ಕೊಪ್ಪಳ: ಹುಲಿಗೆಮ್ಮದೇವಿ ಜಾತ್ರಾ ಅವಧಿಯಲ್ಲಿ ನಿರಂತರ ವಿದ್ಯುತ್ ಸರಬರಾಜು ಹಾಗೂ ಗುಡಿ-ಗೋಪುರಗಳಿಗೆ ವಿದ್ಯುತ್ ಅಲಂಕಾರ ಮತ್ತು ಬೆಳಕಿನ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿ ಡಾ. ಸುರೇಶ ಬಿ.ಇಟ್ನಾಳ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕೊಪ್ಪಳ ಜಿಲ್ಲೆಯ ಹುಲಿಗೆಮ್ಮದೇವಿ ದೇವಸ್ಥಾನದ 2026ರ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಯಾವುದೇ ರೀತಿಯ ವಿದ್ಯುತ್ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಜಾತ್ರಾ ಅವಧಿಯಲ್ಲಿ ಹೆಚ್ಚುವರಿ ವಿದ್ಯುತ್ ಸರಬರಾಜು ಮಾಡಲು ಅನುಕೂಲವಾಗುವಂತೆ ಹೆಚ್ಚುವರಿಯಾಗಿ ಒಂದು ವಿದ್ಯುತ್ ಪರಿವರ್ತಕ ಅಳವಡಿಸಿಕೊಂಡು ಒಟ್ಟಾರೆ 100 ಕಿವ್ಯಾ ಹೆಚ್ಚುವರಿ ವಿದ್ಯುತ್ ಸರಬರಾಜು ಮಾಡಿಕೊಂಡು ಜೆಸ್ಕಾಂ ಇಲಾಖೆಯ ಹೆಚ್ಚಿನ ಸಿಬ್ಬಂದಿ ಜಾತ್ರಾ ಕಾಲದಲ್ಲಿ ನಿಯೋಜನೆ ಮಾಡಬೇಕು.

ನೀರಿನ ಸರಬರಾಜಿಗೆ ಹಾಗೂ ಬೆಳಕಿನ ವ್ಯವಸ್ಥೆಗೆ ಅಡಚಣೆಯಾಗದಂತೆ ನಿರಂತರ ವಿದ್ಯುತ್ ಸರಬರಾಜು ಮಾಡಲು ಮತ್ತು ರಾತ್ರಿ ಸಮಯದಲ್ಲಿ ಯಾವುದೇ ಕಾರಣಕ್ಕೂ ವಿದ್ಯುತ್ ಸ್ಥಗಿತಗೊಳಿಸದಂತೆ ತೀವ್ರ ನಿಗಾ ವಹಿಸಬೇಕು. ಈ ಜಾತ್ರೆ ವೇಳೆಯಲ್ಲಿ ಮೂರು ಸ್ಥಳಗಳಲ್ಲಿ ವಾಹನ ನಿಲುಗಡೆ ಪ್ರದೇಶ ಮಾಡಲಾಗುತ್ತಿದ್ದು, ಯಾವುದೇ ವಿದ್ಯುತ್ ಅವಘಡ ಜರುಗದಂತೆ ಮುಂಜಾಗ್ರತಾ ಕ್ರಮ ವಹಿಸುವಂತೆ ಜೆಸ್ಕಾಂ ಮುನಿರಾಬಾದ್ ಡ್ಯಾಮ್ ಸಹಾಯಕ ಕಾರ್ಯಪಾಲಕ ಅಭಿಯಂತರರು, ಕೊಪ್ಪಳ ಜೆಸ್ಕಾಂ ಕಾರ್ಯಪಾಲಕ ಅಭಿಯಂತರ ಹಾಗೂ ಹುಲಿಗೆಮ್ಮದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದರು.

ಪ್ರತಿ ವರ್ಷದಂತೆ ಈ ವರ್ಷವೂ ದೇವಸ್ಥಾನದ 3 ಗುಡಿ-ಗೋಪುರಗಳು, 3 ಕಮಾನು ಮತ್ತು ಸುತ್ತ ಮುತ್ತಲಿನ ಕಟ್ಟಡಗಳಿಗೆ ವಿದ್ಯುತ್ ಅಲಂಕಾರ ಮಾಡಲು ಹಾಗೂ ಜಾತ್ರಾ ಜನಸಂದಣಿ ಪ್ರದೇಶದಲ್ಲಿ ಹೊಳೆದಂಡೆ ಹತ್ತಿರ,ನದಿತೀರದ ಎರಡೂ ಕಡೆ ಬಯಲು ಪ್ರದೇಶದಲ್ಲಿ, ರೈಲ್ವೆ ಹಳಿ ಪಕ್ಕದಲ್ಲಿ, ಟ್ಯಾಂಕ್ ಏರಿಯಾ ಪ್ರದೇಶ, ಶೌಚಾಲಯಗಳ ಹತ್ತಿರ, ವಾಹನ ನಿಲುಗಡೆ ಸ್ಥಳಗಳು ಹಾಗೂ ಇನ್ನಿತರೆ ಕಡೆಗಳಲ್ಲಿ ಬೆಳಕಿನ ವ್ಯವಸ್ಥೆಗಾಗಿ ಲೈಟ್‌ ಅಳವಡಿಸುವುದು ಮತ್ತು ಮೂರು ಕಡೆಗಳಲ್ಲಿ ಬಂಬುಗಳಲ್ಲಿ ವಾಚ್ ಟವರ್ ನಿರ್ಮಿಸಿ ದೇವಸ್ಥಾನದಿಂದ ಬೆಳಕಿನ ವ್ಯವಸ್ಥೆ ಮಾಡಲು ಇತ್ತೀಚೆಗೆ ನಡೆದ ಸಭೆಯಲ್ಲಿ ನಿರ್ಣಯಿಸಲಾಗಿದ್ದು, ಈ ಬಗ್ಗೆ ಹುಲಿಗೆಮ್ಮದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.