ಸಾರಾಂಶ
- ದಕ್ಷಿಣ ಪ್ರಾಂತ್ಯ ಅಧ್ಯಕ್ಷ ಕೇಶವಕುಮಾರ ಆಶಯ । ಸಕ್ಷಮ ಸಂಸ್ಥಾಪನಾ, ವಿಶ್ವ ರಕ್ತದಾನಿಗಳ ದಿನಾಚರಣೆ
- - - ಕನ್ನಡಪ್ರಭ ವಾರ್ತೆ ದಾವಣಗೆರೆಮಾನವ ನೇತ್ರವನ್ನು ಶ್ರೀಲಂಕಾ ಮಾದರಿಯಂತೆ ರಾಷ್ಟ್ರೀಯ ಸಂಪತ್ತಾಗಿ ಭಾರತದಲ್ಲೂ ಘೋಷಿಸಬೇಕು ಎಂದು ಸಕ್ಷಮ-ಕರ್ನಾಟಕ ದಕ್ಷಿಣ ಪ್ರಾಂತ್ಯ ಅಧ್ಯಕ್ಷ ಕೇಶವಕುಮಾರ ಹೇಳಿದರು.
ನಗರದ ಎಸ್.ನಿಜಲಿಂಗಪ್ಪ ಬಡಾವಣೆಯ ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ಸಭಾಂಗಣದಲ್ಲಿ ಸಕ್ಷಮ ಸಂಸ್ಥಾಪನಾ ಹಾಗೂ ವಿಶ್ವ ರಕ್ತದಾನಿಗಳ ದಿನಾಚರಣೆಯಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಅವರು ಮಾತನಾಡಿದರು. ಶ್ರೀಲಂಕಾದ ಮಾದರಿಯಲ್ಲೇ ಮಾನವ ನೇತ್ರಗಳನ್ನು ರಾಷ್ಟ್ರೀಯ ಸಂಪತ್ತಾಗಿ ಘೋಷಿಸುವ ಮೂಲಕ ಅಂಧತ್ವ ನಿವಾರಣೆಗೆ ಕೇಂದ್ರ ಮುಂದಾಗಬೇಕು ಎಂದರು.ಭಾರತದಲ್ಲಿ ಅಂಧತ್ವ ನಿವಾರಣೆಗೆ ನೇತ್ರದಾನದ ತುಂಬಾ ಅಗತ್ಯವಿದೆ. ದೇಶದಲ್ಲಿ 100 ಬೇಡಿಕೆಗಳಿಗೆ 20 ಜನ ಮಾತ್ರ ನೇತ್ರದಾನಿಗಳಿದ್ದಾರೆ. ಆದರೆ, ನೆರೆಯ ಶ್ರೀಲಂಕಾದಲ್ಲಿ ಮಾನವ ಕಣ್ಣುಗಳನ್ನು ರಾಷ್ಟ್ರೀಯ ಸಂಪತ್ತಾಗಿ ಘೋಷಣೆ ಮಾಡಿದ್ದರಿಂದ ಅಲ್ಲಿ ಅಗತ್ಯವಿದ್ದವರಿಗೆ ನೇತ್ರಗಳು ಸುಲಭವಾಗಿ ಸಿಗುತ್ತಿವೆ. ಭಾರತದಲ್ಲೂ ಇಂತಹದ್ದೊಂದು ವ್ಯವಸ್ಥೆ ಜಾರಿಗೊಳ್ಳಬೇಕಿದೆ ಎಂದು ಹೇಳಿದರು.
ಸಮಾಜ, ದೇಶಕ್ಕೆ ಹೊರೆಯಾಗದೇ ಸ್ವಾವಲಂಬನೆ ಸಾಧಿಸಬೇಕು. ಇದಕ್ಕೆ ಪೂರಕ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಸಕ್ಷಮದಿಂದ ಕೌಶಲ್ಯಾಭಿವೃದ್ಧಿ, ವೃತ್ತಿ ಮಾರ್ಗದರ್ಶನ, ತರಬೇತಿ, ಸಾಧನ ಸಲಕರಣೆ ವಿತರಣೆ, ಪೋಷಕರಿಗೆ ಕಾರ್ಯಾಗಾರ, ನೇತ್ರದಾನ ಶಿಬಿರ, ವಿವಾಹ ಕೇಂದ್ರಗಳ ನಿರ್ವಹಣೆ, ಕಲೆ ಮತ್ತು ಕ್ರೀಡೆ, ಪ್ರಕೋಷ್ಟ ಹಾಗೂ ಆಯಾಮಗಳ ಮೂಲಕ ಸಾಮಾಜಿಕ ಉತ್ಸವ ಸಾಮಾಜಿಕ ಉತ್ಸವಗಳ ಆಯೋಜನೆ ಹೀಗೆ ದಾನಿಗಳ ಸಹಕಾರದಲ್ಲಿ ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ ಎಂದು ಮಾಹಿತಿ ನೀಡಿದರು.ಕಾರ್ಯಕ್ರಮ ಉದ್ಘಾಟಿಸಿದ ಅಂತರ್ಜಲ ತಜ್ಞ, ಸಾಮಾಜಿಕ ಕಾರ್ಯಕರ್ತ ಜಯಚಂದ್ ಪಿ. ಜೈನ್ ಮಾತನಾಡಿ, 1991ರಿಂದಲೂ ರಕ್ತದಾನ ಮಾಡುತ್ತಿದ್ದೆನೆ. ಆದರೂ, ದಾನಿಗಳಿಂದ ರಕ್ತ ಪಡೆಯುವವರು ಸ್ವತಃ ರಕ್ತದಾನಕ್ಕೆ ಮುಂದಾಗುತ್ತಿಲ್ಲ. ಹಾಗಾಗಿ, ರಕ್ತದ ಅವಶ್ಯತೆ ಇರುವವರ ಸಂಬಂಧಿಗಳಿಗೆ ಮೊದಲು ರಕ್ತದಾನ ಮಹತ್ವ ತಿಳಿಸಬೇಕು. ಸ್ವತಃ ರಕ್ತದಾನ ಮಾಡದೇ, ಬೇರೆಯವರಿಂದ ರಕ್ತ ನಿರೀಕ್ಷೆ ಸರಿಯಲ್ಲ. ರಕ್ತದಾನ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದರು.
ಸಕ್ಷಮ-ದಾವಣಗೆರೆ ಶಾಖೆ ಅಧ್ಯಕ್ಷ ಬಿ.ಜಿ. ಮನೋಹರ ಅಧ್ಯಕ್ಷತೆ ವಹಿಸಿದ್ದರು. ಇಎನ್‌ಟಿ ತಜ್ಞ ಡಾ.ಶಿವಕುಮಾರ ಅಂದನೂರು, ಸಂಘ ಪರಿವಾರದ ಹಿರಿಯ ಮುಖಂಡ ಕೆ.ಬಿ.ಶಂಕರ ನಾರಾಯಣ, ನಿವೃತ್ತ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರವಿನಾರಾಯಣ, ಸಂಸ್ಥೆ ಸಹ ಕಾರ್ಯದರ್ಶಿ ಸಿದ್ದಲಿಂಗ ಸ್ವಾಮಿ, ಮಹಾಪೋಷಕ ಶಂಭುಲಿಂಗಪ್ಪ, ಉಪಾಧ್ಯಕ್ಷ ಗುರುಬಸವರಾಜ, ಖಜಾಂಚಿ ಜಯದೇವಯ್ಯ ಇತರರು ಇದ್ದರು.ವಿಶೇಷಚೇತನರಿಗೆ ಸಂಸ್ಥೆಯಿಂದ ವ್ಹೀಲ್ ಚೇರ್, ಸ್ಕೂಲ್ ಬ್ಯಾಗ್ ಇತರೆ ಸಾಧನ ಸಲಕರಣೆ ವಿತರಿಸಲಾಯಿತು. ಸಮಾರಂಭದಲ್ಲಿ ವೇದಾ ಅವಿನಾಶ ಪ್ರಾರ್ಥಿಸಿದರು. ಅಮರೇಶ ಕಾರ್ಯಕ್ರಮ ನಿರೂಪಣೆ ಮಾಡಿದರು.
- - -(ಕೋಟ್) ಸರ್ಕಾರವು ದಿವ್ಯಾಂಗರ ಏಳಿಗೆ, ಅಭಿವೃದ್ಧಿಗೆ ಅನೇಕ ಯೋಜನೆ, ಕಾರ್ಯಕ್ರಮ ರೂಪಿಸಿ, ಅನುಷ್ಠಾನಗೊಳಿಸುತ್ತಿದೆ. ವಿಧಾನ ಮಂಡಲ ಸಂಸತ್ತಿನಲ್ಲೂ ವಿಶೇಷಚೇತನರಿಗೆ ಪ್ರಾತಿನಿಧ್ಯ ಸಿಗಬೇಕು. ಸರ್ಕಾರಿ ಹುದ್ದೆಗಳಲ್ಲಿ ಮೀಸಲಾತಿ ಹೆಸರಿಗಷ್ಟೇ ಇದ್ದು, ವಿಶೇಷಚೇತನ ಹುದ್ದೆಗಳ ಸಂಖ್ಯೆ ಹೆಚ್ಚಿಸುವ ಕೆಲಸ ಆಗಬೇಕು. ದಿವ್ಯಾಂಗರು ವೈಯಕ್ತಿಕವಾಗಿ ಸಕ್ಷಮರಾಗುವ ಜೊತೆಗೆ ದೇಶವನ್ನೂ ಸಕ್ಷಮಗೊಳಿಸೇಕು.
- ಕೇಶವಕುಮಾರ, ಅಧ್ಯಕ್ಷ- - -
-22ಕೆಡಿವಿಜಿ4.ಜೆಪಿಜಿ:ದಾವಣಗೆರೆಯ ಕರ್ನಾಟಕ ಹಿಮೋಫಿಲಿಯಾ ಸೊಸೈಟಿಯಲ್ಲಿ ಭಾನುವಾರ ಸಕ್ಷಮ ಸಂಸ್ಥಾಪನಾ ಹಾಗೂ ವಿಶ್ವ ರಕ್ತದಾನಿಗಳ ದಿನ ಕಾರ್ಯಕ್ರಮವನ್ನು ಸಕ್ಷಮ-ಕರ್ನಾಟಕ ದಕ್ಷಿಣ ಪ್ರಾಂತ್ಯ ಅಧ್ಯಕ್ಷ ಕೇಶವಕುಮಾರ ಉದ್ಘಾಟಿಸಿದರು.