ಕಲಿಯುಗದ ಕಾಮಧೇನು, ನಂಬಿದ ಭಕ್ತರ ಕಲ್ಪತರು ಶ್ರೀರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ ವಿದ್ಯುಕ್ತವಾಗಿ ಗುರುವಾರ ಆರಂಭ ಕಂಡಿತು.
ಕನ್ನಡಪ್ರಭ ವಾರ್ತೆ ರಾಯಚೂರು
ಕಲಿಯುಗದ ಕಾಮಧೇನು, ನಂಬಿದ ಭಕ್ತರ ಕಲ್ಪತರು ಶ್ರೀರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ ವಿದ್ಯುಕ್ತವಾಗಿ ಗುರುವಾರ ಆರಂಭ ಕಂಡಿತು.ಸುಕ್ಷೇತ್ರ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆರಾಧನಾ ಮಹೋತ್ಸವ ಪ್ರಯುಕ್ತ ಆಯೋಜಿಸಿರುವ ಸಪ್ತರಾತ್ರೋತ್ಸವಕ್ಕೆ ಪೀಠಾಧಿಪತಿಗಳಾದ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಚಾಲನೆ ನೀಡಿದರು.
ಸಪ್ತರಾತ್ರೋತ್ಸವದ ಮೊದಲ ದಿನದ ಮುಂಜಾನೆ ಶ್ರೀಮಠದಲ್ಲಿ ವಿಶೇಷ ಪೂಜಾ-ಪುನಸ್ಕಾರಗಳು, ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಇದೇ ವೇಳೆ ತಿರುಪತಿ ತಿರುಮಲ ದೇವಸ್ಥಾನಂ(ಟಿಟಿಡಿ ) ನಿಂದ ತರಲಾಗಿದ್ದ ಶ್ರೀನಿವಾಸದೇವರ ಶೇಷವಸ್ತ್ರಗಳನ್ನು ಶ್ರೀಗುರುರಾಯರಿಗೆ ಸಮರ್ಪಿಸುವ ಸಮಾರಂಭವು ಶ್ರೀಮಠದ ಸಂಪ್ರದಾಯದಂತೆ ನಡೆಯಿತು.ತಿರುಮಲ ತಿರುಪತಿಯಿಂದ ಟಿಟಿಡಿಯ ಕಾರ್ಯನಿರ್ವಾಹಕ ಅಧಿಕಾರಿ ಮುದ್ದಾಡ ರವಿಚಂದ್ರ ಅವರ ನೇತೃತ್ವದಲ್ಲಿ ಆಗಮಿಸಿದ್ದ ಅಧಿಕಾರಿಗಳು, ವಿದ್ವಾಂಸರು ಹಾಗೂ ಪಂಡಿತರ ತಂಡವು ತಮ್ಮೊಡನೆ ತಂದ ಕಲಿಯುಗ ಪ್ರತ್ಯೇಕ್ಷ ದೈವ ಶ್ರೀವೆಂಕಟೇಶ್ವರ ದೇವರ ಶೇಷವಸ್ತ್ರಗಳನ್ನು ಶ್ರೀಮಠ ಪಂಡಿತರು, ಅಧಿಕಾರಿಗಳು ಮಠದ ಸಂಪ್ರದಾಯದಂತೆ ವಾದ್ಯ-ಮೇಳಗಳೊಂದಿಗೆ ಸ್ವಾಗತಿಸಿದರು.
ನಂತರ ಮಧ್ವ ಕಾರಿಡಾರ್ ಮುಖಾಂತರ ಗ್ರಾಮದೇವತೆ ಶ್ರೀಮಂಚಲಮ್ಮ ದೇವಿಗೆ ಸೀರೆ ಸಮರ್ಪಣೆ ಮಾಡಿ ವಿಶೇಷ ಪೂಜೆ ಸಲ್ಲಿಸಿದ ಟಿಟಿಡಿ ಅಧಿಕಾರಿಗಳು, ಶ್ರೀಮಠದ ಪ್ರಾಕಾರದಲ್ಲಿ ಪೀಠಾಧಿತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರಿಗೆ ಶೇಷವಸ್ತ್ರಗಳನ್ನು ಹಸ್ತಾಂತರಿಸಿದರು. ಈ ವೇಳೆ ಶ್ರೀಪಾದಂಗಳವರು ಭಕ್ತಿಯಿಂದ ತಲೆಯಮೇಲೆ ಶೇಷವಸ್ತ್ರಗಳನ್ನು ಹೊತ್ತುಕೊಂಡು ಶ್ರೀಗುರುರಾಯರ ಮೂಲಬೃಂದಾವದದ ಮುಂದಿಟ್ಟು ಪೂಜೆ ಸಲ್ಲಿಸಿ ರಾಯರಿಗೆ ಸಮರ್ಪಣೆ ಮಾಡಿದರು.ನಂತರ ಶ್ರೀಮಠದ ಪ್ರಾಕಾರದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಟಿಟಿಡಿಯ ಕಾರ್ಯನಿರ್ವಾಹಕ ಅಧಿಕಾರಿ ಮುದ್ದಾಡ ರವಿಚಂದ್ರ ಅವರು ಮಾತನಾಡಿ, ಅನಾದಿ ಕಾಲದಿಂದಲೂ ತಿರುಮಲ ತಿರುಪತಿ ದೇವಸ್ಥಾನಂ ಹಾಗೂ ಮಂತ್ರಾಲಯದ ಮಠದ ನಡುವೆ ಇರುವಂತಹ ಆಧ್ಯಾತ್ಮಿಕ ಅನುಬಂಧಕ್ಕೆ ಶೇಷವಸ್ತ್ರ ಸಮರ್ಪಣೆಯು ಪ್ರತ್ಯೇಕ ಮೆರುಗನ್ನು ನೀಡುವ ವಿಶಿಷ್ಟ ಸಂಪ್ರದಾಯವಾಗಿದೆ ಎಂದು ಹೇಳಿದರು.
ಇದೇ ವೇಳೆ ಟಿಟಿಡಿಯ ಅಧಿಕಾರಿ, ಪಂಡಿತರ ತಂಡಕ್ಕೆ ಶ್ರೀಗಳು ಫಲಮಂತ್ರಾಕ್ಷತೆ ಮತ್ತು ಸ್ಮರಣಿಕೆಯನ್ನು ನೀಡಿ ಆಶೀರ್ವದಿಸಿದರು.ಈ ಸಂದರ್ಭದಲ್ಲಿ ಟಿಟಿಡಿಯ ವಿದ್ವಾಂಸರಾದ ಅನಂತಾಚಾರ್ಯರು, ಗುರುರಾಜ ಆಚಾರ್ಯರು, ಶ್ರೀಮಠದ ವ್ಯವಸ್ಥಾಪಕ ಎಸ್.ಕೆ ಶ್ರೀನಿವಾಸರಾವ್, ಪಂಡಿತರು, ವಿದ್ವಾಂಸರು, ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಹಾಗೂ ಭಕ್ತರು ಭಾಗವಹಿಸಿದ್ದರು.
ಬ್ರಮ್ಮೋತ್ಸವ ಮಾದರಿಯಲ್ಲಿ ಸಪ್ತರಾತ್ರೋತ್ಸವ: ಶ್ರೀರಾಯಚೂರು: ತಿರುಮಲ-ತಿರುಪತಿಯ ಶ್ರೀವೆಂಕಟೇಶ್ವರ ದೇವರಿಗೆ ನವರಾತ್ರಿ ಸಮಯದಲ್ಲಿ ಆಚರಿಸುವ ಭ್ರಮ್ಮೋತ್ಸವ ಮಾದರಿಯಲ್ಲಿ ಶ್ರೀಗುರುಸಾರ್ವಭೌಮರ ಆರಾಧನಾ ಮಹೋತ್ಸವದಲ್ಲಿ ಸಪ್ತರಾತ್ರೋತ್ಸವನ್ನು ಆಯೋಜಿಸುತ್ತಾ ಬರಲಾಗುತ್ತಿದೆ ಎಂದು ಪೀಠಾಧಿಪತಿಗಳಾದ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ನುಡಿದರು.
ಟಿಟಿಡಿಯಿಂದ ಆಗಮಿಸಿದ್ದ ಶೇಷವಸ್ತ್ರವನ್ನು ರಾಯರಿಗೆ ಸಮರ್ಪಿಸಿ ಆಶೀರ್ವಚನ ನೀಡಿದ ಶ್ರೀಗಳು, ಟಿಟಿಡಿಯಿಂದ ಸನಾತನ ಹಿಂದೂ ಧರ್ಮದ ಪ್ರಚಾರಕ್ಕಾಗಿ ಸ್ಥಾಪಿಸಲ್ಪಟ್ಟಿರುವ ದಾಸಸಾಹಿತ್ಯ ಪ್ರಾಜೆಕ್ಟ್ ಮಾದರಿಯಲ್ಲಿಯೇ ಶ್ರೀಮಠದಿಂದ ಶ್ರೀರಾಘವೇಂದ್ರ ಸ್ವಾಮಿಗಳ ದಾಸಸಾಹಿತ್ಯ ಪ್ರೊಜೆಕ್ಟ್ ಸ್ಥಾಪಿಸಿ ದೇಶದಾದ್ಯಂತ ಧರ್ಮ ಪ್ರಚಾರ, ಭಜನೆ ಹಾಗೂ ಶಿಕ್ಷಣ ಶಿಬಿರಗಳನ್ನು ಆಯೋಜಿಸುತ್ತಾ ಬರಲಾಗುತ್ತಿದೆ. ಶ್ರೀಮಠ ಹಾಗೂ ತಿರುಪತಿಗೆ ಸಾವಿರಾರು ವರ್ಷಗಳಿಂದ ಅತ್ಯುತ್ತಮ ಬಾಂಧವ್ಯವಿದ್ದು, ನಿರಂತರವಾಗಿ ಸಹಕಾರ, ಸಹಾಯ ಮಾಡುತ್ತಲೇ ಬರುತ್ತಿದೆ. ಶ್ರೀ ವೆಂಕಟೇಶ್ವರ ಸ್ವಾಮಿಗಳ ಆಶೀರ್ವಾದ ಹಾಗೂ ಶ್ರೀಗುರುರಾಯರ ಅನುಗ್ರಹದ ಫಲವಾಗಿಯೇ ಸುಕ್ಷೇತ್ರದಲ್ಲಿ ಇಷ್ಟೆಲ್ಲ ಅಭಿವೃದ್ಧಿ ಕೆಲಸಗಳು ಸಾಗಿವೆ ಎಂದರು.