ಸಾರಾಂಶ
ಈ ಪ್ರದೇಶದಲ್ಲಿ ಕುಡಿಯುವ ನೀರು, ಒಳಚರಂಡಿ, ರಸ್ತೆ, ವಿದ್ಯುತ್ ದೀಪಗಳು, ಆರೋಗ್ಯ ಕೇಂದ್ರ ಹಾಗೂ ಸಮುದಾಯ ಭವನ ಸೇರಿದಂತೆ ಮೂಲಭೂತ ಸೌಕರ್ಯ ತಕ್ಷಣ ಒದಗಿಸಲು ಅನೇಕ ಬಾರಿ ಸರ್ಕಾರಕ್ಕೆ ಮನವಿ
ಹೊಸಪೇಟೆ: ನಗರದ ಕುಂಬಾರಗೇರಿ ಪ್ರದೇಶವನ್ನು ಸ್ಲಂ ಎಂದು ಘೋಷಿಸಬೇಕು ಎಂದು ಆಗ್ರಹಿಸಿ ಸ್ಲಂ ಜನರ ಸಂಘಟನೆ ಕರ್ನಾಟಕ, ವಿಜಯನಗರ ಜಿಲ್ಲಾ ಘಟಕದಿಂದ ಪೌರಾಯುಕ್ತ ಶಿವಕುಮಾರ್ ಯರಗುಡಿಗೆ ಮನವಿ ಸಲ್ಲಿಸಲಾಯಿತು.
ನಗರದ 21, 25 ವಾರ್ಡ್ ವ್ಯಾಪ್ತಿಯ ಕುಂಬಾರಗೇರಿ (ಸರ್ವೇ ನಂ.155)ಪ್ರದೇಶದಲ್ಲಿ 70ಕ್ಕೂ ಹೆಚ್ಚು ಬಡ ಕುಟುಂಬಗಳು ವಾಸಿಸುತ್ತಿದ್ದು. ಈ ಜನರು ದಶಕಗಳಿಂದಲೂ ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದ್ದಾರೆ. ಈ ಪ್ರದೇಶದಲ್ಲಿ ಕಳೆದ 45 ವರ್ಷಗಳಿಂದ ನಿವಾಸಿಗಳು ಶಾಶ್ವತ ಮನೆ ನಿರ್ಮಿಸಿಕೊಂಡು ವಾಸವಿದ್ದರೂ ಸ್ಲಂ ಮಾನ್ಯತೆ ದೊರಯದೆ ಈ ಪ್ರದೇಶದಲ್ಲಿ ಅಭಿವೃದ್ಧಿ ಮರೀಚಿಕೆ ಆಗಿದೆ ಎಂದು ದೂರಿದರು.ಈ ಪ್ರದೇಶದ ಮಾಲೀಕತ್ವವನ್ನು ನ್ಯಾಯಾಲಯವು ಕಳೆದ 2023ರಲ್ಲಿ ಸ್ಥಳೀಯ ನಿವಾಸಿಗಳ ಪರವಾಗಿ ತೀರ್ಪು ನೀಡಿದೆ. ಆದ್ದರಿಂದ ಈ ಪ್ರದೇಶವನ್ನು ಸರ್ಕಾರ ತನ್ನ ಸುಪರ್ದಿಗೆ ಪಡೆದು ಸ್ಲಂ ಪ್ರದೇಶ ಎಂದು ಅಧಿಕೃತವಾಗಿ ಘೋಷಿಸಿ ನಿವಾಸಿಗಳಿಗೆ ಹಕ್ಕುಪತ್ರ ಹಾಗೂ ನೋಂದಣಿ ಕ್ರಯಪತ್ರ ನೀಡಿ ಶಾಶ್ವತ ಹಕ್ಕು ಒದಗಿಸಬೇಕು.
ಈ ಪ್ರದೇಶದಲ್ಲಿ ಕುಡಿಯುವ ನೀರು, ಒಳಚರಂಡಿ, ರಸ್ತೆ, ವಿದ್ಯುತ್ ದೀಪಗಳು, ಆರೋಗ್ಯ ಕೇಂದ್ರ ಹಾಗೂ ಸಮುದಾಯ ಭವನ ಸೇರಿದಂತೆ ಮೂಲಭೂತ ಸೌಕರ್ಯ ತಕ್ಷಣ ಒದಗಿಸಲು ಅನೇಕ ಬಾರಿ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಹಲವು ವರ್ಷಗಳಿಂದ ಮನವಿ ಸಲ್ಲಿಸಿದರೂ ಈ ಪ್ರದೇಶಕ್ಕೆ ಶಾಶ್ವತ ಪರಿಹಾರ ಸಿಕ್ಕಿಲ್ಲ ಎಂದರು.ಈ ಸಂದರ್ಭದಲ್ಲಿ ಎಚ್.ಶೇಷು, ಎನ್.ವೆಂಕಟೇಶ್, ಕೈಲಾಸ್, ರಾಜಭಕ್ಷಿ ಬರಕಾತಿ, ಎನ್.ಹುಲಿಗೆಮ್ಮ, ನೂರ್ ಜಹಾನ್, ಬೀನಾ ರೂಪಲತಾ, ಶೇಖ್ ಮೆಹಬೂಬ್, ಬಾಷಾ, ಮಾಬಾಷಾ, ಉಮೇಶ, ಕಾರ್ತಿಕ್, ಜಫ್ರೀನ್, ಮುನಿಯಪ್ಪ, ಎಲ್. ಪಾಂಡು ನಾಯಕ್, ದ್ವಾರಕೇಶ್ ಹಾಗೂ ಬಿ.ಟಿ. ಮಂಜುನಾಥ್ ಮತ್ತಿತರರಿದ್ದರು.