ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬದುಕನ್ನು ರೂಪಿಸಿಕೊಳ್ಳಲಿಕ್ಕಾಗಿಯೇ ಇರುವಂತಹ ಯುವ ವಯಸ್ಸನ್ನು, ಯುವಕ-ಯುವತಿಯರು ತಮ್ಮ ಭವಿಷ್ಯ ನಿರ್ಮಾಣಕ್ಕಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಂಯುಕ್ತಾಶ್ರಯದಲ್ಲಿ, ನವನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಮಟ್ಟದ ಯುವಜನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬದುಕಿನ ನಿರೂಪಣೆ ಮಾಡಿಕೊಳ್ಳುವಲ್ಲಿ ಗಮನ ನೀಡದಿರುವ ಮಕ್ಕಳು ತಂದೆ-ತಾಯಿಗೆ ಶಾಪಗ್ರಸ್ಥರಾಗುತ್ತಾರೆ. ಸಮಾಜಕ್ಕೆ ಕಂಟಕವಾಗುತ್ತಾರೆ. ತಂದೆ ತಾಯಿಗೆ ಎಂತಹ ಮಕ್ಕಳು ಹುಟ್ಟಿದರು ಎಂಬ ಚಿಂತೆಯನ್ನು ತಮ್ಮ ಜೀವನದ ಕೊನೆಯವರೆಗೂ ಕೊರಗುವಂತಹವರಾಗುವುದರಿಂದ ಕಿಡಗೇಡಿಗಳಾಗದೆ ತಂದೆ-ತಾಯಿಗೆ ಶಾಲೆಗೆ ಊರಿಗೆ ಜಿಲ್ಲೆಗೆ ಕೀರ್ತಿ ತರುವಂತಹ ಜೀವನ ರೂಪಿಸಿಕೊಳ್ಳಬೇಕು ಎಂದರು.
ಧರ್ಮ, ಜಾತಿ ಜಾತ್ರೆ ಎಂದು ಪ್ರತಿ ಊರಿನಲ್ಲಿ ಗಲಾಟೆಯಾಗುವಂತಹ ಎಲ್ಲವೂ ಕಲುಷಿತವಾಗಿರುವ ವಾತಾವರಣದಲ್ಲಿ ನಮ್ಮ ಮುಂದಿನ ಯುವ ಪೀಳಿಗೆಯ ಬಹುತೇಕ ಭವಿಷ್ಯ ಅಡಗಿಕೊಂಡಿದೆ. ನಮ್ಮ ಹಿಂದಿನ ಆಚಾರ-ವಿಚಾರ ಸಂಸ್ಕೃತಿ ಸಂಸ್ಕಾರ ಮರೆತುಬಿಟ್ಟಿವೆ. ತಾಯಿಯ ಜೋಗುಳ ಮರೆಯಾಗಿದೆ. ಮಾಧ್ಯಮಗಳಲ್ಲಿ ನಮ್ಮ ಸಂಸ್ಕೃತಿಗೆ ದಕ್ಕೆ ತರುವಂತಹ ಕಾರ್ಯಕ್ರಮಗಳನ್ನು ನೋಡುತ್ತಿರುವುದು ವಿಪರ್ಯಾಸವೇ ಸರಿ. ಈ ಹಿನ್ನೆಲೆಯಲ್ಲಿ ಇತಿಹಾಸ ತಿಳಿಯಲಾರದವನು ಇತಿಹಾಸ ಬರೆಯಲಾರ ಎನ್ನುವಂತೆ ಯುವ ಸಮೂಹ ಹೊಸ ಇತಿಹಾಸ ಸೃಷ್ಟಿಸುವ ದಿಸೆಯತ್ತ ತಮ್ಮ ಚಿತ್ತ ಹರಿಸಿ ಯುವಕರು ಬದುಕು ಹಸನಾಗಿಸಿಕೊಳ್ಳಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಹಾಗೂ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಾಯ್.ಮೇಟಿ ಮಾತನಾಡಿ, ಜನಪದಗಳು ಮರೆಯಾಗುತ್ತಿರುವುದರಿಂದ ಯುವಕರು ಜಾನಪದ ಹಾಡು ನೃತ್ಯಗಳ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹಿರಿಯರ ಕಲೆಗಳನ್ನು ಉಳಿಸಿ ಬೆಳಸಿಕೊಳ್ಳಬೇಕು ಎಂದು ಹೇಳಿದರು.
ಎಮ್ಎಲ್ಸಿ ಪಿ.ಎಚ್ ಪೂಜಾರ ಮಾತನಾಡಿ, ವ್ಯಕ್ತಿತ್ವ ವಿಕಸನಕ್ಕೆ ನಮ್ಮ ಪರಂಪರೆಗಳಲ್ಲಿರುವ ಅಭ್ಯಾಸಗಳ ಅಧ್ಯಯನ ಮಾಡಿದಲ್ಲಿ ಒಳ್ಳೆಯ ನಾಗರಿಕರಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ. ದೇಶದಲ್ಲಿ ಪ್ರಧಾನ ಮಂತ್ರಿಯವರು ವೋಕಲ್ ಫಾರ್ ಲೋಕಲ್ ಎನ್ನುವಂತಹ ರಾಷ್ಟ್ರಮಟ್ಟದ ಕಾರ್ಯಕ್ರಮ ರೂಪಿಸಿದ್ದು ಇರುತ್ತದೆ. ಇದು ಪರಂಪರೆಯಿಂದ ಬಂದಂತಹ ಕಲೆಗಳನ್ನು ಅಭಿವೃದ್ಧಿಪಡಿಸುವುದಾಗಿದ್ದು ನಮ್ಮ ಭಾಗದಲ್ಲಿ ಸ್ಥಳೀಯವಾಗಿ ಉತ್ಪನ್ನವಾಗುವ ವಸ್ತುಗಳಿಗೆ ಧ್ವನಿಯಾಗಿ ಬೆನ್ನುತಟ್ಟಿ ಪ್ರೋತ್ಸಾಹಿಸುವ ಕೆಲಸ ನಾವೆಲ್ಲರೂ ಮಾಡೋಣ ಎಂದರು.ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಸವಿತಾ ಲೆಂಕಣ್ಣವರ, ಜಿಲ್ಲಾಧಿಕಾರಿ ಜಾನಕಿ ಕೆ.ಎಮ್. ಜಿಪಂ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿಏರ್ಶಕ ಗುರುಪಾದ ಢೂಗನವರ ಸೇರಿದಂತೆ ಇತರರು ಇದ್ದರು.