ಅಯೋಧ್ಯೆ ಬಾಲರಾಮನಿಗೆ ಚಿನ್ನದ ಪ್ರಭಾವಳಿ ಸಮರ್ಪಣೆ

| Published : Feb 11 2024, 01:45 AM IST

ಸಾರಾಂಶ

ಅಯೋಧ್ಯೆಯ ಬಾಲರಾಮನಿಗೆ ಶ್ರೀ ಸಂಸ್ಥಾನ‌ ಕಾಶಿ ಮಠದ ಶ್ರೀ ಸಂಯಮೀಂದ್ರ ತೀರ್ಥ ಶ್ರೀಪಾದರು ಮತ್ತು ಭಕ್ತರಿಂದ ಸ್ವರ್ಣ ಅಟ್ಟೆ ಪ್ರಭಾವಳಿಯನ್ನು ಅರ್ಪಿಸಲಾಯಿತು. ಬಾಲರಾಮನ ಉತ್ಸವ ಮೂರ್ತಿಗೆ ಈ ಚಿನ್ನದ ಅಟ್ಟೆ ಪ್ರಭಾವಳಿಯನ್ನು ತೊಡಿಸಿ, ಅದನ್ನು ರಜತಪಲ್ಲಕ್ಕಿಯಲ್ಲಿಟ್ಟು ಪ್ರದಕ್ಷಿಣೆ ಮಾಡಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಅಯೋಧ್ಯೆಯ ಬಾಲರಾಮನಿಗೆ ಶ್ರೀ ಸಂಸ್ಥಾನ‌ ಕಾಶಿ ಮಠದ ಶ್ರೀ ಸಂಯಮೀಂದ್ರ ತೀರ್ಥ ಶ್ರೀಪಾದರು ಮತ್ತು ಭಕ್ತರಿಂದ ಅರ್ಪಿಸಲಾದ ಸುಮಾರು 70 ಲಕ್ಷ ರು. ಮೌಲ್ಯದ ಸ್ವರ್ಣ ಅಟ್ಟೆ ಪ್ರಭಾವಳಿಯನ್ನು ಶನಿವಾರ ಅಯೋಧ್ಯೆಯಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಸಮರ್ಪಿಸಿದರು.

ಈ ಸಂದರ್ಭ ಶ್ರೀಗಳು ದೂರವಾಣಿ ಮೂಲಕ ಸಂದೇಶ ನೀಡಿ, ಕಾಶಿ ಮಠಾಧೀಶರು, ರಾಮ ಭಕ್ತರು ಸೇರಿ ಬೆಳ್ಳಿ ಪಲ್ಲಕ್ಕಿ ಮತ್ತು ಸ್ವರ್ಣ ಪ್ರಭಾವಳಿಯನ್ನು ರಾಮನಿಗೆ ಅರ್ಪಣೆ ಮಾಡುವ ಮೂಲಕ ಸ್ವರ್ಣಾಕ್ಷರದಲ್ಲಿ ಬರೆದಿಡುವಂಥ ಕಾರ್ಯ ಮಾಡಿರುವುದು ಅತ್ಯಂತ ಶ್ಲಾಘನೀಯ. ಇದೀಗ ರಾಮಮಂದಿರ ನಿರ್ಮಾಣವಾಗಿದೆ. ಇನ್ನು ರಾಮರಾಜ್ಯ ನಿರ್ಮಾಣಕ್ಕೆ ನಾವೆಲ್ಲ ಒತ್ತು ಕೊಟ್ಟು ಕಾರ್ಯ ನಿರ್ಮಿಸಬೇಕಾಗಿದೆ. ರಾಮ ಭಕ್ತಿ - ರಾಷ್ಟ್ರ ಭಕ್ತಿಯ ಸಮನ್ವಯವಾದಾಗ ಇಡೀ ದೇಶ ಸುಭಿಕ್ಷೆ ಸಮೃದ್ಧಿ, ಶಾಂತಿ, ನೆಮ್ಮದಿಯನ್ನು ಕಾಣಲು ಸಾಧ್ಯ. ಅದಕ್ಕಾಗಿ ಎಲ್ಲರೂ ಶ್ರಮಿಸೋಣ ಎಂದು ಕರೆ ನೀಡಿದರು.

ಬಾಲರಾಮನ ಉತ್ಸವ ಮೂರ್ತಿಗೆ ಈ ಚಿನ್ನದ ಅಟ್ಟೆ ಪ್ರಭಾವಳಿಯನ್ನು ತೊಡಿಸಿ, ಅದನ್ನು ರಜತಪಲ್ಲಕ್ಕಿಯಲ್ಲಿಟ್ಟು ಪ್ರದಕ್ಷಿಣೆ ಮಾಡಿಸಲಾಯಿತು.

ಕಾರ್ಯಕ್ರಮದಲ್ಲಿ ವಿಹಿಂಪ ರಾಷ್ಟ್ರೀಯ ಕಾರ್ಯದರ್ಶಿ ಗೋಪಾಲ್ ಜಿ., ಶಾಸಕ ವೇದವ್ಯಾಸ ಕಾಮತ್, ಕಾಶೀಮಠದ ಪ್ರಮುಖರಾದ ರಾಘವೇಂದ್ರ ಕುಡ್ವ, ಸುರೇಂದ್ರ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.

1 ಕೆಜಿ ಚಿನ್ನದ ಈ ಸುಂದರ ಸ್ವರ್ಣ ಪ್ರಭಾವಳಿಯನ್ನು ಕೇವಲ ಏಳು ದಿನಗಳಲ್ಲಿ ಉಡುಪಿಯ ಪ್ರಸಿದ್ಧ ಸ್ವರ್ಣ ಜ್ಯುವೆಲ್ಲರ್ಸ್ ನವರು ನಿರ್ಮಿಸಿದ್ದು, ಸಂಸ್ಥೆಯ ಪಾಲುದಾರರಾದ ಗುಜ್ಜಾಡಿ ರಾಮದಾಸ ನಾಯಕ್ ಅವರೊಂದಿಗೆ ಪೇಜಾವರ ಶ್ರೀಗಳು ದೂರವಾಣಿ ಮೂಲಕ ಮಾತನಾಡಿ ಅಭಿನಂದಿಸಿ ರಾಮನ ವಿಶೇಷ ಅನುಗ್ರಹವನ್ನು ಪ್ರಾರ್ಥಿಸುವುದಾಗಿ ಹೇಳಿದರು.

* ರಜತ ಕಲಶಾಭಿಷೇಕ

ಪೇಜಾವರ ಶ್ರೀಗಳ ನೇತೃತ್ವದಲ್ಲಿ ಬಾಲರಾಮನಿಗೆ ನಡೆಯುತ್ತಿರುವ 48 ದಿನಗಳ ಮಂಡಲೋತ್ಸವದಲ್ಲಿ ಶನಿವಾರದಂದು ಬೆಂಗಳೂರಿನ ಪ್ರಸಿದ್ಧ ಉದ್ಯಮಿ, ವಿಧಾನ‌ಪರಿಷತ್ ಮಾಜಿ ಸದಸ್ಯ ದಯಾನಂದ ರೆಡ್ಡಿ, ಮಂಗಳೂರಿನ ರಾಮಚಂದ್ರ ಕುಡ್ವ ಅವರಿಂದ ರಾಮದೇವರಿಗೆ ರಜತ ಕಲಶಾಭಿಷೇಕ ಸೇವೆ ನೆರವೇರಿತು.‌

ಶನಿವಾರವೂ ಅಯೋಧ್ಯೆಯಲ್ಲಿ ಜನಸಾಗರವೇ ಹರಿದು ಬರುತ್ತಿದ್ದು, ನಾಲ್ಕು ಲಕ್ಷಕ್ಕೂ ಅಧಿಕ ಭಕ್ತರು ರಾಮದರ್ಶನ ಪಡೆದರು.