ಸಾರಾಂಶ
ಆಧುನಿಕತೆಯ ಪರಿಣಾಮದಿಂದ ಇಂದು ನೈತಿಕತೆ ಹಾಗೂ ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿವೆ.
ಹಿರಿಯ ನಾಗರಿಕ ದಿನಾಚರಣೆ, ಕಾನೂನು ಅರಿವು-ನೆರವು ಕಾರ್ಯಕ್ರಮಕ್ಕೆ ಚಾಲನೆ । ಹೆಚ್ಚುವರಿ ಸಿವಿಲ್ ನ್ಯಾಯಾಧೀಶ
ಕನ್ನಡಪ್ರಭ ವಾರ್ತೆ ಕುಷ್ಟಗಿ
ಆಧುನಿಕತೆಯ ಪರಿಣಾಮದಿಂದ ಇಂದು ನೈತಿಕತೆ ಹಾಗೂ ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿವೆ. ಹಿರಿಯರನ್ನು ಗೌರವಿಸುವ ಕಾರ್ಯಗಳು ಆಗದಿರುವುದು ವಿಪರ್ಯಾಸದ ಸಂಗತಿ ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮಹಾಂತೇಶ ಚೌಳಗಿ ಹೇಳಿದರು.ಪಟ್ಟಣದ ತಹಸೀಲ್ದಾರ ಕಾರ್ಯಾಲಯದ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘ, ಕಂದಾಯ ಇಲಾಖೆ ವತಿಯಿಂದ ನಡೆದ ಹಿರಿಯ ನಾಗರಿಕ ದಿನಾಚರಣೆಯ ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದಿನ ದಿನಗಳಲ್ಲಿ ತಾಂತ್ರಿಕ, ವೈಜ್ಞಾನಿಕವಾಗಿ ಮುಂದುವರಿಯುತ್ತಿದ್ದೇವೆ. ಹೊರತು ನಮ್ಮನ್ನು ಬೆಳೆಸಿದ ಸಾಕಿ ಸಲುಹಿದ ಹಿರಿಯ ನಾಗರಿಕರಿಗೆ ಗೌರವ ಕೊಡುವ ಸಂಸ್ಕೃತಿಯು ಕಡಿಮೆಯಾಗಿದೆ, ಇದು ಆಗಬಾರದು. ಹಿರಿಯರನ್ನು ಅತ್ಯಂತ ಗೌರವದಿಂದ ಕಾಣುವ ಕೆಲಸ ಮಾಡಬೇಕು ಎಂದರು.ಹಿರಿಯ ನಾಗರಿಕರಿಗೆ ತೊಂದರೆಗಳು ಉಂಟಾದರೆ ಸಮೀಪದ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ, ಪೊಲೀಸ್ ಠಾಣೆ, ತಹಸೀಲ್ದಾರ ಕಾರ್ಯಾಲಯ ಅಥವಾ ನ್ಯಾಯಾಲಯದ ಮೂಲಕ ಅವರು ನ್ಯಾಯ ಪಡೆದುಕೊಳ್ಳಬಹುದಾಗಿದೆ ಎಂದರು.
ತಹಸೀಲ್ದಾರ ಅಶೋಕ ಶಿಗ್ಗಾಂವಿ ಮಾತನಾಡಿ, ಭಾರತೀಯ ಸಂಸ್ಕೃತಿ ಮರೆತು ನಾವು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿದ್ದೇವೆ. ಯಾವುದೇ ಕಾರಣಕ್ಕೂ ನಮ್ಮ ಭಾರತೀಯ ಸಂಸ್ಕೃತಿ ಮರೆಯಬಾರದು. ನಮ್ಮನ್ನು ಬೆಳೆಸಿದ ಹಿರಿಯರನ್ನು ನಾವು ಅತ್ಯಂತ ಪ್ರೀತಿ, ಗೌರವದಿಂದ ಕಾಣಬೇಕು. ಅಂದಾಗ ನಮ್ಮ ಜನ್ಮ ಸಾರ್ಥಕವಾಗುತ್ತದೆ ಎಂದರು.ಸಹಾಯಕ ಸರ್ಕಾರಿ ಅಭಿಯೋಜಕಿ ಇಂದಿರಾ ಸುಹಾಸಿನಿ, ಅಪರ ಸರ್ಕಾರಿ ವಕೀಲ ಪರಸಪ್ಪ ಗುಜಮಾಗಡಿ, ವಕೀಲರ ಸಂಘದ ಅಧ್ಯಕ್ಷ ಎಸ್.ಜಿ. ಪಾಟೀಲ ಮಾತನಾಡಿದರು.
ಈ ಸಂದರ್ಭ ಗ್ರೇಡ್-2 ತಹಸೀಲ್ದಾರ ಮುರುಳೀಧರ ಮುಕ್ತೇದಾರ, ಸಹಾಯಕ ಸರ್ಕಾರಿ ಅಭಿಯೋಜಕ ರಾಯನಗೌಡ ಎಲ್., ದೈಹಿಕ ಶಿಕ್ಷಣ ಪರಿವೀಕ್ಷಕಿ ಎಂ. ಸರಸ್ವತಿ ಸೇರಿದಂತೆ ಅನೇಕ ವಕೀಲರು ಹಾಗೂ ಹಿರಿಯ ನಾಗರಿಕರು ಇದ್ದರು. ಇದೇ ವೇಳೆ ಕೆಲ ಫಲಾನಭವಿಗಳಿಗೆ ಮಾಸಾಶನ, ವಿಧವಾ ವೇತನ, ಅನೇಕ ಪ್ರಮಾಣಪತ್ರ ವಿತರಿಸಿದರು.