ಮುರುಗಮಲೆಯಲ್ಲಿ ದವಾ-ದುವಾ ಆಸ್ಪತ್ರೆ ಲೋಕಾರ್ಪಣೆ

| Published : Oct 06 2024, 01:27 AM IST

ಮುರುಗಮಲೆಯಲ್ಲಿ ದವಾ-ದುವಾ ಆಸ್ಪತ್ರೆ ಲೋಕಾರ್ಪಣೆ
Share this Article
  • FB
  • TW
  • Linkdin
  • Email

ಸಾರಾಂಶ

ಮಾನಸಿಕ ಕೇಂದ್ರದಲ್ಲಿ ಮಾನಸಿಕ ರೋಗಿಗಳಿಗೆ ದೇವರ ಮತ್ತು ವಿಜ್ಞಾನದ ಜೊತೆಗೂಡಿ ಅವರ ರೋಗವನ್ನು ಗುಣಪಡಿಸುವ ನೂತನ ವಿಧಾನವಾಗಿದ್ದು ಪ್ರಾರ್ಥನೆಯೊಂದಿಗೆ ಆಧುನಿಕ ವೈದ್ಯಕೀಯ ಚಿಕಿತ್ಸಾ ವಿಧಾನಗಳನ್ನು ಬಳಸಿಕೊಂಡು ಚಿಕಿತ್ಸೆ ನೀಡಲಾಗುವುದು.

ಕನ್ನಡಪ್ರಭ ವಾರ್ತೆ ಚಿಂತಾಮಣಿ

ವಿವಿಧ ರೀತಿಯ ಮಾನಸಿಕ ತೊಳಲಾಟಗಳಿಂದ ಬಳಲುತ್ತಿರುವ ರೋಗಿಗಳಿಗೆ ಈ ಮಾನಸಿಕ ರೋಗಿಗಳ ಆಸ್ಪತ್ರೆಯ ಒಂದು ವರದಾನ ಎಂದು ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ನುಡಿದರು.

ತಾಲೂಕಿನ ಹಿಂದೂ- ಮುಸ್ಲಿಂ ಪವಿತ್ರ ಯಾತ್ರಾ ಸ್ಥಳವಾದ ಮುರುಗಮಲೆಯಲ್ಲಿ ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ದವಾ - ದುವಾ ಎಂಬ ಹೆಸರಿನ ಮಾನಸಿಕ ರೋಗಿಗಳ ಆಸ್ಪತ್ರೆಯ ಕೇಂದ್ರವನ್ನು ಅಮ್ಮಜಾನ್ ಬಾವಾಜಾನ್ ಆವರಣದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಉದ್ಘಾಟಿಸಿದರು.

ಪ್ರಾರ್ಥನೆ ಜತೆ ಚಿಕಿತ್ಸೆ

ನಂತರ ಮಾತನಾಡಿದ ಆರೋಗ್ಯ ಸಚಿವರು, ಮಾನಸಿಕ ಕೇಂದ್ರದಲ್ಲಿ ಮಾನಸಿಕ ರೋಗಿಗಳಿಗೆ ದೇವರ ಮತ್ತು ವಿಜ್ಞಾನದ ಜೊತೆಗೂಡಿ ಅವರ ರೋಗವನ್ನು ಗುಣಪಡಿಸುವ ನೂತನ ವಿಧಾನವಾಗಿದ್ದು ಪ್ರಾರ್ಥನೆಯೊಂದಿಗೆ ಆಧುನಿಕ ವೈದ್ಯಕೀಯ ಚಿಕಿತ್ಸಾ ವಿಧಾನಗಳನ್ನು ಬಳಸಿಕೊಂಡು ಹಾಗೂ ಧರ್ಮದ ಜೊತೆಗೂಡಿ ಆರೋಗ್ಯವನ್ನು ಸುಧಾರಿಸುವ ಒಂದು ಹೊಸ ಯೋಜನೆಗೆ ಈ ಒಂದು ಮಾನಸಿಕ ಆಸ್ಪತ್ರೆಯಾಗಿದೆ ಎಂದು ನುಡಿದರು.

ರಾಜ್ಯದ ವಿವಿದೆಡೆಗಳಲ್ಲಿ ಸರ್ಕಾರದ ವತಿಯಿಂದ ಚರ್ಚ್, ದರ್ಗಾ ಮತ್ತು ದೇವಾಲಯಗಳಲ್ಲಿ ಇಂತಹ ಆರೋಗ್ಯ ಕೇಂದ್ರಗಳನ್ನು ದೇವರ ಸನ್ನಿಧಿಯಲ್ಲಿ ವೈದ್ಯಕೀಯ ವಿಧಾನಗಳನ್ನು ಉಪಯೋಗಿಸಿಕೊಂಡು ಮಾನಸಿಕ ರೋಗಿಗಳ ಖಾಯಿಲೆಗಳನ್ನು ಗುಣಪಡಿಸುವುದು ಈ ಚಿಕಿತ್ಸಾ ಕೇಂದ್ರದ ಪ್ರಮುಖ ಉದ್ದೇಶವಾಗಿದೆಯೆಂದರು.

ಪ್ರಯೋಗಾಲಯ ಕೊಠಡಿ ಉದ್ಘಾಟನೆ

ಇದಕ್ಕೂ ಮುನ್ನಾ ನಗರದ ಸಾರ್ವಜನಿಕ ಆಸ್ಪತ್ರೆಯ ಲ್ಯಾಬ್‌ನ ನೂತನ ಕೊಠಡಿಗಳನ್ನು ಉದ್ಘಾಟಿಸಿದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಜಿಲ್ಲಾಧಿಕಾರಿ ರವೀಂದ್ರ, ಮಾನಸಿಕ ಆರೋಗ್ಯ ರಾಜ್ಯ ಉಪನಿರ್ದೇಶಕಿ ಡಾ.ರಜನಿ ಸಿಇಒ ಪ್ರಕಾಶ್ ಜಿಟಿ ನಿಟ್ಟಾಲಿ, ಡಿಹೆಚ್‌ಒ ಮಹೇಶ್‌ಕುಮರ್, ಶಿವಕುಮಾರ್, ಟಿಹೆಚ್‌ಒ ರಾಮಚಂದ್ರ ರೆಡ್ಡಿ, ಇಒ ಎಸ್. ಆನಂದ್, ತಹಸೀಲ್ದಾರ್ ಸುದರ್ಶನ್‌ಯಾದವ್, ಆರೋಗ್ಯ ನಿರೀಕ್ಷಕ ಶ್ರೀನಿವಾಸರೆಡ್ಡಿ ಇದ್ದರು.