ಮಲಪ್ರಭಾ ಅಚ್ಚುಕಟ್ಟು ಪ್ರದೇಶದ 4 ಜಿಲ್ಲೆಯ 13 ತಾಲೂಕುಗಳನ್ನು ಸರ್ಕಾರ ಬರಗಾಲವೆಂದು ಶೀಘ್ರ ಘೋಷಣೆ ಮಾಡದಿದ್ದರೆ ಉಗ್ರ ಹೋರಾಟ ಮಾಡಲಾಗುವುದು.

ಕನ್ನಡಪ್ರಭ ವಾರ್ತೆ ನರಗುಂದ

ಮಲಪ್ರಭಾ ಅಚ್ಚುಕಟ್ಟು ಪ್ರದೇಶದ 4 ಜಿಲ್ಲೆಯ 13 ತಾಲೂಕುಗಳನ್ನು ಸರ್ಕಾರ ಬರಗಾಲವೆಂದು ಶೀಘ್ರ ಘೋಷಣೆ ಮಾಡದಿದ್ದರೆ ಉಗ್ರ ಹೋರಾಟ ಮಾಡಲಾಗುವುದೆಂದು ಕರ್ನಾಟಕ ರೈತ ಸೇನೆ ಅಧ್ಯಕ್ಷ ಶಂಕ್ರಣ್ಣ ಅಂಬಲಿ ಹೇಳಿದರು.

ಶನಿವಾರ ನರಗುಂದ ಬಂದ್‌ ಕರೆ ನಿಮಿತ್ತ ಪಟ್ಟಣದ ವೀರ ಬಾಬಾಸಾಹೇಬರ ಮೂರ್ತಿಗೆ ಮಾಲಾರ್ಪಣೆ ನಂತರ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಹುಬ್ಬಳ್ಳಿ-ಸೋಲ್ಲಾಪೂರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಶಿವಾಜಿ ವೃತ್ತದಲ್ಲಿ ಹೋರಾಟಗಾರರನ್ನು ಉದ್ದೇಶಿಸಿ ಮಾತನಾಡಿದರು.ಪ್ರಸಕ್ತ ವರ್ಷ ಮುಂಗಾರು ಹಂಗಾಮಿನ ಮಳೆ ಕೈ ಕೊಟ್ಟಿದೆ. ಆದ್ದರಿಂದ ನರಗುಂದ ಸೇರಿದಂತೆ ಜಿಲ್ಲೆಯ 6 ತಾಲೂಕುಗಳು ಮತ್ತು ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ಬೆಳಗಾವಿ, ಧಾರವಾಡ, ಬಾಗಲಕೋಟೆಗಳನ್ನು ಬರಗಾಲ ಜಿಲ್ಲೆ ಎಂದು ಘೋಷಿಸಿ ಪರಿಹಾರ ನೀಡಬೇಕು, ಸನ್ 2025-26ನೇ ಸಾಲಿನ ಬೆಳೆ ವಿಮೆ ಪರಿಹಾರ ಮತ್ತು ಈ ವರ್ಷ ವಿಮಾ ಪರಿಹಾರ ಕೂಡಲೇ ಬಿಡುಗಡೆ ಮಾಡಬೇಕು, ರಾಷ್ಟ್ರೀಕೃತ ಮತ್ತು ಸಹಕಾರ ಸಂಘಗಳ ಕೃಷಿ ಸಾಲ ಸಂರ್ಪೂಣ ಮನ್ನಾ ಮಾಡಬೇಕು, ಮಲಪ್ರಭೆಯಲ್ಲಿಯೂ ನೀರಿನ ಕೊರತೆಯಿದ್ದು, ಇರುವ ನೀರನ್ನು ಕುಡಿಯಲು ಅವಶ್ಯವಿರುವ ತಾಲೂಕುಗಳಿಗೆ ಬೇಡಿಕೆಯನುಸಾರವಾಗಿ ಕಾಲುವೆ ಮೂಲಕ ಹರಿಸಬೇಕು, ಕೃಷಿ, ಕೂಲಿ ಕಾರ್ಮಿಕರ ಹಣಕಾಸು ಸಂಸ್ಥೆಗಳ ಸಾಲ ಮನ್ನಾ ಮಾಡಬೇಕು, ಈ ಕೂಡಲೇ ಬ್ಯಾಂಕ್‌ ಅಧಿಕಾರಿಗಳು ಸಾಲ ವಸಲೂತಿ ನಿಲ್ಲಿಸಬೇಕು, ಜಾನುವಾರಗಳಗೆ ಮೇವು ಪೂರೈಕೆ ಮಾಡಬೇಕು, ದುಡಿಯುವ ಕೈಗಳಿಗೆ ಉದ್ಯೋಗ ಒದಗಿಸಬೇಕು, ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಯಬೇಕು, ಸರ್ಕಾರ ನಮ್ಮ ಬೇಡಿಕೆಗಳನ್ನು ಶೀಘ್ರ ಈಡೇರಿಸದಿದ್ದರೆ, ಬಂಡಾಯ ನೆಲದ ಕಿಚ್ಚನ್ನು ರಾಜ್ಯ ವ್ಯಾಪ್ತಿ ಹಬ್ಬಿಸಿ ಉಭಯ ಸರ್ಕಾರಗಳನ್ನು ಪತನಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭ ಬಸವರಾಜ ಸಾಬಳೆ, ಆರ್.ಎನ್. ಪಾಟೀಲ, ಎಸ್.ಎಸ್. ಪಾಟೀಲ, ಉಮೇಶ ಮರ್ಚಪ್ಪನವರ, ವೀರಣ್ಣ ಸೋಪ್ಪಿನ, ನಾಗೇಶ ಅಪೋಜಿ, ಶಂಕರಗೌಡ ಪಾಟೀಲ, ಬಸವರಾಜ ಶೆಲ್ಲಿಕೇರಿ, ಫಕೀರಪ್ಪ ಕೊಳ್ಳಿಯವರ, ಮನೋಹರ ಹುಯಿಲಗೋಳ, ಸಿ.ಎಸ್. ಪಾಟೀಲ, ಎಸ್.ಎಂ. ಮರಿಗೌಡರ, ಅಣ್ಣಪ್ಪಗೌಡ ಪಾಟೀಲ, ಮಲ್ಲಿಕಾರ್ಜುನ ಬೆಳ್ಳೇರಿ, ಈರಪ್ಪ ಮೇಟಿ, ಎಸ್.ಸಿ. ಭೋಸಲೆ, ಡಿ.ಎಂ. ಬಂಗಾರಿ, ಮಲ್ಲಪ್ಪ ಯಲಿಗಾರ, ನಾಗಪ್ಪ ಬೆನ್ನೂರ, ಶೇಖಪ್ಪ ಯಲಿಗಾರ, ಸೇರಿದಂತೆ ಮುಂತಾದವರು ಇದ್ದರು.