ಸಾರಾಂಶ
ಜಿಲ್ಲಾ ವಕೀಲರ ಸಂಘದಿಂದ ಹಮ್ಮಿಕೊಂಡಿದ್ದ ವಕೀಲರ ದಿನಾಚರಣೆಯಲ್ಲಿ ನ್ಯಾ. ರಾಜೇಶ್ವರಿ ಹೆಗಡೆ ಪ್ರತಿಪಾದನೆ
ಕನ್ನಡಪ್ರಭ ವಾರ್ತೆ ದಾವಣಗೆರೆಹಲವು ಕ್ಷೇತ್ರಗಳ ಪರಿಣಿತಿ ಬಯಸುವ ವಕೀಲ ವೃತ್ತಿಯಲ್ಲಿ ಅನೇಕ ಸವಾಲುಗಳಿವೆ. ವಕೀಲರು ಸಮಾಜದಲ್ಲಿ ನಿರ್ವಹಿಸಬಹುದಾದ ಕಾರ್ಯಗಳಿಗೆ ಮಿತಿಯಿಲ್ಲ. ವಕೀಲರ ಶ್ರಮ ಮತ್ತು ತ್ಯಾಗಗಳ ಸಮಾಜ ಗುರುತಿಸುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ಪ್ರತಿಪಾದಿಸಿದರು.
ನಗರದ ವಕೀಲರ ಸಮುದಾಯ ಭವನದಲ್ಲಿ ಜಿಲ್ಲಾ ವಕೀಲರ ಸಂಘದಿಂದ ಹಮ್ಮಿಕೊಂಡಿದ್ದ ವಕೀಲರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಪರಿಶ್ರಮದ ದುಡಿಮೆ ಇಂದ ಮಾತ್ರ ವಕೀಲ ವೃತ್ತಿಯಲ್ಲಿ ಯಶಸ್ಸುಗಳಿಸಲು ಸಾಧ್ಯ. ಅರ್ಪಣಾ ಮನೋಭಾವ, ವೃತ್ತಿಯ ನೀತಿ ಪಾಲಿಸಬೇಕು. ವಕೀಲರ ಎಲ್ಲಾ ಸಕ್ರಿಯ ಚಟುವಟಿಕೆಗಳಲ್ಲಿ ನ್ಯಾಯಾಂಗದ ಸಹಕಾರ ಇದೆ. ಜಿಲ್ಲಾ ವಕೀಲರ ಸಂಘವು ಹಲವು ಯುವ ವಕೀಲರಿಗಾಗಿ ಉಪಾನ್ಯಾಸ ಕಾರ್ಯಕ್ರಮ ಶ್ಲಾಘನೀಯ ಎಂದು ಹೇಳಿದರು.ಮುಖ್ಯ ಅತಿಥಿಗಳಾಗಿ ಮಾತನಾಡಿದ ಹಿರಿಯ ವಕೀಲ ರಾಮಚಂದ್ರ ಕಲಾಲ್, ಪ್ರಜಾಪ್ರಭುತ್ವ ಉಳಿದಿರುವುದು ನಿರ್ಭೀತಯಿಂದ ಕಾರ್ಯನಿರ್ವಹಿಸುತ್ತಿರುವ ನ್ಯಾಯಾಂಗ ಮತ್ತು ನ್ಯಾಯಾವಾದಿಗಳಿಂದ ಎಂಬುದು ನಿರ್ವಿವಾದ. ರಾಜಕಾರಣಿಗಳಿಗೆ ಕಾನೂನಿನ ಅರಿವು ಹೆಚ್ಚಾಗಿ ಇಲ್ಲದಿರುವ ಇಂದಿನ ದಿನಗಳಲ್ಲಿ ಶಾಸನಗಳ ರೂಪಿಸುವಾಗ ಹಿರಿಯ ವಕೀಲರ ಸಲಹೆ ಪಡೆಯುವುದು ಸೂಕ್ತ ಎಂದರು.
ಕೊನೆ ಇಲ್ಲದ ವಕೀಲರ ವೃತ್ತಿಯಲ್ಲಿ ತಮ್ಮನ್ನು ಬದಿಗಿರಿಸಿ ಕಕ್ಷಿದಾರರ ನೋವನ್ನು ಸರಿಯಾಗಿ ಅರ್ಥ ಮಾಡಿಕೊಂಡು ಕಾನೂನಿನ ಚೌಕಟ್ಟಿನಲ್ಲಿ ನ್ಯಾಯ ಕೊಡಿಸುವಲ್ಲಿ ಮುಂದಾಗಬೇಕು ಎಂದು ಹಿರಿಯ ವಕೀಲ ಎಂ.ಬಿ.ಶಿವಾನಂದಪ್ಪ ಕರೆ ನೀಡಿದರು.ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್.ಅರುಣ್‌ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಪ್ರಜಾಪ್ರಭುತ್ವದ ಮೂರು ಅಂಗಗಳಾದ ಶಾಸಕಾಂಗ, ಕಾರ್ಯಂಗ ಮತ್ತು ನ್ಯಾಯಾಂಗ ಸಮರ್ಪಕವಾಗಿ ಕೆಲಸ ಮಾಡುವಲ್ಲಿ ವಕೀಲರ ಪಾತ್ರ ಮಹತ್ವದ್ದಾಗಿದೆ. ಸಂವಿಧಾನ ಸಭೆಯ ಸದಸ್ಯರಾಗಿದ್ದ ಎಚ್.ಸಿದ್ದವೀರಪ್ಪನವರು ನಮ್ಮ ಸಂಘದ ಸದಸ್ಯರಾಗಿದ್ದರು ಎಂಬು ಹೆಮ್ಮೆಯ ಸಂಗತಿ. ತನ್ನ ಸಂಸ್ಥಾಪನೆಯ 75ನೇ ವರ್ಷ ಆಚರಿಸಿಕೊಳ್ಳುತ್ತಿರುವ ಜಿಲ್ಲಾ ವಕೀಲರ ಸಂಘ ಹಲವಾರು ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ವಕೀಲರಾದ ಎಚ್.ಎನ್.ರಾಜಶೇಖರಪ್ಪ, ಎಂ.ಬಿ.ಶಿವಾನಂದಪ್ಪ ಹಾಗೂ ರಾಮಚಂದ್ರ ಕಲಾಲ್ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎ.ಆರ್.ಪ್ರಸನ್ನ ಕುಮಾರ್, ಜಿಲ್ಲಾ ಮಕ್ಕಳ ಸ್ನೇಹಿ ನ್ಯಾಯಾಧೀಶ ಶ್ರೀಪಾದ, ವಕೀಲರ ಸಂಘದ ಉಪಾಧ್ಯಕ್ಷ ಜಿ.ಕೆ.ಬಸವರಾಜ್ ಗೋಪನಾಳ್, ಕಾರ್ಯದರ್ಶಿ ಎಸ್.ಬಸವರಾಜ್, ಸಹಕಾರ್ಯದರ್ಶಿ ಎ.ಎಸ್.ಮಂಜುನಾಥ್, ಕಾರ್ಯಕಾರಿ ಸಮಿತಿ ಸದಸ್ಯರಾದ ವಾಗೀಶಿ ಕಟಿಗೆಹಳ್ಳಿ ಮಠ್, ಅಜ್ಜಯ್ಯ ಬಿ., ಚೌಡಪ್ಪ ಎಂ. ನಾಗರಾಜ್, ನೀಲಕಂಠಯ್ಯ., ಭಾಗ್ಯಲಕ್ಷೀ ಆರ್, ರಾಘವೇಂದ್ರ ಎಂ. ಸಂತೊಷ್ ಕುಮಾರ್ ಜಿ.ಜೆ ಇತರರಿದ್ದರು. ವಕೀಲರು ಭಾಷೆ ಮೇಲೆ ಪ್ರೌಢಿಮೆ ಸಾಧಿಸುವುದು ಅಗತ್ಯ, ಕಕ್ಷಿದಾರನಿಗೆ ಅನ್ಯಾಯವಾಗಿರುವ ಅಂಶ ಹುಡುಕಿ ತೆಗೆದು ನ್ಯಾಯಾಲಯದ ಮುಂದೆ ಸಮರ್ಥವಾಗಿ ಮಂಡಿಸಿ ನ್ಯಾಯ ಒದಗಿಸಬೇಕು.ಎಚ್.ಎನ್.ರಾಜಶೇಖರಪ್ಪ, ಹಿರಿಯ ವಕೀಲ