ಹೆಣ್ಣು ಮಕ್ಕಳ ಲಿಂಗಾನುಪಾತ ಕುಸಿತ ತಡೆಗಟ್ಟಬೇಕು

| Published : Feb 05 2024, 01:49 AM IST

ಸಾರಾಂಶ

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಗುರುಭವನದಲ್ಲಿ ತಾಲೂಕಾಡಳಿತ, ತಾಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಸಾಕ್ಷರತಾ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆ ಇಂಡಿ ಇವರ ಸಹಯೋಗದಲ್ಲಿ ಮಕ್ಕಳನ್ನು ರಕ್ಷಿಸಿ ಬೇಟಿ ಪಡಾವೋ ಬೇಟಿ ಬಚಾವೋ ಕಾರ್ಯಕ್ರಮ.

ಕನ್ನಡಪ್ರಭ ವಾರ್ತೆ ಇಂಡಿ

ಬೇಟಿ ಬಚಾವೋ ಬೇಟಿ ಪಡಾವೋ ಈ ಯೋಜನೆ ಹೆಣ್ಣುಮಕ್ಕಳಿಗಾಗಿ ಹೆಣ್ಣು ಮಗುವನ್ನು ಉಳಿಸುವುದು ಮತ್ತು ಭಾರತಾದ್ಯಂತ ಹೆಣ್ಣು ಮಗುವಿಗೆ ಒಳ್ಳೆಯ ಶಿಕ್ಷಣ ನೀಡಿ ಸಮಾಜದ ಮುಖ್ಯವಾಹಿನಿಗೆ ತಂದು ಪುರುಷರಂತೆ ಅವಳೂ ಸಬಲಳನ್ನಾಗಿ ಮಾಡುವ ಉದ್ದೇಶವಾಗಿದೆ ಎಂದು ಸಿಡಿಪಿಒ ಗೀತಾ.ಎಸ್ ಗುತ್ತರಗಿಮಠ ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಗುರುಭವನದಲ್ಲಿ ತಾಲೂಕಾಡಳಿತ, ತಾಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಸಾಕ್ಷರತಾ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆ ಇಂಡಿ ಇವರ ಸಹಯೋಗದಲ್ಲಿ ಮಕ್ಕಳನ್ನು ರಕ್ಷಿಸಿ ಬೇಟಿ ಪಡಾವೋ ಬೇಟಿ ಬಚಾವೋ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ ಉದ್ದೇಶ ಹೆಣ್ಣು ಮಕ್ಕಳ ಲಿಂಗ ಅನುಪಾತ ಕುಸಿತವನ್ನು ತಡೆಯುವುದು. ಆದ್ದರಿಂದ ಇದು ದೇಶದ ಮಹಿಳಾ ಸ್ಥಾನಮಾನವನ್ನು ಸುಧಾರಿಸುವ ಸಲುವಾಗಿ ಮಹಿಳಾ ಸಬಲೀಕರಣವನ್ನು ಉತ್ತೇಜಿಸುತ್ತದೆ. ಭಾರತ ಪುರುಷ ಪ್ರಧಾನ ಸಮಾಜವಾಗಿದ್ದು, ಪ್ರತಿಯೋಂದು ಕೌಟುಂಬಿಕ ವ್ಯವಹಾರ ಪುರುಷರಿಂದಲೇ ನಡೆಯಬೇಕು ಎಂಬ ಹಿಂದಿನ ಪದ್ದತಿ ತೆಗೆದು ಹಾಕಿ ಮಹಿಳೆ ಕೂಡಾ ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾಡುವುದಾಗಿದೆ ಎಂದರು.

ಹೆಣ್ಣು ಮಗುವಿಗೆ ಶಿಕ್ಷಣ ನೀಡುವುದು. ಹೊಸ ಯೋಜನೆಗಳು ಅಭಿವೃದ್ಧಿಪಡಿಸಿ ಪ್ರತಿ ಹೆಣ್ಣು ಮಗುವಿಗೆ ಸುರಕ್ಷಿತವಾಗಿ ರಕ್ಷಿಸಲಾಗಿದೆಯೇ ಎಂಬುವುದನ್ನು ಖಚಿತಪಡಿಸಿಕೊಳ್ಳುವುದು. ಗುಣಮಟ್ಟದ ಶಿಕ್ಷಣ ಸಿಗುವಂತೆ ನೋಡಿಕೊಳ್ಳುವುದು ಈ ಯೋಜನೆಯ ಮೂರು ಪ್ರಾಥಮಿಕ ಉದ್ದೇಶಗಳಾಗಿವೆ. ಒಟ್ಟಾರೇ ಲಿಂಗ ತಾರತಮ್ಯ, ಲೈಂಗಿಕ ಶೋಷಣೆಗಳು, ಬಾಲಾಪರಾಧ, ಬಾಲ್ಯವಿವಾಹಗಳು, ಬ್ರೋಣ ಹತ್ಯೆ ಇಂತಹ ಕೃತ್ಯಗಳನ್ನು ತಡೆಗಟ್ಟುವುದು. ಭಾರತದ ಹೆಣ್ಣು ಮಕ್ಕಳ ಸುತ್ತ ಸುತ್ತುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಭಾರತ ಸರ್ಕಾರ ಕೈಗೊಂಡ ಯೋಜನೆಯಾಗಿದೆ ಎಂದರು.

ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿದಾಗ ಅದು ಅವರಿಗೆ ಉತ್ತಮ ಭವಿಷ್ಯ ಸೃಷ್ಟಿಸುತ್ತದೆ. ಅವಳ ಕಲಿತ ಶಿಕ್ಷಣ ಇಡೀ ಕುಟುಂಬದ ಮೇಲೆ ಪರಿಣಾಮ ಬಿರುತ್ತದೆ. ವಿದ್ಯಾವಂತ ಮಹಿಳೆ ಕುಟುಂಬ ನಿರ್ವಹಣೆ ಪ್ರಮುಖ ಪಾತ್ರವಹಿಸುತ್ತದೆ ಎಂದು ಹೇಳಿದರು.

ಬಿಇಒ ಟಿ.ಎಸ್‌.ಆಲಗೂರ ಮಾತನಾಡಿ, 21ನೇ ಶತಮಾನ ವಿಜ್ಞಾನ ತಂತ್ರಜ್ಞಾನದಲ್ಲಿ ಪ್ರಗತಿ ಇದೆ. ಮೂಢನಂಬಿಕೆ ಸಂಪ್ರದಾಯ ಬಿಡಬೇಕು. ಹೆಣ್ಣು, ಗಂಡು ತಾರತಮ್ಯ ಇರಬಾರದು. 12ನೇ ಶತಮಾನದ ಕವಿಯತ್ರಿ ಸಂಚಿ ಹೊನ್ನಮ್ಮಾ ಅವರ ವಚನ ಕೇಳಬೇಕು. ಭಾರತ ದೇಶ ಸ್ತ್ರೀಯರನ್ನು ಪೂಜ್ಯನೀಯ ಸ್ಥಾನದಲ್ಲಿ ಗೌರವಿಸುತ್ತಾರೆ ಹೇಳಿದರು.

ತಾಲೂಕು ಆರೋಗ್ಯಾಧಿಕಾರಿ ಅರ್ಚನಾ ಕುಲಕರ್ಣಿ ಮಾತನಾಡಿದರು. ಸಹಾಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಾಬು ಹೊಸಮನಿ, ಫಯಾಜುದ್ದೀನ ಇನಾಮದಾರ, ಸುಧಾ ಭಾವಿಕಟ್ಟಿ ಸೇರಿದಂತೆ ವಿವಿಧ ವಲಯಗಳ ಮೇಲ್ವಿಚಾರಕಿಯರು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಅಂಗನವಾಡಿ ಕೇಂದ್ರದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿದ್ದರು.