಾಪಂ ವಹಿಸಬೇಕು ಎಂದು ಒತ್ತಾಯಿಸಿದರು.

ಅರ್ಥಿಕ ಸಂಪನ್ಮೂಲ ಕ್ರೂಢೀಕರಿಸಿ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ವಿನಿಯೋಗಿಸಲು ಅವಕಾಶ ನೀಡಬೇಕು. 15ನೇ ಹಣಕಾಸು ಯೋಜನೆಯನ್ನು ಹೆಚ್ಚಿಸಬೇಕು. ವಿವಿಧ ಯೋಜನೆಯನ್ನು ಜಾರಿ ಮಾಡಲು ಗ್ರಾಮ ಪಂಚಾಯಿತಿ ಅನುದಾನಕ್ಕೆ ಜೋಡಣೆ ಮಾಡದೇ ಹೆಚ್ಚುವರಿ ಅನುದಾನವನ್ನು ನೀಡಬೇಕೆಂಬ ಇತ್ಯಾದಿ ಬೇಡಿಕೆಗಳನ್ನು ಈಡೇರಿಸಬೇಕೆಂದು ಮನವಿ ಮಾಡಿದರು.

ರಾಜ್ಯ ಸರ್ಕಾರ ಗ್ರಾಮ ಪಂಚಾಯಿತಿಗೆ ಗ್ರಂಥಾಲಯಗಳು, ಕೂಸಿನ ಮನೆ, ಘನತಾಜ್ಯ ವಿಲೇವಾರಿ ಘಟಕ ಮುಂತಾದ ಯೋಜನೆಗಳನ್ನು ರಾಜ್ಯ ಮಟ್ಟದಲ್ಲೇ ರೂಪಿಸಿ ಗ್ರಾಮ ಪಂಚಾಯಿತಿಗಳಿಗೆ ಅನುಷ್ಠಾನ ಮಾಡಲು ನಿರ್ದೇಶನ ನೀಡುವಾಗ ಅವಶ್ಯಕವಾದ ಅನುದಾನವನ್ನು ನೀಡದೇ ಎಲ್ಲಾ ಯೋಜನೆಗಳನ್ನು ಗ್ರಾಮ ಪಂಚಾಯಿತಿ ಸ್ವಂತ ಸಂಪನ್ಮೂಲ, 15ನೇ ಹಣಕಾಸು ಯೋಜನೆ ಅನುದಾನ, ಇತರೇ ಲಭ್ಯ ಅನುದಾನ ಬಳಿಸಿ ಅನುಷ್ಠಾನ ಮಾಡುವಂತೆ ಪಂಚಾಯತ್ ರಾಜ್ ಕಾಯ್ದೆಯನ್ನು ಮೀರಿ ಆದೇಶ ನೀಡಲಾಗುತ್ತಿದೆ.

ಗ್ರಾಪಂಗಳ ಮೇಲೆ ಒತ್ತಡ ಹಾಕಿದ್ದರಿಂದ ಶೇ.೯೫ ಕ್ಕೂ ಹೆಚ್ಚು ಗ್ರಾಪಂಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಆಯಾ ಯೋಜನೆಯ ನೌಕರರು, ತಮ್ಮ ಸಂಬಳ, ವೃತ್ತಿ ಬದುಕು ಮುಂತಾದ ಬೇಡಿಕೆಗಳೊಂದಿಗೆ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಇದು ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ. ಈ ಎಲ್ಲಾ ಸಮಸ್ಯೆಗಳಿಗೆ ಸರ್ಕಾರ ಕೂಡಲೇ ಸ್ಪಂದಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಹಾ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ವೃಷಬೇಂದ್ರ, ಜಿಲ್ಲಾ ಉಪಾಧ್ಯಕ್ಷ ಸೈಯದ್ ನುಸ್ರುಲ್ಲಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಣ್ಣ, ತಾಲೂಕು ಅಧ್ಯಕ್ಷ ಬಸಪ್ಪನಪಾಳ್ಯ ರೇವಣ್ಣ, ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ಶಿವಣ್ಣ, ಹಳೇಪುರ ಮಂಜುನಾಥ್, ಗುಂಡ್ಲುಪೇಟೆ ತಾಲೂಕು ಅಧ್ಯಕ್ಷ ಆರ್.ಡಿ.ಉಲ್ಲಾಸ್ ಇದ್ದರು.