ಹಾನಗಲ್ಲ: ಕೇಂದ್ರ ಸರ್ಕಾರ ಆರ್ಥಿಕ ವರ್ಷದ ಮಧ್ಯದಲ್ಲಿ ಅನಿರೀಕ್ಷಿತವಾಗಿ ಜಿಎಸ್‌ಟಿ ದರ ತರ್ಕಬದ್ಧಗೊಳಿಸಿದ ಪರಿಣಾಮ ರಾಜ್ಯದ ರಾಜಸ್ವ ಸಂಗ್ರಹಣೆ ಮತ್ತಷ್ಟು ಇಳಿಕೆಯಾಗಿದೆ. ಇಂಥ ಆರ್ಥಿಕ ಸಂಕಷ್ಟ ಮತ್ತು ಕೇಂದ್ರ ಸರ್ಕಾರದ ಅಸಹಕಾರದ ನಡುವೆಯೂ ರಾಜ್ಯ ಸರ್ಕಾರ ಜನಕಲ್ಯಾಣ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ತಾಲೂಕಿನ ಬಾಳಂಬೀಡ ಮತ್ತು ಮನೋಹರ ನಗರ ಗ್ರಾಮದಲ್ಲಿ ₹80 ಲಕ್ಷ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ, ಸಿಸಿ ರಸ್ತೆ ನಿರ್ಮಾಣ, ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣ ಸೇರಿದಂತೆ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಪ್ರತಿವರ್ಷ ಜಿಎಸ್‌ಟಿ ಮೂಲಕ ತೆರಿಗೆ ರೂಪದಲ್ಲಿ ಕೇಂದ್ರ ಸರ್ಕಾರಕ್ಕೆ ಬಹುದೊಡ್ಡ ಪ್ರಮಾಣದ ಆದಾಯ ಸಿಗುತ್ತಿದೆ. ಆದರೆ ಕೇಂದ್ರ ಸರ್ಕಾರ ಮರಳಿ ಪ್ರತಿ ರುಪಾಯಿಗೆ ಪ್ರತಿಯಾಗಿ ಕೇವಲ ೧೩ ಪೈಸೆ ನೀಡುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಸರ್ಕಾರದ ಯೋಜನೆಗಳಿಗೂ ಹಣ ಬಿಡುಗಡೆಯಾಗದ ಕಾರಣ ಯೋಜನೆಗಳನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಮುಂದುವರಿಸಲು ರಾಜ್ಯ ಸರ್ಕಾರವೇ ಹಣ ಬಿಡುಗಡೆ ಮಾಡಿದೆ ಎಂದರು.

ಮುಖಂಡರಾದ ಫಕ್ಕೀರಪ್ಪ ಚಿಕ್ಕಜ್ಜನವರ, ರಾಜೇಂದ್ರ ಬಾರ್ಕಿ, ಶಿವಪ್ಪ ಬಾರ್ಕಿ, ರಾಜೇಂದ್ರ ಜಿನ್ನಣ್ಣನವರ, ಹರೀಶ ಏರಿಮನಿ, ರುದ್ರಪ್ಪ ಹೇರೂರ, ಜಗದೀಶ ಹರಿಜನ, ಸಂತೋಷ ದುಂಡಣ್ಣನವರ, ನಾಗಯ್ಯ ಹಿರೇಮಠ, ಮಂಜಣ್ಣ ತಡಸದ, ಬಸವರಾಜ ಚಲವಾದಿ, ನಾಗರಾಜ ಬೊಮ್ಮಣ್ಣನವರ, ಮಾರುತಿ ದೇವಸೂರ, ಮಂಜು ಶೀಗಿಹಳ್ಳಿ, ಮಕ್ಬೂಲ್‌ ಅಹ್ಮದ್ ಚಂದ್ರಗಿರಿ, ಗುಡ್ಡಪ್ಪ ಕೆಂಚಣ್ಣನವರ, ಉಡುಚಪ್ಪ ಮಾಸಣಗಿ, ಸದಾಗೌಡ ಪಾಟೀಲ, ಶಂಭಣ್ಣ ನೆಗಳೂರ, ದೇವೇಂದ್ರಪ್ಪ ಕತ್ತಿ, ವಿಠ್ಠಲ ಆರೇರ ಇದ್ದರು.