ಪರಶುರಾಂಪುರವನ್ನು ತಾಲೂಕು ಕೇಂದ್ರ ಎಂದು ಘೋಷಿಸಿ

| Published : Dec 09 2024, 12:48 AM IST

ಪರಶುರಾಂಪುರವನ್ನು ತಾಲೂಕು ಕೇಂದ್ರ ಎಂದು ಘೋಷಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಪರಶುರಾಂಪುರ: ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಪರಶುರಾಂಪುರ ಹೋಬಳಿಯನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿ ರೈತ ಸಂಘದ ಸದಸ್ಯರು ಪರಶುರಾಂಪುರದ ಮುಖ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಪರಶುರಾಂಪುರ: ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಪರಶುರಾಂಪುರ ಹೋಬಳಿಯನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿ ರೈತ ಸಂಘದ ಸದಸ್ಯರು ಪರಶುರಾಂಪುರದ ಮುಖ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ತಾಲೂಕು ಘಟಕದ ಅಧ್ಯಕ್ಷ ಚಿಕ್ಕಣ್ಣ, ಮೂರು ದಶಕಗಳಿಂದ ಪರಶುರಾಂಪುರ ಹೋಬಳಿ ಕೇಂದ್ರವನ್ನು ತಾಲೂಕು ಕೇಂದ್ರವನ್ನಾಗಿ ಮಾಡುವಂತೆ ವಿವಿಧ ಸಂಘಟನೆಗಳು ಒತ್ತಾಯ ಮಾಡಿದರೂ, ಸರ್ಕಾರ ಗಮನ ಹರಿಸುತ್ತಿಲ್ಲ. ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ತಾಲೂಕು ಕೇಂದ್ರವಾಗಿ ಘೋಷಿಸಬೇಕು. ಈ ಭಾಗದ ಶಾಸಕರು ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಒತ್ತಾಯಿಸಿದರು.

ರೈತ ಸಂಘದ ತಾಲ್ಲೂಕು ಘಟಕದ ಉಪಾಧ್ಯಕ್ಷ ಜಂಪಣ್ಣ ಮಾತನಾಡಿ, ರಾಜ್ಯ ಸರ್ಕಾರ ಪರಶುರಾಂಪುರವನ್ನು ತಾಲೂಕು ಕೇಂದ್ರವಾಗಿ ಘೋಷಣೆ ಮಾಡದಿರುವುದು ವಿಷಾದ ಸಂಗತಿ. ತಾಲೂಕು ಕೇಂದ್ರಕ್ಕೆ ಆಗ್ರಹಿಸಿ ಕಳೆದ 30 ವರ್ಷಗಳಿಂದಲೂ ನೂರಾರು ಹೋರಾಟಗಳು ನಡೆದಿದೆ. ಎಲ್ಲಾ ಸರ್ಕಾರಗಳು ತಾಲ್ಲೂಕು ಕೇಂದ್ರ ಮಾಡುವ ಭರವಸೆ ನೀಡಿದ್ದರೂ ಈವರೆಗೂ ಪರಶುರಾಂಪುರ ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡದಿರುವುದು ವಿಷಾದದ ಸಂಗತಿ ಎಂದರು.ಜಿಲ್ಲಾ ಕೇಂದ್ರದಿಂದ ಬಹು ದೂರದಲ್ಲಿನ ನಮ್ಮ ಕೇಂದ್ರಕ್ಕೆ ಸಕಾಲದಲ್ಲಿ ನೆರವುಗಳು ಲಭ್ಯವಾಗುವುದಿಲ್ಲ. ತಾಲೂಕು ಕೇಂದ್ರವಾದರೆ ಸರ್ಕಾರಿ ಸೌಲಭ್ಯಗಳು ಸೇರಿದಂತೆ ಹಲವು ವ್ಯವಸ್ಥೆ ಸನಿಹಕ್ಕೆ ಬರುತ್ತವೆ. ಈಗಾಗಲೇ 1973ರ ವಾಸುದೇವರಾವ್ ಆಯೋಗ 1984ರ ಹುಂಡೇಕಾರ್ ಸಮಿತಿ, 1987ರ ಸಿಪಿ ಗೆದ್ದಿ ಗೌಡರ ಸಮಿತಿ, 2007ರ ಎಂ.ಬಿ.ಪ್ರಕಾಶ ಸಮಿತಿ, ಪರಶುರಾಂಪುರ ತಾಲೂಕು ಕೇಂದ್ರವಾಗಲು ಎಲ್ಲಾ ಅರ್ಹತೆ ಇದೆ ಎಂಬ ವರದಿಯನ್ನು ನೀಡಿದ್ದವು ಎಂದು ತಿಳಿಸಿದರು.

ಪರಶುರಾಂಪುರ ರಾಜ್ಯದಲ್ಲಿಯೇ ಎರಡನೇ ದೊಡ್ಡ ಹೋಬಳಿಯಾಗಿದೆ. ಸುಮಾರು 906.41 ಚದರ ಕಿಲೋಮೀಟರ್ ವ್ಯಾಪ್ತಿಯ ವಿಸ್ತೀರ್ಣ ಹೊಂದಿದ್ದು, ಈ ಹಿಂದೆ ಇದ್ದ 51 ಗ್ರಾಮಗಳ ಜೊತೆಗೆ ಥಳುಕು ಹೋಬಳಿಯ 21 ಗ್ರಾಮಗಳು ಕಸಬಾ ಹೋಬಳಿಯ ಆರು ಗ್ರಾಮಗಳು ಪರಂಪರೆ ಹೋಬಳಿಯ ಮೂರು ಗ್ರಾಮಗಳನ್ನು ಸೇರಿಸಿಕೊಂಡರೆ 81 ಗ್ರಾಮಗಳ ವ್ಯಾಪ್ತಿಯ ಸುಮಾರು 1,80,694 ಜನಸಂಖ್ಯೆಯನ್ನು ಒಳಗೊಂಡಿದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಸಂಘದ ಕಾರ್ಯದರ್ಶಿ ಪ್ರಕಾಶ, ಹೋಬಳಿ ಅಧ್ಯಕ್ಷ ನವೀನ್ ಗೌಡ, ಪದಾಧಿಕಾರಿಗಳು ಪರಮೇಶ್ವರಪ್ಪ, ತಿಮ್ಮಣ್ಣ, ಶಿವು, ಖಾದರ್ ಭಾಷಾ, ಹನುಮಂತ ರಾಯ ಮತ್ತು ಪರಶುರಾಂಪುರದ ಹೋಬಳಿ ಸಾರ್ವಜನಿಕರು ಇದ್ದರು.