ಸಾರಾಂಶ
ಶಿವಮೊಗ್ಗ: ಭಾರತ ಕದನವಿರಾಮ ಘೋಷಿಸಿರುವುದು ರಾಜನೀತಿಯ ಭಾಗವೇ ಹೊರತು, ಅಮೇರಿಕಾಕಕ್ಕೆ ಶರಣಾದ ಹಾಗೇ ಅಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಾಕಿಸ್ತಾನ ಅಮೇರಿಕಾಕ್ಕೆ ಶರಣಾಗಿ ಯುದ್ಧ ನಿಲ್ಲಿಸುವಂತೆ ಮನವಿ ಮಾಡಿತ್ತು. ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ಭಾರತಕ್ಕೆ ಮನವಿ ಮಾಡಿ, ಯುದ್ಧವಿರಾಮ ಘೋಷಿಸುವಂತೆ ಹೇಳಿದ್ದರ ಪರಿಣಾಮವಾಗಿ ಕದನವಿರಾಮ ಘೋಷಿಸಲಾಗಿದೆ. ಇದು ರಾಜತಂತ್ರದ ಭಾಗವೇ ಹೊರತು, ಟ್ರಂಪ್‍ಗೆ ಶರಣಾದ ಹಾಗಲ್ಲ. ಆದರೆ, ಕೆಲವು ಕಾಂಗ್ರೆಸ್ ನಾಯಕರು ಮೋದಿಯವರು ಟ್ರಂಪ್ ಅವರಿಗೆ ಶರಣಾಗಿದ್ದಾರೆ ಎಂದು ಟೀಕಿಸುತ್ತಿದ್ದಾರೆ. ಅವರು ಅರ್ಥಮಾಡಿಕೊಳ್ಳಬೇಕು ಇದು ಶಾಶ್ವತ ನಿರ್ಧಾರವಲ್ಲ. ಯಾವುದೇ ಸಂದರ್ಭದಲ್ಲಿ ಕದನವಿರಾಮವನ್ನು ವಾಪಾಸ್ ತೆಗೆದುಕೊಳ್ಳಬಹುದು ಎಂದರು.ಕದನ ವಿರಾಮದ ಬಳಿಕ ಸಚಿವ ಪ್ರಿಯಾಂಕ ಖರ್ಗೆ ಆಪರೇಷನ್ ಸಿಂದೂರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಪ್ರಧಾನಿ ಮೋದಿ ಅಮೆರಿಕದ ಅಧ್ಯಕ್ಷ ಟ್ರಂಪ್ ಶರಣಾಗಿದ್ದಾರೆ ಎಂದು ಮಾತನಾಡುತ್ತಿದ್ದಾರೆ. ಕದನ ವಿರಾಮ ಘೋಷಣೆ ಮಾಡಿದ್ದಾರೆ ಎಂದರೆ ಇದು ಶಾಶ್ವತ ಅಲ್ಲ ಎಂದು ಕಾಂಗ್ರೆಸ್ ಪಕ್ಷದವರು ಅರ್ಥಮಾಡಿಕೊಳ್ಳಬೇಕು. ಇಂಥ ಸಂದರ್ಭದಲ್ಲಿ ಎಲ್ಲ ಭಾರತದ ಒಗ್ಗಟ್ಟಾಗಿರಬೇಕು ಎಂಬುವುದನ್ನು ಅರ್ಥ. ಅಮೆರಿಕ ಜೊತೆಗೆ ಶರಣಾಗತಿ ಆಗಿಲ್ಲ ಅದೊಂದು ರಾಜನೀತಿ ಕೂಡ ಹೌದು ಎಂದರು.
ಉಗ್ರ ಚಟುವಟಿಕೆ ಶಾಶ್ವತವಾಗಿ ನಿಲ್ಲಬೇಕೆಂಬ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರಮೋದಿ ಅವರ ಸ್ಪಷ್ಟ ನಿರ್ಧಾರವಾಗಿದೆ. ಇತ್ತೀಚೆಗೆ ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಉಗ್ರಗಾಮಿಗಳ ಅಟ್ಟಹಾಸಕ್ಕೆ 28 ಜನರು ಬಲಿಯಾಗಿರುವುದು ಇಡೀ ದೇಶದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಪಾಕಿಸ್ತಾನಕ್ಕೆ ದಿಟ್ಟ ಉತ್ತರ ಕೊಡಲು ಭಾರತ ಸಜ್ಜಾಗಿದಷ್ಟೇ ಅಲ್ಲ, ಆಪರೇಷನ್ ಸಿಂಧೂರ್ ಆರಂಭಮಾಡಿ, ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗಳನ್ನೆಲ್ಲಾ ನಾಶಮಾಡಿದೆ. ಸುಮಾರು 8ಕ್ಕೂ ಹೆಚ್ಚು ಉಗ್ರರನ್ನು ಈಗಾಗಲೇ ಹತ್ಯೆಮಾಡಲಾಗಿದೆ. ಇದು ಮೋದಿ ಸರ್ಕಾರದ ದಿಟ್ಟ ನಿರ್ಧಾರವಾಗಿತ್ತು ಎಂದರು.ಸ್ವಾತಂತ್ರ್ಯ ನಂತರ ಉಗ್ರಗಾಮಿಗಳ ಆಟ್ಟಹಾಸಕ್ಕೆ ಯೋಧರು ಪ್ರಾಣ ಕಳೆದುಕೊಂಡಿದ್ದರು. ಹಿಂದುಗಳು ಪ್ರಾಣ ಕಳೆದು ಕೊಂಡಿದ್ದಾರೆ. ಉಗ್ರಗಾಮಿ ಸಂಘಟನೆಗಳಿಗೆ ಶಕ್ತಿ ನೀಡುವ ಪಾಕಿಸ್ತಾನಕ್ಕೆ ದಿಟ್ಟ ಉತ್ತರ ನೀಡಬೇಕು. ಉಗ್ರಗಾಮಿಗಳು ಮತ್ತು ಸಂಘಟನೆಗಳ ಬುಡ ಸಮೇತ ಕಿತ್ತು ಹಾಕಬೇಕು. ಇದಕ್ಕೆ ಶಕ್ತಿ ನೀಡುವ ಪಾಕಿಸ್ತಾನಕ್ಕೂ ತಕ್ಕ ಪಾಠ ಕಲಿಸಬೇಕು ಎಂದು ಮೋದಿ ನಿರ್ಧಾರ ಕೈಗೊಂಡರು. ಪಾಕಿಸ್ತಾನಕ್ಕೆ ಹರಿಯುತ್ತಿದ್ದ ಸಿಂಧೂ ನದಿಯ ನೀರನ್ನು ನಿಲ್ಲಿಸಲಾಯಿತು. ಆಪರೇಷನ್ ಸಿಂದೂರ ಕಾರ್ಯಾಚರಣೆ ಕೈಗೊಳ್ಳಲಾಯಿತು. ಚೀನಾ, ಟರ್ಕಿ ಹೊರತುಪಡಿಸಿ ಉಳಿದಿಲ್ಲ ದೇಶಗಳು ಭಾರತದ ಬೆಂಬಲಕ್ಕೆ ನಿಂತಿದ್ದವು. ಪಾಕಿಸ್ತಾನದೊಳಗೆ ನುಗ್ಗಿ ಉಗ್ರಗಾಮಿಗಳ ಆಡಗುತಾಣ ಧ್ವಂಸ ಮಾಡಲಾಯಿತು ಎಂದು ತಿಳಿಸಿದರು.
2008ರ ಮುಂಬೈ ಅಟ್ಯಾಕ್‌ನಲ್ಲಿ ಪಾತ್ರ ಇದ್ದ ಮುದಸರ್ ಆಲಿಂ ಸೇರಿದಂತೆ ಭಾರತದ ಮೇಲೆ ದಾಳಿ ನಡೆಸಿದ್ದ ಹಫೀಸ್ ಮಹಮ್ಮದ್ ಜಮೀಲ್, ಮಹಮ್ಮದ್ ಯುಸೂಫ್ ಅಜರ್, ಖಾಲಿದ್ ಸೇರಿದಂತೆ 8 ಉಗ್ರರ ಮಟ್ಟ ಹಾಕುವ ಕೆಲಸ ಆಗಿದೆ. ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿ ಪ್ರಪಂಚಕ್ಕೆ ಸಂದೇಶ ನೀಡಿದ್ದಾರೆ. ಭಾರತದಲ್ಲಿ ಉಗ್ರರ ಚಟುವಟಿಕೆ ಮತ್ತು ದಾಳಿಯನ್ನು ಯುದ್ಧವೆಂದು ಪರಿಗಣಿಸಲಾಗುವುದು ಎಂದು ಮೋದಿ ಸಂದೇಶ ನೀಡಿದ್ದಾರೆ. ನೀರು ಮತ್ತು ರಕ್ತ ಎಂದಿಗೂ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ, ಪಾಕಿಸ್ತಾನಕ್ಕೆ ಸಿಂಧೂ ನದಿ ನೀರಿನ ಹರಿಸಲು ಪಾಕ್ ಪ್ರೇರಿತ ಉಗ್ರರ ಚಟುವಟಿಕೆ ನಿಲ್ಲಿಸಬೇಕು. ಪಾಕಿಸ್ತಾನ ನ್ಯೂಕ್ಲಿಯರ್ ಬ್ಲಾಕ್ ಮೇಲ್ ಗೆ ಭಾರತ ಬಗ್ಗುವುದಿಲ್ಲ. ಪಾಕಿಸ್ತಾನ ಸುಧಾರಿಸಿ ಕೊಳ್ಳದಿದ್ದರೆ ಉಳಿಯುವುದಿಲ್ಲ ಎಂಬ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ್ಯ ಸರ್ಜಿ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಪ್ರಮುಖರಾದ ಹರಿಕೃಷ್ಣ, ಜ್ಯೋತಿಪ್ರಕಾಶ್. ಚಂದ್ರಶೇಖರ್, ಕೆ.ವಿ. ಅಣ್ಣಪ್ಪ, ವಿಕ್ರಮಂ ಇದ್ದರು.
ಕಾಂಗ್ರೆಸ್ ಮುಖಂಡರ ಹೇಳಿಕೆ ಸರಿಯಲ್ಲ
ಟ್ರಂಪ್ ಜೊತೆ ಡೀಲ್ ಆಗಿದೆ ಎಂಬ ಕಾಂಗ್ರೆಸ್ ಮುಖಂಡರ ಹೇಳಿಕೆ ಖಂಡಿತ ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.ಅಮೇರಿಕಾ ಅಧ್ಯಕ್ಷ ಟ್ರಂಪ್ ತಮ್ಮದೇ ಕ್ರೆಡಿಟ್ ಎಂಬ ಹೇಳಿಕೆ ಬಗ್ಗೆ ನಾನು ಉತ್ತರ ಕೊಡಲು ಹೋಗುವುದಿಲ್ಲ. ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತದ ತೆಕ್ಕೆಗೆ ತೆಗೆದು ಕೊಳ್ಳಬೇಕೆಂಬ ಅಪೇಕ್ಷೆ ಇದೆ. ಉಗ್ರಗಾಮಿ ಚಟುವಟಿಕೆಗಳನ್ನು ಬುಡ ಸಮೇತ ಕಿತ್ತು ಹಾಕಬೇಕೆಂಬ ಅಪೇಕ್ಷಿಯೂ ಇದೆ. ಭಾರತದ ಮೋಸ್ಟ್ ವಾಂಟೆಡ್ ಉಗ್ರರು ಕೂಡ ಆಪರೇಷನ್ ಸಿಂದೂರದಲ್ಲಿ ಹತ್ಯೆ ಆಗಿದ್ದಾರೆ ಎಂದರು.
ಆಪರೇಷನ್ ಸಿಂದೂರ್ ಕ್ರೆಡಿಟ್ ಸೇನೆಗೆ ಹೋಗಬೇಕು ಎಂಬ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಪ್ರಧಾನಿ ಮೋದಿ ಕೂಡ ಸೈನ್ಯಕ್ಕೆ ಇದರ ಕ್ರೆಡಿಟ್ ಸೇರಬೇಕು ಎಂದಿದ್ದಾರೆ. ಕಳೆದ ಮೂರು ನಾಲ್ಕು ವರ್ಷದಲ್ಲಿ ಕಾಶ್ಮೀರದಲ್ಲಿ ಉಗ್ರಗಾಮಿ ಚಟುವಟಿಕೆ ಕಡಿಮೆಯಾಗಿತ್ತು. ಕಾಶ್ಮೀರದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗಿತ್ತು. ಇದನ್ನು ಸಹಿಸಿಕೊಳ್ಳಲಾಗದೆ ಉಗ್ರರು ಪ್ರತಿಕಾರಕ್ಕಾಗಿ ದಾಳಿ ಮಾಡಿದ್ದಾರೆ. ಕಾಶ್ಮೀರ ಸೇರಿದಂತೆ ಎಲ್ಲ ವಿಷಯಗಳಿಗೂ ಕಾಲ ಕೂಡಿ ಬರುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.