ಧಾರವಾಡ:
ಹುಬ್ಬಳ್ಳಿ-ಧಾರವಾಡ ಅವಳಿ ನಗರವನ್ನು ಮೆಟ್ರೋಪಾಲಿಟನ್ ನಗರವೆಂದು ಘೋಷಿಸುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲು ಆಗ್ರಹಿಸಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಪೌರಕಾರ್ಮಿಕರ ಮತ್ತು ನೌಕರರ ಸಂಘವು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿತು.ಸಂಘದ ಅಧ್ಯಕ್ಷ ಡಾ. ವಿಜಯ್ ಗುಂಟ್ರಾಳ್ ಮಾತನಾಡಿ, ಪ್ರಸ್ತುತ ಹುಬ್ಬಳ್ಳಿ-ಧಾರವಾಡ ಬಿ ವರ್ಗದ ನಗರ. ಇದನ್ನು ವಿಭಜಿಸಿದರೆ ಸಿ ವರ್ಗವಾಗಲಿದೆ. ಇದರಿಂದ ಪೌರಕಾರ್ಮಿಕ ವರ್ಗಕ್ಕೂ ಆರ್ಥಿಕ ನಷ್ಟವಾಗಲಿದೆ. ಕಾರ್ಮಿಕರ, ನೌಕರರ ವೇತನ, ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆ ಹಾಗೂ ಇತರೆ ಸೌಲಭ್ಯಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವ ಆತಂಕವಿದೆ. ಜತೆಗೆ 200 ಜನ ನೌಕರಿ ಕಳೆದುಕೊಳ್ಳುವುದು ಸತ್ಯ ಎಂದು ಕಳವಳ ವ್ಯಕ್ತಪಡಿಸಿದರು.
ಇದೇ ವೇಳೆ ಅವಳಿ ನಗರವನ್ನು ಮೆಟ್ರೋಪಾಲಿಟನ್ ನಗರವಾಗಿ ಘೋಷಿಸಿದರೆ ''''''''ಎ'''''''' ವರ್ಗದ ನಗರದ ಸ್ಥಾನಮಾನ ದೊರೆಯಲಿದೆ. ಇದರಿಂದ ಪೌರಕಾರ್ಮಿಕರು ಹಾಗೂ ಇತರ ಸಿಬ್ಬಂದಿಗೆ ದೊರಕುವ ವೇತನಕ್ಕಿಂತ ಹೆಚ್ಚಿನ ಆರ್ಥಿಕ ಸೌಲಭ್ಯಗಳಿವೆ. ಪೌರಕಾರ್ಮಿಕರಿಗೆ ಹೆಚ್ಚಿನ ಉದ್ಯೋಗ ಅವಕಾಶವೂ ಸೃಷ್ಟಿಯಾಗಲಿದೆ ಎಂದು ಪ್ರತಿಪಾದಿಸಿದರು.ಹು-ಧಾ ಅವಳಿ ನಗರವನ್ನು ವಿಭಜಿಸಲು ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರಡಿಸಿದ ಆಧಿಸೂಚನೆ ಹಿಂಪಡೆಯಲು ಸರ್ಕಾರಕ್ಕೆ 15 ದಿನಗಳ ಗಡುವು ನೀಡಲಾಗಿದೆ. ಒಂದು ವೇಳೆ ಈ ಮನವಿಗೆ ಸ್ಪಂದಿಸದಿದ್ದರೆ ಧಾರವಾಡ ಬಂದ್‌ಗೆ ಕರೆ ನೀಡಲಾಗುವುದು. ಜತೆಗೆ ಪೌರಕಾರ್ಮಿಕರ ದೈನಂದಿನ ಕೆಲಸ ಸ್ಥಗಿತಗೊಳಿಸಲು ಅನಿವಾರ್ಯ ಎಂದು ಎಚ್ಚರಿಸಿದರು.