ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ಪಟ್ಟಣದ ಗ್ರಾಮ ದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವದ ಮೊದಲ ದಿನವಾದ ಸೋಮವಾರ ಭಕ್ತಾದಿಗಳು ತಡರಾತ್ರಿ ಜಾಗರ ಸಮರ್ಪಣೆ ಮಾಡಿದರು.ಶ್ರೀ ಬೆಟ್ಟಳಿ ಮಾರಮ್ಮ ಜಾತ್ರಾ ಮಹೋತ್ಸವ ಹಿನ್ನೆಲೆ ಸೋಮವಾರ ಮುಂಜಾನೆಯಿಂದಲೇ ದೇವಿಗೆ ಸಾಂಪ್ರದಾಯವಾಗಿ ಪ್ರಧಾನ ಅರ್ಚಕ ರಾಜೋಜಿ ರಾವ್ ಹಾಗೂ ಜಯಂತ್ ರಾವ್ ಶಿಂಧೆ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಜಾತ್ರಾ ಮಹೋತ್ಸವದ ಮೊದಲನೇ ದಿನವಾದ ಸೋಮವಾರ ಹೊಸ ಉಡುಪುಗಳನ್ನು ತೊಟ್ಟು ಮಹಿಳೆಯರು, ಚಿಕ್ಕ ಮಕ್ಕಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಮೇತ ವಾದ್ಯ ಮೇಳ, ಛತ್ರಿ ಚಾಮರದೊಂದಿಗೆ, ಮಾರಿಕುಣಿತ ಹಾಕುವುದರ ಮೂಲಕ ಮೆರವಣಿಗೆ ಸಮೇತ ದೇವಸ್ಥಾನಕ್ಕೆ ಆಗಮಿಸಿ ಜಾಗರ ಸಮರ್ಪಣೆ ಮಾಡಿದರು.
ಏನಿದು ಜಾಗರ?:ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದ ಒಂದು ವಾರದ ನಂತರ ದ್ವಿದಳ ಧಾನ್ಯಗಳಾದ ಜೋಳ, ಅವರೆ ಸೇರಿದಂತೆ ಇನ್ನಿತರ ದವಸ ಧಾನ್ಯಗಳನ್ನು ಮರಳು ಹಾಗೂ ಸಗಣಿಯ ಜೂತೆ ಬೆರೆಸಿ ನೀರುಣಿಸಿ ಪೂಜೆ ಸಲ್ಲಿಸುವುದರ ಮೂಲಕ ಬೆಳೆದ ಪೈರುಗಳನ್ನು (ಜಾಗರ) ಸಮರ್ಪಣೆ ಮಾಡುತ್ತಾರೆ. ನಾಲ್ಕು ದಿನಗಳ ಕಾಲ ನಡೆಯುವ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವ ಪ್ರಯುಕ್ತ ಸೋಮವಾರ ದೇವಸ್ಥಾನದ ಆವರಣ ಮತ್ತು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ದೀಪ ಅಲಂಕಾರ, ಹಾಗೂ ವಿವಿಧ ಬಗೆಯ ಫಲ ಪುಷ್ಪಗಳಿಂದ ಅಲಂಕಾರ ಮಾಡಲಾಗಿದೆ.