ಸಾರಾಂಶ
ಕನ್ನಡಪ್ರಭ ವಾರ್ತೆ ಸೂಲಿಬೆಲೆ
ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಪುಸ್ತಕ ಓದುಗರ ಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಿದೆ ಎಂದು ಹೊಸಕೋಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಪಾಲಕ ಡಾ.ಶರಣಬಸಪ್ಪ ಕಳವಳ ವ್ಯಕ್ತಪಡಿಸಿದರು.ಸೂಲಿಬೆಲೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಡಿಜಿಟಲ್ ಯುಗದಲ್ಲಿ ಗ್ರಂಥಾಲಯಗಳ ಪಾತ್ರ’ ಕುರಿತು ವಿಶೇಷ ಉಪನ್ಯಾಸ ಹಾಗೂ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಓದುವ ಅಭಿರುಚಿ ಮೂಡಿಸಬೇಕು, ಯಾವುದೇ ಪ್ರಶ್ನೆಗೆ ಉತ್ತರ ಗೂಗಲ್‌ನಲ್ಲಿ ಹುಡುಕುವ ಪರಿಸ್ಥಿತಿ ಇಂದು ಎದುರಾಗಿದೆ, ಡಿಜಿಟಲ್ ಓದು ಜ್ಞಾನಾರ್ಜನೆಯಲ್ಲ, ಪುಸ್ತಕ ಓದುವುದರಿಂದ ಜ್ಞಾನ ಭಂಡಾರ ವೃದ್ಧಿಯಾಗುತ್ತದೆ ಎಂದರು.ಅಂತರ್ಜಾಲ ಅವಲಂಬಿತರು ಮುಂದಿನ ಪೀಳಿಗೆಗೆ ಏನೂ ಕೊಡುಗೆ ನೀಡಲು ಸಾಧ್ಯವಿಲ್ಲ, ಪುಸ್ತಕಗಳು ಭವಿಷ್ಯದ ಇತಿಹಾಸವನ್ನು ದೃಢಪಡಿಸುವ ದಾಖಲೆಗಳು. ದಿನಪತ್ರಿಕೆಗಳು ಹಾಗೂ ಪುಸ್ತಕಗಳನ್ನು ಓದುವ ಆಭ್ಯಾಸ ಹಾಗೂ ಜಾಗೃತಿಗಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು ಒಂದು ವಾರಗಳ ಕಾಲ ಇದನ್ನು ಆಚರಣೆ ಮಾಡಲಾಗುತ್ತದೆ ಎಂದರು.
ಕಾಲೇಜು ಉಪಾಧ್ಯಕ್ಷ ಬಿ.ಎನ್. ಗೋಪಾಲಗೌಡ ಮಾತನಾಡಿ, ವಿದ್ಯಾರ್ಥಿಗಳು ದಿನೇ ದಿನೇ ಓದುವ ಅಭ್ಯಾಸದಿಂದ ವಿಮುಖರಾಗುತ್ತಿರುವುದು ವಿಷಾಧನೀಯ ಸಂಗತಿ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೂ ವಿದ್ಯಾರ್ಥಿಗಳು ಸ್ಪಂದಿಸುತ್ತಿಲ್ಲ, ಅಂತರ್ಜಾಲಕ್ಕೆ ಹೊಂದಿಕೊಂಡು ಜ್ಞಾನಭಂಡಾರದಿಂದ ದೂರವಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.ಸೂಲಿಬೆಲೆ ಪಿಯು ಕಾಲೇಜು ಉಪನ್ಯಾಸಕ ಕುಮಾರ್ ಮಾತನಾಡಿ, ಶಾಲಾ ಮತ್ತು ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳಿಗೆ ಮೊಬೈಲ್ ಬಳಕೆ ಹುಚ್ಚು ಹಿಡಿದಿದೆ. ಇದರಿಂಧ ಪಾಠ, ಪ್ರವಚನಕ್ಕಿಂತ ಇತರೆ ಚಟುವಟಿಕೆಗಳೇ ಜಾಸ್ತಿವಾಗಿವೆ, ಇದರಿಂದ ವಿದ್ಯಾರ್ಥಿಗಳಲ್ಲಿ ಓದುವ ಆಭ್ಯಾಸವೇ ಹಾಳಾಗುತ್ತಿದೆ. ಆದ್ದರಿಂದ ಕಡ್ಡಾಯವಾಗಿ ಶಾಲಾ ಕಾಲೇಜುಗಳಲ್ಲಿ ಮೊಬೈಲ್ ಬಳಕೆ ನಿಲ್ಲಿಸಬೇಕು, ಪೋಷಕರು ಸಹ ಮಕ್ಕಳಿಗೆ ಮೊಬೈಲ್ ನೀಡಬಾರದು ಎಂದರು.
ಕಾಲೇಜು ಪ್ರಾಚಾರ್ಯ ಡಾ.ಮೋಹನ್‌ಕುಮಾರ್, ಸಂಪನ್ಮೂಲ ವ್ಯಕ್ತಿಗಳಾದ ಡಾ.ಅಮೀರ್ ಪಾಷ, ಕುಮಾರ್ ಮಾತನಾಡಿದರು.ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ದೇವಿದಾಸ್, ಸುಬ್ರಾಯ್ ಸೇಠ್, ಬೆಟ್ಟಹಳ್ಳಿ ಗೋಪಿನಾಥ್, ಆನಂದ್, ಎಂ.ಪ್ರಶಾಂತ್, ಗ್ರಾಪಂ ಕಾರ್ಯದರ್ಶಿ ಚಂದ್ರಪ್ಪ. ಗ್ರಂಥಪಾಲಕ ನರಸಪ್ಪ, ಉಪನ್ಯಾಸಕರಾದ ಸಂಗೀತಾ, ಶಶಿಕಲಾ, ಕಲ್ಪನಾ. ಶಿಕ್ಷಣ ಫೌಂಡೇಷನ್ ಹೇಮಂತ್ ಇತರರು ಇದ್ದರು.