ಸಾರಾಂಶ
ಅಂಕೋಲಾ: ಸಮಾಜದಲ್ಲಿ ಮೌಲ್ಯಗಳು ಕುಸಿದು ಆದರ್ಶಗಳು ಕಡಿಮೆಯಾಗುತ್ತಿರುವ ಇಂದಿನ ದಿನಗಳಲ್ಲಿ ಮೌಲ್ಯಗಳ, ಆದರ್ಶಗಳ ಪುನರ್ ಸ್ಥಾಪನೆಗೆ ತೊಡಗಿಸಿಕೊಳ್ಳುವವರ ಅಗತ್ಯತೆ ಇದೆ. ಹದಗೆಡುತ್ತಿರುವ ವ್ಯವಸ್ಥೆಯನ್ನು ಸರಿಪಡಿಸಲು ಸ್ವಾರ್ಥವಿಲ್ಲದೇ ಸಮಾಜದ ಕುರಿತು ಚಿಂತನೆ ನಡೆಸುವ ಹಿರಿಯರಾದ ಕೆ.ವಿ. ನಾಯಕ ಅವರಂಥವರ ಮಾರ್ಗದರ್ಶನ ಅಗತ್ಯವಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟರು. ತಾಲೂಕಿನ ಶೈಕ್ಷಣಿಕ ಮತ್ತು ಸಹಕಾರಿ ರಂಗದಲ್ಲಿ ಗಣನೀಯ ಸೇವೆಯ ಮೂಲಕ ಗುರುತಿಸಿಕೊಂಡಿರುವ ವಿಶ್ರಾಂತ ಪ್ರಾಧ್ಯಾಪಕ, ಸಹಕಾರಿ ಧುರೀಣ ಪ್ರೊ. ಕೆ.ವಿ. ನಾಯಕ ಅವರಿಗೆ 80 ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಪ್ರೊ. ಕೆ.ವಿ. ನಾಯಕ ಅಭಿನಂದನಾ ಸಮಿತಿ ಆಶ್ರಯದಲ್ಲಿ ಶೆಟಗೇರಿಯ ವಾಸುದೇವ ಸಭಾಭವನದಲ್ಲಿ ನಡೆದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಸ್ವಾಭಿಮಾನಿ ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿದರು.
ಸಮಾಜದಲ್ಲಿ ದೋಷಗಳು ಕಂಡುಬಂದಾಗ ಅವುಗಳನ್ನು ಸರಿಪಡಿಸಿಕೊಳ್ಳುವಂತೆ ಸ್ಪಷ್ಟವಾಗಿ ಸಂದೇಶ ನೀಡುವ ಕೆಲಸ ಸಾಧಕರಿಂದ, ಹಿರಿಯರಿಂದ ಆಗಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಮುಂಬೈ ಲಯನ್ಸ್ ಕ್ಲಬ್ ಗವರ್ನರ್ ಎಂ.ಎಚ್. ನಾಯಕ ಶೆಟಗೇರಿ ಮಾತನಾಡಿ, ಕೆ.ವಿ. ನಾಯಕ ಅವರು ನೇರ, ಸರಳ, ಸಜ್ಜನ ವ್ಯಕ್ತಿತ್ವದವರಾಗಿದ್ದು, ಮನುಷ್ಯರಂತೆ ಬದುಕುವುದನ್ನು ಇವರಿಂದ ಕಲಿಯಬೇಕು ಎಂದರು. ಕಾರ್ಯಕ್ರಮದಲ್ಲಿ ಪ್ರೊ. ಕೆ.ವಿ. ನಾಯಕ, ಸುಶೀಲಾ ದಂಪತಿಯನ್ನು ಸನ್ಮಾನಿಸಿ ಅಭಿನಂದನಾ ಗ್ರಂಥವನ್ನು ಸಮರ್ಪಿಸಲಾಯಿತು. ಗೌರವ ಸ್ವೀಕರಿಸಿ ಮಾತನಾಡಿದ ಪ್ರೊ. ಕೆ.ವಿ. ನಾಯಕ್, ಈ ಆತ್ಮೀಯ ಗೌರವದಿಂದ ಹೃದಯ ತುಂಬಿ ಬಂದಿದೆ. ಎಲ್ಲರಿಗೂ ಋಣಿ ಎಂದರು.ಕೆಎಲ್ಇ ಬಿಎಡ್ ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಅಭಿನಂದನಾ ಸಮಿತಿ ಅಧ್ಯಕ್ಷ ವಿಠ್ಠಲದಾಸ ಕಾಮತ್ ಸ್ವಾಗತಿಸಿದರು. ಉಪಾಧ್ಯಕ್ಷ ಸುಭಾಷ ಕಾರೇಬೈಲ್ ಪರಿಚಯಿಸಿದರು.ಅಭಿನಂದನಾ ಗ್ರಂಥದ ಕುರಿತು ಉಪನ್ಯಾಸಕ, ಗ್ರಂಥ ಸಂಪಾದಕ ಮಹೇಶ ನಾಯಕ ಮಾತನಾಡಿದರು. ಉಪನ್ಯಾಸಕಿ ಪುಷ್ಪಾ ನಾಯ್ಕ ಪುಷ್ಪ ಸಮರ್ಪಣೆ ಮಾಡಿದರು. ಪ್ರಾಚಾರ್ಯ ಡಾ. ವಿನಾಯಕ ಹೆಗಡೆ, ಸಾಹಿತಿ ಹೊನ್ನಮ್ಮ ನಾಯಕ, ಶಿಕ್ಷಕ ಬಾಲಚಂದ್ರ ನಾಯಕ ಕೆ.ವಿ. ನಾಯಕ ಅವರ ಕುರಿತು ಮಾತನಾಡಿದರು.ಶಿಕ್ಷಕ ರಾಜೇಶ ನಾಯಕ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕ ಮಾರುತಿ ಹರಿಕಂತ್ರ ವಂದಿಸಿದರು.ಭೂದಾಖಲೆಗಳ ವೆಬ್ ಪೋರ್ಟಲ್‌ಗೆ ಚಾಲನೆಯಲ್ಲಾಪುರ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಭೂಸುರಕ್ಷಾ ಯೋಜನೆಯಡಿ ಆರಂಭಿಸಲಾದ ಹಳೆಯ ಭೂದಾಖಲೆಗಳ ಗಣಕೀಕರಣ ವೆಬ್ ಪೋರ್ಟಲ್‌ಅನ್ನು ಶಾಸಕ ಶಿವರಾಮ ಹೆಬ್ಬಾರ ಪಟ್ಟಣದ ಆಡಳಿತ ಸೌಧದಲ್ಲಿ ಜ. ೧೩ರಂದು ಚಾಲನೆಗೊಳಿಸಿದರು.ತಹಸೀಲ್ದಾರ್ ಯಲ್ಲಪ್ಪ ಗೋನೆಣ್ಣನವರ ಮಾತನಾಡಿ, ನಮ್ಮ ಕಚೇರಿಯಲ್ಲಿ ೧೩ ಲಕ್ಷಕ್ಕೂ ಹೆಚ್ಚು ಬೇರೆ ಬೇರೆ ದಾಖಲೆಗಳಿಗೆ ಸಂಬಂಧಿಸಿದ ಕಡತದ ಪುಟಗಳಿವೆ. ಅವುಗಳನ್ನು ತಾತ್ಕಾಲಿಕ ಸಿಬ್ಬಂದಿ ನೇಮಿಸಿಕೊಂಡು ಸ್ಕ್ಯಾನ್ ಮಾಡಿ, ಡಿಜಿಟಲೀಕರಣ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಮೊಬೈಲ್ ಮೂಲಕವೂ ತಮ್ಮ ದಾಖಲೆಗಳನ್ನು ಸಾರ್ವಜನಿಕರು ಪಡೆಯಲು ಸಹಕಾರಿಯಾಗುವುದು ಎಂದರು.
ಈ ಸಂದರ್ಭದಲ್ಲಿ ಗ್ರೇಡ್ ೨ ತಹಸೀಲ್ದಾರ್ ಸಿ.ಜಿ. ನಾಯ್ಕ, ಉಪತಹಸೀಲ್ದಾರ್ ಗೀತಾ ಜಾಧವ್ ಸೇರಿದಂತೆ ಕಾರ್ಯಾಲಯದ ಎಲ್ಲ ಹಿರಿಕಿರಿಯ ಸಿಬ್ಬಂದಿ ಉಪಸ್ಥಿತರಿದ್ದರು.