ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ತಂತ್ರಜ್ಞಾನದ ಮೂಲಕ ಪ್ರಕಟಗೊಳ್ಳುವ ಸಾಹಿತ್ಯ ದಾಖಲಾರ್ಹವಲ್ಲವಾದರೂ, ಪ್ರಕಾಶನದ ಮೂಲಕ ಪ್ರಕಟಗೊಳ್ಳುವ ಸಾಹಿತ್ಯ ಶಾಶ್ವತವಾಗಿ ನೆಲೆ ನಿಲ್ಲುತ್ತದೆ ಎಂದು ವಿಮರ್ಶಕ ಡಾ. ಅರವಿಂದ ಮಾಲಗತ್ತಿ ಹೇಳಿದರು.ವಿಜಯನಗರದ ಜಿಲ್ಲಾ ಸಾಹಿತ್ಯ ಭವನದಲ್ಲಿ ಭಾನುವಾರ ಅಕ್ಷರ ನಾದ ಪಬ್ಲಿಕೇಷನ್ಸ್‌ಎ.ಎಸ್.ಟಿ.ಆರ್, ಅಕ್ಷರನಾದ- ಕಲೆ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಿದ್ದ ಕವಿ ಕಾವ್ಯ ಕಥಾ ಸಂಗಮ ಮೊದಲ ಆವೃತ್ತಿ- 2024, ಅಕ್ಷರ ನಾದದ ಮೊದಲ ವಾರ್ಷಿಕೋತ್ಸವ ಹಾಗೂ 38 ಕೃತಿಗಳ ಲೋಕಾರ್ಪಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯದಲ್ಲಿ ಒಂದು ದೊಡ್ಡ ಪರಂಪರೆಯೇ ಇದೆ. ರನ್ನನ ಅಜಿತನಾಥ ಪುರಾಣವನ್ನು ಅತ್ತಿಮಬ್ಬೆ ಅನೇಕ ಪ್ರತಿಗಳನ್ನು ಅಚ್ಚಾಕಿಸಿ ಹಂಚಿದ ದಾಖಲೆ ಇದೆ. ಮಹಿಳೆಯರು ಈ ರೀತಿಯ ಕೃತಿ ಪ್ರಕಟಣೆಯ ಪುಣ್ಯದ ಕಾರ್ಯದಲ್ಲಿಯೊ ತೊಡಗಿಸಿಕೊಂಡಿದ್ದಾರೆ. ಇಂತಹ ಕೆಲಸ ಮಾಡುವುದು ಧಾರ್ಮಿಕ ಸೇವೆ ಎಂದು ಅತ್ತಿಮಬ್ಬೆ ತಿಳಿದಿದ್ದಳು. ಅಂತಹ ಪರಂಪರೆಯ ಪ್ರತಿರೂಪವೇ ಶ್ರುತಿ ಎಂದು ಶ್ಲಾಘಿಸಿದರು.ಇಂತಹ ಅತ್ತಿಮಬ್ಬೆಯರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಇನ್ನೂ ಬೇಕಾಗಿದ್ದಾರೆ. ಇಂತಹ ಎಷ್ಟು ಮಂದಿ ಬಂದರೂ ಕಡಿಮೆಯೇ. ಮಹಿಳೆಯರು ಇಂದು ಎಲ್ಲಾ ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಮಂದಿ ಸಿಗುತ್ತಾರೆ. ಆದರೆ ಪ್ರಕಾಶನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದವರು ವಿರಳ ಎಂದರು.
ಮಹಿಳೆಯರು ಯಾವ ಪುರುಷರಿಗೂ ಕಡಿಮೆ ಇಲ್ಲ ಎಂಬುದನ್ನು ಒಪ್ಪಿಕೊಳ್ಳಬೇಕು. ಪ್ರಕಾಶನ ಕ್ಷೇತ್ರ ಮಹತ್ವದ ಕಾರ್ಯ ಎನಿಸುತ್ತದೆ. ಜಗತ್ತು ತಂತ್ರಜ್ಞಾನದ ಜತೆಗೆ ತೊಡಗಿಸಿಕೊಂಡಿದೆ. ಹಾಗೆ ನೋಡಿದರೆ ಎಲ್ಲರೂ ಲೇಖಕರೇ. ಯಾರ ಯಾರಲ್ಲಿ ಮೊಬೈಲ್ ಇದೆಯೋ, ಪ್ರತಿಯೊಬ್ಬರೂ ಕೂಡ ಸಾಮಾನ್ಯ ಜನತೆಯ ನೋವು, ಸ್ತ್ರೀ ಸಾಮಾನ್ಯರ ನೋವು, ಅನಿಸಿಕೆ, ಅಭಿಪ್ರಾಯ ಹಂಚಿಕೊಳ್ಳಲು ಇದು ಸೂಕ್ತ ಜಾಗವಾಗಿದೆ ಎಂದು ಅವರು ಹೇಳಿದರು.ತಂತ್ರಜ್ಞಾನದ ಒಳಗಿನ ಸಾಹಿತ್ಯ ದಾಖಲಾರ್ಹವೇ? ಎಂದರೆ ಅಲ್ಲ ಎಂದೇ ಹೇಳಬೇಕು. ಆದರೆ ಮುದ್ರಣ ಮಾಧ್ಯಮ ಹೆಚ್ಚು ಕಾಲ ನೆಲೆ ನಿಲ್ಲುವಂತೆ ಮಾಡುತ್ತದೆ. ಬದ್ಧತೆ ಎಲ್ಲರಲ್ಲಿಯೂ ಬರುತ್ತಿದೆ ಎಂದರೆ ಕವಿಗಳಾಗುತ್ತಾರೆ ಎಂದರ್ಥ. ಲೇಖಕರಾಗುವುದು ಎಂದರೆ ಮನುಷ್ಯನಾಗುವುದು ಎಂದರ್ಥ. ಅಕ್ಷರನಾದ ಸಂಸ್ಥೆ ಮನುಷ್ಯರನ್ನಾಗಿಸಲು ಹಾತೊರೆಯುತ್ತಿದೆ. 38 ಕೃತಿಗಳ ಲೋಕಾರ್ಪಣೆ ಸಾಮಾನ್ಯ ಸಂಗತಿಯಲ್ಲ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಒಂದೇ ಕಾಲಕ್ಕೆ ನೂರು ಪುಸ್ತಕ, ಮುನ್ನೂರು ಪುಸ್ತಕ ಬಿಡುಗಡೆ ಕಾರ್ಯಕ್ರಮಗಳು ನಡೆದಿವೆ. ಆದರೆ ಸರ್ಕಾರ ಮಾಡಬಹುದಾದ ಕೆಲಸವನ್ನು ನಾನು ಮಾಡುತ್ತೇನೆ ಎಂದು ಮುಂದೆ ಬಂದಿರುವುದು ದೊಡ್ಡದು. ಸರ್ಕಾರದಲ್ಲಿ ದುಡ್ಡಿರುತ್ತದೆ. ಆದರೆ ಒಂದು ಖಾಸಗಿ ಸಂಸ್ಥೆ ಈ ಕೆಲಸ ಮಾಡುತ್ತಿದೆ. ಸಾಹಿತ್ಯದ ಕೆಲಸವನ್ನು ಮಾಡುವ ಮೂಲಕ ಸಾಮಾಜಿಕ ಪರಿವರ್ತನೆ ಕೆಲಸಕ್ಕೆ ಸಂಸ್ಥೆ ಮುಂದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಜ್ಞಾನವೇ ದೊಡ್ಡದು. ನಿಮ್ಮ ಬರವಣಿಗೆಯಲ್ಲಿ ಅನುಭವಕ್ಕೆ ಆದ್ಯತೆ ಕೊಡಿ. ನಿಮ್ಮ ಅನುಭವದ ಶಕ್ತಿಯನ್ನು ಬರವಣಿಗೆಯಲ್ಲಿ ಹಂಚಿ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಅಕ್ಷರನಾದ ಪಬ್ಲಿಕೇಷನ್ ಅಧ್ಯಕ್ಷೆ ಶ್ರುತಿ ಮಧುಸೂದನ್, ಉಪಾಧ್ಯಕ್ಷ ಮಧುಸೂದನ್ ಕೆ. ಆಚಾರ್, ನಟ ಸ್ಟೈಲ್ ಶಿವಕುಮಾರ್, ಮಂಜುಳಾ ಪಾವಗಡ, ಸಿದ್ದನಕೊಪ್ಪಲು ಕುಮಾರ್, ಟಿ. ತ್ಯಾಗರಾಜು ಮೊದಲಾದವರು ಇದ್ದರು.