ಇಂಡಿ ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಿ

| Published : Dec 28 2023, 01:46 AM IST / Updated: Dec 28 2023, 01:47 AM IST

ಸಾರಾಂಶ

ಲಿಂಬೆ ನಾಡು ಗಡಿಭಾಗದ ಇಂಡಿ ಎಲ್ಲ ರಂಗದಲ್ಲಿಯೂ ಅಭಿವೃದ್ಧಿಯಿಂದ ಹಿಂದೆ ಇದೆ. ಹೀಗಾಗಿ ಇಂಡಿಯನ್ನು ಪ್ರತ್ಯೇಕ ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಬೇಕು ಎಂದು ಕರವೇ(ಪ್ರವೀಣಶೆಟ್ಟಿ ಬಣ) ತಾಲೂಕು ಅಧ್ಯಕ್ಷ ಶಿವಾನಂದ ಮಲಕಗೊಂಡ ಸರ್ಕಾರಕ್ಕೆ ಆಗ್ರಹಿಸಿದರು

ಕನ್ನಡಪ್ರಭ ವಾರ್ತೆ ಇಂಡಿ

ರಾಜಕೀಯ,ಶೈಕ್ಷಣಿಕ, ಔದ್ಯೋಗಿಕ, ನೀರಾವರಿ, ಆರ್ಥಿಕವಾಗಿ ಹಿಂದುಳಿದ ಲಿಂಬೆ ಬೆಳೆಗೆ ಹೆಸರುವಾಸಿಯಾಗಿರುವ ಲಿಂಬೆ ನಾಡು ಗಡಿಭಾಗದ ಇಂಡಿ ಎಲ್ಲ ರಂಗದಲ್ಲಿಯೂ ಅಭಿವೃದ್ಧಿಯಿಂದ ಹಿಂದೆ ಇದೆ. ಹೀಗಾಗಿ ಇಂಡಿಯನ್ನು ಪ್ರತ್ಯೇಕ ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಬೇಕು ಎಂದು ಕರವೇ(ಪ್ರವೀಣಶೆಟ್ಟಿ ಬಣ) ತಾಲೂಕು ಅಧ್ಯಕ್ಷ ಶಿವಾನಂದ ಮಲಕಗೊಂಡ ಸರ್ಕಾರಕ್ಕೆ ಆಗ್ರಹಿಸಿದರು.

ಅವರು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯುವ ಜನಾಂಗ,ಆರ್ಥಿಕವಾಗಿ ತೊಂದರೆಯಲ್ಲಿ ಇರುವವರು ನೆರೆಯ ಮಹಾರಾಷ್ಟ್ರ, ಗೋವಾ,ಪೂನಾ ನಗರಗಳಿಗೆ ಉದ್ಯೋಗಕ್ಕಾಗಿ ಗೂಳೆ ಹೋಗುತ್ತಿದ್ದಾರೆ. ವಿಜಯಪುರ ಜಿಲ್ಲೆಯ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿ ಹಲವು ತಾಲೂಕುಗಳಿವೆ. ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಸೋಲಾಪೂರ ಅತ್ಯಂತ ವೇಗವಾಗಿ ಬೆಳೆಯುತ್ತಿದೆ.ಆದರೆ ಇಂಡಿ ,ಚಡಚಣ ಮಾತ್ರ ಎಲ್ಲ ಕ್ಷೇತ್ರದಲ್ಲಿಯೂ ಹಿಂದೆ ಬಿದ್ದಿವೆ. ಇಂಡಿ ತಾಲೂಕಿಗೆ ಮಳೆಗಾಲ, ಚಳಿಗಾಲ,ಬೇಸಿಗೆಕಾಲ ಎಂಬುದು ಲೆಕ್ಕಕ್ಕೆ ಇಲ್ಲ. ಎಲ್ಲಾ ಕಾಲದಲ್ಲಿಯೂ ನೀರಿನ ತೊಂದರೆ ಅನುಭವಿಸುವ ತಾಲೂಕು. ಮಳೆಗಾಲದಲ್ಲಿಯೂ ಬರದ ಅಬ್ಬರವನ್ನು ಕಾಣಬೇಕೆಂದರೆ ಇಂಡಿಗೆ ಬಂದು ನೋಡಿದರೆ ಇಲ್ಲಿನ ರೈತಾಪಿ ಜನರು,ಕೂಲಿಕಾರರು ಅನುಭವಿಸುತ್ತಿರುವ ಕಷ್ಟ ಎಲ್ಲವೂ ತಿಳಿಯುತ್ತದೆ ಎಂದರು.

ವಿಜಯಪುರ ಜಿಲ್ಲೆಯಲ್ಲಿಯೇ ಇಂಡಿ ತಾಲೂಕು ದೊಡ್ಡ ತಾಲೂಕು. ಹಲವು ತಾಲೂಕು ಮಟ್ಟದ ಸರ್ಕಾರಿ ಕಚೇರಿಗಳ ಉಪವಿಭಾಗ ಕೇಂದ್ರವನ್ನು ಹೊಂದಿದೆ. ಇಂಡಿ ಹಾಗೂ ಚಡಚಣ ತಾಲೂಕು ಕೇಂದ್ರಗಳಿಂದ ವಿಜಯಪುರ ಜಿಲ್ಲಾ ಕೇಂದ್ರಕ್ಕೆ ಹೋಗಬೇಕಾದರೆ ಸುಮಾರು 100 ರಿಂದ 120 ಕಿಮೀ ದೂರವನ್ನು ಕ್ರಯಿಸಬೇಕಾಗುತ್ತದೆ. ಹೀಗಾಗಿ ಆಡಳಿತದ ಹಿತದೃಷ್ಠಿಯಿಂದ ಇಂಡಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಿದರೆ ಆಲಮೇಲ,ಸಿಂದಗಿ,ಚಡಚಣ,ದೇವರ ಹಿಪ್ಪರಗಿ ತಾಲೂಕುಗಗಳು ಎಲ್ಲ ರಂಗದಲ್ಲಿಯೂ ಅಭಿವೃದ್ದಿ ಹೊಂದಲು ಸಾಧ್ಯವಾಗುತ್ತದೆ ಎಂದು ಅವರು ಸರ್ಕಾರಕ್ಕೆ ಆಗ್ರಹಿಸಿದರು.