ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದ ಎಲ್ಲಾ ಕೆಪಿಎಸ್ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಕರೆತಂದು, ಶಾಲೆ ಮುಗಿದ ಬಳಿಕ ಮನೆಗೆ ಬಿಟ್ಟುಬರಲು ಸರ್ಕಾರದಿಂದಲೇ ಸ್ವಂತ ಬಸ್ ಸೌಲಭ್ಯ ಕಲ್ಪಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದರು.
ಕನ್ನಡಪ್ರಭ ವಾರ್ತೆ ಆನವಟ್ಟಿ
ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದ ಎಲ್ಲಾ ಕೆಪಿಎಸ್ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಕರೆತಂದು, ಶಾಲೆ ಮುಗಿದ ಬಳಿಕ ಮನೆಗೆ ಬಿಟ್ಟುಬರಲು ಸರ್ಕಾರದಿಂದಲೇ ಸ್ವಂತ ಬಸ್ ಸೌಲಭ್ಯ ಕಲ್ಪಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದರು.ಭಾನುವಾರ ಆನವಟ್ಟಿ ಕೆಪಿಎಸ್ ಶಾಲೆಯಲ್ಲಿ 50 ಲಕ್ಷ ರು. ಅನುದಾನದಲ್ಲಿ ರಂಗಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ, ಭಾರತ್ ಜೋಡೊ ಯುವ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿ, ಗ್ರಾಮೀಣ ಪ್ರದೇಶಗಳಿಂದ ಶಾಲೆ-ಕಾಲೇಜಿಗೆ ಬರುವ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಅರಿತು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸದ್ಯಕ್ಕೆ ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ಕಲ್ಪಿಸಲಾಗುವುದು ಎಂದರು.
ಸುಮಾರು ನಾಲ್ಕು ಸಾವಿರ ಕೋಟಿ ವೆಚ್ಚದಲ್ಲಿ ಹೊಸದಾಗಿ ಒಂದು ಸಾವಿರ ಕೆಪಿಎಸ್ ಶಾಲೆಗಳನ್ನು ರಾಜ್ಯದಲ್ಲಿ ತೆರೆಯಲು ಉದ್ದೇಶಿಸಲಾಗಿದೆ. ಶಿವಮೊಗ್ಗ ಜಿಲ್ಲೆಗೆ ಹೊಸದಾಗಿ 24 ಕೆಪಿಎಸ್ ಶಾಲೆಗಳನ್ನು ಮಂಜೂರು ಮಾಡಲಾಗುವುದು ಎಂದರು.ಹಿಂದೆ ಇದ್ದ ರಂಗಮಂದಿರವನ್ನು ಅನುದಾನ ನೀಡದೆ ನೆಲಸಮ ಮಾಡಲಾಗಿತ್ತು. ಯಾವ ಕಾರಣಕ್ಕಾಗಿ ಅದನ್ನು ನೆಲಸಮಗೊಳಿಸಲಾಯಿತು ಎಂಬುದರ ಕುರಿತು ನಾನು ಚರ್ಚಿಸುವುದಿಲ್ಲ. ಆದರೆ, ಆ ನಿರ್ಧಾರದಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗಿತ್ತು. ವಿದ್ಯಾರ್ಥಿಗಳ ಸಮಸ್ಯೆಯನ್ನು ಅರಿತು 50 ಲಕ್ಷ ರು. ಅನುದಾನ ನೀಡಿದ್ದು, ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.
ಕ್ರೀಡೆ, ನಾಟಕ, ಸಾಂಸ್ಕೃತಿಕ ಚಟುವಟಿಕೆ, ಸಾಮಾಜಿಕ ಸೇವೆ ಹಾಗೂ ಯುವಜನರಲ್ಲಿ ನಾಯಕತ್ವ ಗುಣ ಬೆಳೆಸುವ ಉದ್ದೇಶದಿಂದ ಭಾರತ್ ಜೋಡೊ ಯುವ ಸಂಘವನ್ನು ರಚಿಸಲಾಗಿದೆ. 16 ರಿಂದ 35 ವರ್ಷ ಒಳಗಿನ ಯುವಕ-ಯುವತಿಯರು ಸಂಘದ ಸದಸ್ಯರಾಲು ಅರ್ಹರು. ಸಂಘದ ಉದ್ದೇಶಗಳನ್ನು ಯುವಕ-ಯುವತಿಯರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.ಎನ್‌ಸಿಸಿ ಘಟಕಕ್ಕೆ ಅನುದಾನಕ್ಕೆ ಮನವಿ: ಎನ್‌ಸಿಸಿ ಘಟಕಕ್ಕೆ ಕೇಂದ್ರ ಸರ್ಕಾರದಿಂದ ಬರಬೇಕಿದ್ದ ಅನುದಾನ ಸಕಾಲದಲ್ಲಿ ಬಿಡುಗಡೆಯಾಗಿಲ್ಲ. ಅನುದಾನವನ್ನು ಆದಷ್ಟು ಬೇಗ ಮಂಜೂರು ಮಾಡುವಂತೆ ಕೇಂದ್ರ ಸರ್ಕಾರದೊಂದಿಗೆ ಮಾತನಾಡಬೇಕು ಎಂದು ಎನ್‌ಸಿಸಿ ವಿದ್ಯಾರ್ಥಿಗಳು ಸಚಿವರಲ್ಲಿ ಮನವಿ ಮಾಡಿದರು.
ಸಮಾರಂಭದಲ್ಲಿ ಉಪಪ್ರಾಂಶುಪಾಲ ಎಂ. ಮಹಾದೇವಪ್ಪ, ಸಿಡಿಸಿ ಉಪಾಧ್ಯಕ್ಷ ನಾಗರಾಜ ಶುಂಠಿ, ಸದಸ್ಯ ಎಂ. ಸುರೇಶ್ ಕುಬಟೂರು, ಕಾಂಗ್ರೆಸ್ ಆನವಟ್ಟಿ ಬ್ಲಾಕ್ ಅಧ್ಯಕ್ಷ ಸದಾನಂದಗೌಡ ಬಿಳಗಲಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಪಿ. ರುದ್ರಗೌಡ, ಶಿವಲಿಂಗೇಗೌಡ, ಮುಖಂಡರಾದ ಮಧುಕೇಶ್ವರ ಪಾಟೀಲ್, ಸಿದ್ದಲಿಂಗೇಶ್, ಸುರೇಶ್ ಹಾವಣ್ಣನವರ್, ಸಂಜಿವ ನೇರಲಗಿ, ಚಾಂದ್ ಸಾಬ್, ಹಬಿಬುಲ್ಲಾ ಹವಾಲ್ದಾರ್, ಪರಮೇಶ್ ನೆಗವಾಡಿ, ಅರುಣ ಸಮನವಳ್ಳಿ ಉಪಸ್ಥಿತರಿದ್ದರು.